ಸರ್ಕಾರ ಸಬ್ಸಿಡಿ ನೀಡಿ ಹಳೆ ದರದಲ್ಲೇ ಹಾಲು ಮಾರಾಟ ಮಾಡಲಿ

| Published : Jun 28 2024, 12:48 AM IST

ಸಾರಾಂಶ

ನಂದಿನಿ ಹಾಲಿನ ಅರ್ಧ ಲೀಟರ್ ಹಾಗೂ 1 ಲೀಟರ್ ಪ್ಯಾಕೆಟ್ ಗೆ 50 ಎಂ.ಎಲ್. ಹಾಲನ್ನು ಹೆಚ್ಚುವರಿ ನೀಡುವುದರೊಂದಿಗೆ ಹಾಲಿನ ದರವನ್ನು 2 ರು. ಹೆಚ್ಚಿಸಿರುವುದನ್ನು ತೀವ್ರವಾಗಿ ಖಂಡಿಸಿರುವ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಶರಣಗೌಡ ಗೂಗಲ್, ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್‌)ಕ್ಕೆ ಸರ್ಕಾರ ಸಬ್ಸಿಡಿ ನೀಡಿ ಹಳೆಯ ದರದಲ್ಲೇ ಹಾಲು ಮಾರಾಟಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಎಸ್.ಯು.ಸಿ.ಐ (ಸಿ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಶರಣಗೌಡ ಗೂಗಲ್‌ ಒತ್ತಾಯ

ಕನ್ನಡಪ್ರಭ ವಾರ್ತೆ ಯಾದಗಿರಿ

ನಂದಿನಿ ಹಾಲಿನ ಅರ್ಧ ಲೀಟರ್ ಹಾಗೂ 1 ಲೀಟರ್ ಪ್ಯಾಕೆಟ್ ಗೆ 50 ಎಂ.ಎಲ್. ಹಾಲನ್ನು ಹೆಚ್ಚುವರಿ ನೀಡುವುದರೊಂದಿಗೆ ಹಾಲಿನ ದರವನ್ನು 2 ರು. ಹೆಚ್ಚಿಸಿರುವುದನ್ನು ತೀವ್ರವಾಗಿ ಖಂಡಿಸಿರುವ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಶರಣಗೌಡ ಗೂಗಲ್, ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್‌)ಕ್ಕೆ ಸರ್ಕಾರ ಸಬ್ಸಿಡಿ ನೀಡಿ ಹಳೆಯ ದರದಲ್ಲೇ ಹಾಲು ಮಾರಾಟಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಪ್ರತಿ ದಿನ 1 ಕೋಟಿ ಲೀಟರ್ ಹೆಚ್ಚು ಹಾಲು ಸಂಗ್ರಹವಾಗುತ್ತಿದ್ದು, ಉತ್ಪಾದಕರಿಂದ ಈ ಹಾಲನ್ನು ಖರೀದಿಸಬೇಕಾಗಿದೆ. ಜನರಿಗೆ 50 ಎಂ.ಎಲ್ ಹೆಚ್ಚು ತಲುಪಿಸಿ, ಹೆಚ್ಚುವರಿ 2 ರು. ಸಂಗ್ರಹಿಸಲಾಗುತ್ತಿದೆ ಎಂದು ಕೆ.ಎಂ.ಎಫ್ ಹೇಳುತ್ತಿದೆ. ಮುಖ್ಯ ಮಂತ್ರಿಗಳೂ ಇದನ್ನೇ ಹೇಳುತ್ತಿದ್ದಾರೆ. ಆದರೆ, ಕೆಎಂಫ್ ನ ಈ ಪ್ರಸ್ತಾಪವು ಜನರಿಗೆ ಉಗುಳಲೂ ಆಗದ ನುಂಗಲೂ ಆಗದ ಬಿಸಿ ತುಪ್ಪ ದಂತಾಗಿದೆ. ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗಿದೆ. ತರಕಾರಿ ಹಾಗೂ ಇನ್ನಿತರ ಅಗತ್ಯ ವಸ್ತುಗಳ ದರ ಕೈಗೆ ನಿಲುಕುತ್ತಿಲ್ಲ. ಆದ್ದರಿಂದ ಸರ್ಕಾರ ರಿಯಾಯಿತಿ ದರದಲ್ಲಿ ಬಡಜನರಿಗೆ ಹಾಲು ದೊರಕಿಸಲು ಕ್ರಮ ಕೈಗೊಂಡು, ಹೈನುಗಾರರ ಹಿತಾಸಕ್ತಿ ಕಾಪಾಡಬೇಕೆಂದು ಅವರು ಆಗ್ರಹಿಸಿದ್ದಾರೆ.