ಸಮಾಜದ ಉನ್ನತಿಗಾಗಿ ಸರ್ಕಾರದ ನಿಧಿಗಳು ಸದ್ಬಳಕೆಯಾಗಲಿ

| Published : Jan 03 2024, 01:45 AM IST

ಸಮಾಜದ ಉನ್ನತಿಗಾಗಿ ಸರ್ಕಾರದ ನಿಧಿಗಳು ಸದ್ಬಳಕೆಯಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದ ನಿಧಿಗಳು ಸಮಾಜದ ಉನ್ನತಿಗಾಗಿ ಸದ್ಬಳಕೆಯಾಗಬೇಕಿದ್ದು, ಮಠ, ಮಾನ್ಯಗಳ ಅಭಿವೃದ್ಧಿಗೆ ನೀಡಿದ ಅನುದಾನ ಶೈಕ್ಷಣಿಕ ಪ್ರಗತಿಗೆ ಪ್ರೇರಕವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಸರ್ಕಾರದ ನಿಧಿಗಳು ಸಮಾಜದ ಉನ್ನತಿಗಾಗಿ ಸದ್ಬಳಕೆಯಾಗಬೇಕಿದ್ದು, ಮಠ, ಮಾನ್ಯಗಳ ಅಭಿವೃದ್ಧಿಗೆ ನೀಡಿದ ಅನುದಾನ ಶೈಕ್ಷಣಿಕ ಪ್ರಗತಿಗೆ ಪ್ರೇರಕವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಸ್ಥಳೀಯ ಬೆಟಸೂರಮಠದ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾದ ₹10 ಲಕ್ಷಗಳ ಸಮುದಾಯಭವನ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮಠ-ಮಾನ್ಯಗಳಲ್ಲಿ ನಡೆಯುತ್ತಿರುವ ಜ್ಞಾನದಾಸೋಹದಿಂದ ನಾಡಿನಲ್ಲಿ ಶೇ.75ರಷ್ಟು ಶೈಕ್ಷಣಿಕ ಪ್ರಗತಿಯನ್ನು ಕಾಣಲಾಗುತ್ತಿದೆ ಎಂದರು.

ಸಮಾಜದಲ್ಲಿ ಪ್ರತಿಯೊಬ್ಬ ಮನುಷ್ಯನಿಗೆ ಅನ್ನ, ಆರೋಗ್ಯ, ಶಿಕ್ಷಣ ಹಾಗೂ ಆಶ್ರಯವನ್ನು ನೀಡುವುದು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದ್ದು, ಆ ನಿಟ್ಟಿನಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ವಿಕಸಿತ ಭಾರತವನ್ನು ನಿರ್ಮಿಸುವುದು ಮೋದಿಯವರ ಕನಸಾಗಿದ್ದು, ಸರ್ಕಾರದ ಅನೇಕ ಯೋಜನೆಗಳು ಜನಸಾಮಾನ್ಯರ ಗಮನಕ್ಕೆ ಬರದಾಗಿರುವುದರಿಂದ ಆ ಯೋಜನೆಗಳನ್ನು ಪ್ರತಿಯೊಬ್ಬರಿಗೆ ತಲುಪಿಸುವಂತ ಕಾರ್ಯವನ್ನು ಮಾಡಬೇಕಿದೆ ಎಂದರು.

ಬಿಜೆಪಿ ಮುಖಂಡ ವಿರುಪಾಕ್ಷ ಮಾಮನಿ ಮಾತನಾಡಿ, ಸರ್ಕಾರಗಳು ಬದಲಾದಂತೆ ಆದ್ಯತೆಗಳು ಸಹ ಬದಲಾಗುತ್ತಿದ್ದು, ಕಳೆದ ಸರ್ಕಾರದಲ್ಲಿ ಮಂಜೂರಾದ ಅನುದಾನವನ್ನು ನೀಡುವಲ್ಲಿ ಈಗಿನ ಕಾಂಗ್ರೆಸ್ ಸರ್ಕಾರ ನಿರ್ಲಕ್ಷವಹಿಸುತ್ತಿದೆ. ದೇವಸ್ಥಾನಗಳಿಗೆ ನೀಡಿದಂತ ಅನುದಾನವನ್ನು ಸಹ ಕಾಂಗ್ರೆಸ್ ಸರ್ಕಾರ ತಡೆಹಿಡಿಯುವ ಪ್ರಯತ್ನದಲ್ಲಿದೆ ಎಂದು ದೂರಿದರು.

ರತ್ನಾ ಮಾಮನಿ, ಜಗದೀಶ ಶಿಂತ್ರಿ, ನ್ಯಾಯವಾದಿ ಬಿ.ವಿ.ಮಲಗೌಡರ ಮಾತನಾಡಿ, ಬೆಟಸೂರಮಠ ಅನೇಕರಿಗೆ ಆಶ್ರಯ ನೀಡಿದ ಮಠವಾಗಿದ್ದು, ಇಲ್ಲಿ ಅಭಿವೃದ್ಧಿ ಕಾರ್ಯಗಳು ಅತ್ಯವಶ್ಯಕವಾಗಿದೆ ಎಂದರು.

ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಬೆಟಸೂರಮಠದ ಅಜ್ಜಯ್ಯಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಡಾ.ಎನ್.ಸಿ.ಬೆಂಡಿಗೇರಿ, ನಯನಾ ಭಸ್ಮೆ, ಐ.ಪಿ.ಪಾಟೀಲ, ಈರಣ್ಣ ಚಂದರಗಿ, ಬಿ.ವಿ.ಬಿ ನರಗುಂದ, ಈರಪ್ಪ ಬಟಕುರ್ಕಿ, ಪುರಸಭೆ ಸದಸ್ಯರಾದ ಅರ್ಜುನ ಅಮ್ಮೋಜಿ, ವೀರೇಶ ಪ್ರಭುನವರ, ಮೌಲಸಾಬ ತಬ್ಬಲಜಿ ಹಾಗೂ ವಿರುಪಾಕ್ಷ ಹೆರಕಲ್ಲ, ಬಸವರಾಜ ಬಟಕುರ್ಕಿ ಮತ್ತು ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.