ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಸಾವಯವ ಕೃಷಿ ಉಳಿಸುವ ಪ್ರಯತ್ನಕ್ಕೆ ಜನರು ಮಾತ್ರವಲ್ಲ, ಸರ್ಕಾರವೂ ಒತ್ತು ನೀಡಬೇಕು ಎಂದು ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಒತ್ತಾಯಿಸಿದ್ದಾರೆ.ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು, ಕೇಶವ ಸ್ಮೃತಿ ಸಂವರ್ಧನ ಸಮಿತಿ, ಶ್ರೀ ಸರಸ್ವತಿ ಚಾರಿಟೆಬಲ್ ಟ್ರಸ್ಟ್, ಕಂದಮೂಲ ಬಳಗ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಎರಡು ದಿನಗಳ ಕಾಲ ನಗರದ ಸಂಘನಿಕೇತನದಲ್ಲಿ ನಡೆದ ಪ್ರಥಮ ಅಂತಾರಾಜ್ಯ ಗೆಡ್ಡೆ ಗೆಣಸು ಮತ್ತು ಸೊಪ್ಪು ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಕೃಷಿ ಹಾಗೂ ಕೃಷಿಕನನ್ನೂ ಮರೆತಿದ್ದೇವೆ. ಕೃಷಿಯನ್ನು ಲಾಭದಾಯಕವಾಗಿ ನೋಡುವ ಕಾಲ ಬಂದಿದೆ. ಆದರೆ ಆರೋಗ್ಯ ಉಳಿಯಬೇಕಾದರೆ ರಾಸಾಯನಿಕವನ್ನು ದೂರವಿಟ್ಟು ಸಾವಯವ ಕೃಷಿಯತ್ತ ಮುಖ ಮಾಡಬೇಕು. ಸರ್ಕಾರ ಕೂಡ ಈ ಪ್ರಯತ್ನಕ್ಕೆ ಒತ್ತು ನೀಡಬೇಕು ಎಂದು ಹೇಳಿದರು.ಆಯಾ ಋತುಗಳಿಗೆ ಸಿಗುವ ಆಹಾರಗಳನ್ನು ಸೇವನೆ ಮಾಡಬೇಕು ಎಂದು ಸಲಹೆ ನೀಡಿದ ಸ್ವಾಮೀಜಿ, ಈಗ ಮೊಬೈಲ್ ನೋಡುತ್ತಾ ಆಹಾರ ತಿನ್ನುವ ಕೆಟ್ಟ ಪದ್ಧತಿ ಆರಂಭವಾಗಿದೆ. ಮನಸ್ಸಿಗೂ ಆಹಾರಕ್ಕೂ ಸಂಬಂಧವೇ ಇಲ್ಲದಂತಾಗಿದೆ. ಇದಾಗಬಾರದು. ಗಡ್ಡೆ ಗೆಣಸು ಮರೆತರೆ ಹೊಟ್ಟೆಯೊಳಗೆ ಗೆಡ್ಡೆಯಾಗಬಹುದು. ಆದ್ದರಿಂದ ಸಾವಯವ ಕೃಷಿ ಮಾಡುವ ಸಂಕಲ್ಪವನ್ನು ಎಲ್ಲರೂ ಮಾಡಬೇಕು ಎಂದು ಕರೆ ನೀಡಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಬ್ರಿಟಿಷರು ಬಂದ ನಂತರ ಅವರ ಮಾತುಗಳನ್ನು ನಂಬಿ ಗಡ್ಡೆಗೆಣಸು, ಸೊಪ್ಪು ತಿನ್ನುವುದನ್ನು ಬಿಟ್ಟೆವು. ನಮ್ಮ ಆಹಾರ ಪದ್ಧತಿ, ಸಂಸ್ಕೃತಿಯನ್ನೂ ಬ್ರಿಟಿಷರು ಕಸಿದರು. ಅವರ ವೈಭವದ ಜೀವನಕ್ಕೆ ನಮ್ಮ ದೇಶದ ಸಸ್ಯ ಸಂಪತ್ತನ್ನು ನಾಶ ಮಾಡಿ ಬಡತನಕ್ಕೆ ತಳ್ಳಿದರು ಎಂದರು.ದೊಡ್ಡ ಕಂಪನಿಯ ವಸ್ತುಗಳ ಮಾರಾಟಕ್ಕಾಗಿ ತೆಂಗಿನೆಣ್ಣೆಯಿಂದ ಕ್ಯಾನ್ಸರ್ ಬರುತ್ತೆ, ತಾಯಿ ಎದೆಹಾಲು ನೀಡಬಾರದು ಎಂಬಿತ್ಯಾದಿಗಳನ್ನು ನಂಬಿಸಿದರು. ಹಂತಹಂತವಾಗಿ ನಮ್ಮನ್ನು ಮೋಸ ಮಾಡುತ್ತಾ ಬಂದಿದ್ದಾರೆ ಎಂದರು.ಸಾಧಕರಿಗೆ ಸನ್ಮಾನ: ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ, ಗಡ್ಡೆ ಗೆಣಸು ಮೇಳದಲ್ಲಿ ಪ್ರಧಾನ ಆಕರ್ಷಣೆಯಾಗಿದ್ದ ಟ್ಯೂಬರ್ ಮ್ಯಾನ್ ಆಫ್ ಕೇರಳ ಎಂದೇ ಖ್ಯಾತರಾದ ಶಾಜಿ, ವೈವಿಧ್ಯಮಯ 200ಕ್ಕೂ ಅಧಿಕ ಗೆಡ್ಡೆಗಳನ್ನು ಬೆಳೆಯುತ್ತಿರುವ ಜೋಸೆಫ್ ರೆಜಿ, ಸಾವಯವ ಕೃಷಿಯಲ್ಲಿ ಸಾಧನೆಗೈದ ಸುಪ್ರೀತ್ ಪಿರಿಯಾಪಟ್ಟಣ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಿವಿಧ ರಾಜ್ಯಗಳಿಂದ ಬಂದ ಕೃಷಿಕರನ್ನೂ ಗೌರವಿಸಲಾಯಿತು. ಸೊಪ್ಪು ಬೆಳೆಸುವ ಸ್ಪರ್ಧೆಯಲ್ಲಿ ವಿಜೇತರಾದ ಶ್ರೀಹರಿ ದರ್ಬೆ ಪ್ರಥಮ, ದೇವಿಕಾ ದ್ವಿತೀಯ, ಸರೋಜಾ ಪ್ರಕಾಶ್ ತೃತೀಯ ಅವರಿಗೆ ಬಹುಮಾನ ವಿತರಿಸಲಾಯಿತು.ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ವೇದವ್ಯಾಸ ಕಾಮತ್, ಮೇಯರ್ ಮನೋಜ್ ಕುಮಾರ್ ಕೋಡಿಕಲ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ, ಮೊತ್ತ ಮೊದಲ ಸಾವಯವ ಬೀಜ ಉತ್ಪಾದಕ ಸಂಸ್ಥೆಯನ್ನು ಸ್ಥಾಪಿಸಿದ ಕೃಷ್ಣ ಪ್ರಸಾದ್ ಗೋವಿಂದ, ಡಾ.ಅಣ್ಣಯ್ಯ ಕುಲಾಲ್, ಮೇಳ ಸಮಿತಿಯ ಪ್ರಭಾಕರ ಶರ್ಮ, ಪ್ರಣವ ಸೌಹಾರ್ದ ಸಹಕಾರಿ ಸಂಘದ ಜಿ. ಆರ್. ಪ್ರಸಾದ್, ಅಡ್ಡೂರು ಕೃಷ್ಣ ರಾವ್ ಮತ್ತಿತರರು ಇದ್ದರು. ಸಾವಯವ ಕೃಷಿಕ ಬಳಗದ ರತ್ನಾಕರ ಕುಳಾಯಿ ಸ್ವಾಗತಿಸಿದರು. ಮಾಯಾ ಕೆ. ನಿರೂಪಿಸಿದರು.ಸಾವಿರಾರು ಮಂದಿ ಭಾಗಿಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಆಯೋಜಿಸಿದ್ದ ಎರಡು ದಿನಗಳ ಅಂತಾರಾಜ್ಯ ಮಟ್ಟದ ಗಡ್ಡೆ ಗೆಣಸು ಮೇಳದಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು. ಮೇಳದಲ್ಲಿ 150ಕ್ಕೂ ಅಧಿಕ ಬಗೆಯ ಸೊಪ್ಪು ತರಕಾರಿಗಳು, 350ಕ್ಕೂ ಅಧಿಕ ಬಗೆಯ ಗಡ್ಡೆ ಗೆಣಸುಗಳನ್ನು ಗ್ರಾಹಕರು ಖರೀದಿಸಿದ್ದು, ಮೇಳ ಮುಗಿಯುವ ಮೊದಲೇ ಅನೇಕ ಸ್ಟಾಲ್‌ಗಳು ಖಾಲಿಯಾಗಿದ್ದವು. ಭಾನುವಾರ ಬೆಳಗ್ಗಿನಿಂದಲೇ ಗ್ರಾಹಕರ ದಂಡು ಕಂಡುಬಂದಿದ್ದು, ಸ್ಟಾಲ್‌ಗಳಲ್ಲಿ ಕಾಲಿಡಲು ಜಾಗವಿಲ್ಲದಷ್ಟು ದಟ್ಟಣೆ ಉಂಟಾಗಿತ್ತು.