ಸರ್ಕಾರ ಗ್ರಾಪಂಗಳಿಗೆ ಅನುದಾನ ನೀಡಲಿ

| Published : Jul 30 2024, 12:38 AM IST

ಸಾರಾಂಶ

ಅಭಿವೃದ್ಧಿ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಸರ್ಕಾರದಿಂದ ಅನುದಾನ ಬಂದಿಲ್ಲ, ಆದರಿಂದ ಯಾವ ಅಭಿವೃದ್ಧಿ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ

ನರಗುಂದ:ಸರ್ಕಾರ ಗ್ರಾಮೀಣ ಭಾಗದ ಗ್ರಾಪಂಗಳಿಗೆ ಅನುದಾನ ನೀಡದ ಹಿನ್ನೆಲೆ ಅಭಿವೃದ್ಧಿ ಕುಂಠಿತಗೊಂಡಿದೆ. ಆದರಿಂದ ಸರ್ಕಾರ ಶೀಘ್ರ ಗ್ರಾಮೀಣ ಭಾಗಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ರೈತ ಸೇನಾ ಸಂಘಟನೆ ರಾಜ್ಯ ಕಾರ್ಯದರ್ಶಿ ಎಚ್‌. ಬಿ.ಜೋಗಣ್ಣವರ ಹೇಳಿದರು.

ಅವರು 3297 ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದಿರುವುದರಿಂದ ಮಧ್ಯಮ ವರ್ಗ ಹಾಗೂ ಬಡ ವರ್ಗದವರಿಗೆ ಅನುಕೂಲವಾಗಿದೆ. ಆದರೆ ಸರ್ಕಾರ ಕಳೆದ ಹಲವು ದಿನಗಳಿಂದ ಗ್ರಾಮೀಣ ಭಾಗದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡದ್ದರಿಂದ ಗ್ರಾಮಗಳಲ್ಲಿ ಕುಡಿವ ನೀರು, ಚರಂಡಿ, ಸ್ವಚ್ಛತೆ ಮರೀಚಿಕೆಯಾಗಿದೆ. ಅಭಿವೃದ್ಧಿ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಸರ್ಕಾರದಿಂದ ಅನುದಾನ ಬಂದಿಲ್ಲ, ಆದರಿಂದ ಯಾವ ಅಭಿವೃದ್ಧಿ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಮಳೆಗಾಲದ ಸಮಯದಲ್ಲಿ ಗ್ರಾಮೀಣ ಭಾಗದ ರಸ್ತೆಗಳು ಹದಗೆಟ್ಟು ಹೋಗಿದ್ದು, ರಸ್ತೆಯಲ್ಲಿ ಸಾರ್ವಜನಿಕರು ಓಡಾಡಲು ಕಷ್ಟವಾಗಿದೆ. ಆದರಿಂದ ಸರ್ಕಾರ ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ಸುಭಾಸ ಗಿರಿಯಣ್ಣವರ, ಹನಮಂತ ಸರನಾಯ್ಕರ, ಸೋಮಲಿಂಗಪ್ಪ ಆಯಿಟ್ಟಿ, ಲಕ್ಷ್ಮಣ ಮನನೇಕೊಪ್ಪ, ಯಲ್ಲಪ್ಪ ಚಲವಣ್ಣವರ, ಶಂಕ್ರಪ್ಪ ಜಾಧವ, ಶಿವಪ್ಪ ಸಾತಣ್ಣವರ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ವಾಸು ಚವ್ಹಾಣ, ವಿಜಯಕುಮಾರ ಹೂಗಾರ ಸೇರಿದಂತೆ ಮುಂತಾದವರು ಇದ್ದರು.