ಸರ್ಕಾರಿ ನೌಕರರಿಗೆ ಸಮಾಜದ ಋಣತೀರಿಸಿದ ಆತ್ಮತೃಪ್ತಿಯಿರಲಿ: ಚಂದ್ರಪ್ಪ

| Published : Jan 16 2024, 01:49 AM IST

ಸರ್ಕಾರಿ ನೌಕರರಿಗೆ ಸಮಾಜದ ಋಣತೀರಿಸಿದ ಆತ್ಮತೃಪ್ತಿಯಿರಲಿ: ಚಂದ್ರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರ ಬದುಕಿನಲ್ಲಿ ಸರ್ಕಾರಿ ನೌಕರರದು ಅತ್ಯುತ್ತಮವಾದ ಪಾತ್ರವಿದೆ. ಇರುವಷ್ಟು ಸಮಯವನ್ನು ಜನಸಾಮಾನ್ಯರಿಗಾಗಿ ಮುಡಿಪಿಡಲು ಶಾಸಕ ಡಾ.ಎಂ.ಚಂದ್ರಪ್ಪ ಕರೆ ನೀಡಿದರು.

ಹೊಳಲ್ಕೆರೆ ಕನ್ನಡಪ್ರಭ ವಾರ್ತೆ

ಸರ್ಕಾರಿ ನೌಕರಿಯಲ್ಲಿದ್ದಾಗ ಉತ್ತಮ ಕೆಲಸ ಮಾಡಿ ಸಮಾಜದ ಋಣ ತೀರಿಸಿದ್ದೇನೆಂಬ ಆತ್ಮತೃಪ್ತಿ ನಿಮ್ಮಲ್ಲಿರಬೇಕೆಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.ಪಟ್ಟಣದಲ್ಲಿರುವ ಸ್ನೇಹ ಕಂಫರ್ಟ್‌ನಲ್ಲಿ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘ ಹೊಳಲ್ಕೆರೆ ಶಾಖೆ ವತಿಯಿಂದ ನಡೆದ ನಿವೃತ್ತ ನೌಕರರ ದಿನಾಚರಣೆ ಹಾಗೂ ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.

ಸಾರ್ವಜನಿಕರ ಬದುಕಿನಲ್ಲಿ ನಿಮ್ಮದು ಅತ್ಯುತ್ತಮವಾದ ಪಾತ್ರವಿದೆ. ಭರಮಸಾಗರದಲ್ಲಿ ಮೊದಲ ಬಾರಿಗೆ ಚುನಾವಣೆಗೆ ನಿಂತಾಗ ನಾನು ಗೆದ್ದು ಶಾಸಕನಾಗಲು ನಿವೃತ್ತ ನೌಕರರು ಸಾಕಷ್ಟು ಸಹಕರಿಸಿದ್ದಾರೆ. 1994ರಲ್ಲಿ ಮೊದಲ ಬಾರಿಗೆ ಶಾಸಕನಾಗಿದ್ದೆ. ಅಲ್ಲಿಂದ ಇಲ್ಲಿಯತನಕ ಅನೇಕ ಐ.ಎ.ಎಸ್. ಅಧಿಕಾರಿಗಳ ಒಡನಾಟ ದಲ್ಲಿದ್ದೇನೆ. ಈಗ ನಾನು ವಿರೋಧ ಪಕ್ಷದ ಶಾಸಕನಾಗಿದ್ದರೂ ಏನೇ ಕೆಲಸ ಹೇಳಿದರು ಚಾಚೂ ತಪ್ಪದೆ ಮಾಡುತ್ತಾರೆ. ನನ್ನ ಕ್ಷೇತ್ರದಲ್ಲಿ ಯಾವ ನೌಕರ, ಅಧಿಕಾರಿ ಯ ಮೇಲೆ ಒತ್ತಡ ಹೇರಿಲ್ಲ. ಸಲೀಸಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಎಷ್ಟು ದಿನ ಬದುಕುತ್ತೇವೆನ್ನುವುದು ಮುಖ್ಯವಲ್ಲ. ಇರುವಷ್ಟು ಸಮಯದಲ್ಲಿ ನಾಳೆ ಮಾಡೋಣ ಎನ್ನುವ ಕೆಲಸವನ್ನು ಇಂದು, ಈಗಲೇ ಏಕೆ ಮಾಡಬಾರದು? ಎನ್ನುವ ಮನಸ್ಸು ನೌಕರರಲ್ಲಿರಬೇಕು. ಭರಮಸಾಗರ ಕ್ಷೇತ್ರದಲ್ಲಿ ನಾನು ಕೈಗೊಂಡ ಅಭಿವೃದ್ದಿ ಕೆಲಸಗಳೇ ಐದನೇ ಬಾರಿಗೆ ಶಾಸಕನಾಗಲು ಕಾರಣ ಎಂದು ಸ್ಮರಿಸಿದರು.

ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎ.ಸಿ ಗಂಗಾಧರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು . ನಿ. ನೌ. ಸಂಘ ಗೌರವಾಧ್ಯಕ್ಷ ಹೆಚ್.ಶಿವಲಿಂಗಪ್ಪ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎನ್.ಶಿವಮೂರ್ತಿ, ನಿ. ನೌ. ಜಿಲ್ಲಾ ಕಾರ್ಯದರ್ಶಿ ರಂಗಪ್ಪ , ಹಿರಿಯೂರು ನಿವೃತ್ತ ನೌಕರರ ಸಂಘ ಅಧ್ಯಕ್ಷ ,ಏಕಾಂತಪ್ಪ ಮಾತನಾಡಿದರು. ಕಾರ್ಯದರ್ಶಿ ಡಿ.ಗೋಪಾಲಪ್ಪ ಸಂಘದ ಕೋಶಾಧ್ಯಕ್ಷ ಬಿ.ಮಲ್ಲೇಶಪ್ಪ ಜಮಾ ಖರ್ಚು ವರದಿ ಸಭೆಗೆ ಮಂಡಿಸಿದರು.

2008ರಲ್ಲಿ ನಿವೃತ್ತ ಹೊಂದಿದ ನೌಕರರನ್ನು ಸನ್ಮಾನಿಸಲಾಯಿತು. ನಿವೃತ್ತ ನೌಕರರ ಸಂಘದ ಪಧಾಧಿಕಾರಿಗಳು ಹಾಗು ಸರ್ಕಾರಿ ನೌಕರರ ಸಂಘದ ಪದಾಧಿ ಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಏಳನೇ ವೇತನ ಆಯೋಗ ರಚನೆಗೆ ಮನವಿ

ಹೊಳಲ್ಕೆರೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಲೋಕೇಶ್ ಮಾತನಾಡಿ, ಏಳನೇ ವೇತನ ಆಯೋಗ ರಚನೆ ಹಾಗು ಹಳೇ ಪಿಂಚಿಣಿ ಯೋಜನೆ ಜಾರಿಗೊಳಿಸುವುದು, ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಸೇರಿದಂತೆ ಸರ್ಕಾರಿ ನೌಕರರ ನ್ಯಾಯಾಯುತ ಬೇಡಿಕೆಗಳನ್ನು ಜಾರಿಗೊಳಿಸುವಂತೆ ಮುಖ್ಯ ಮಂತ್ರಿಗಳಿಗೆ ಹೊಳಲ್ಕೆರೆ ತಾಲೂಕಿನ ನೌಕರರ ಪರವಾಗಿ ಒತ್ತಡ ಹಾಗೂ ಶಿಫಾರಸ್ಸು ಮಾಡುವಂತೆ ಹೊಳಲ್ಕೆರೆ ವಿಧಾನ ಸಭಾ ಕ್ಷೇತ್ರ ಶಾಸಕ ಡಾ.ಎಂ. ಚಂದ್ರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.