ಸಾರಾಂಶ
ಸುದ್ದಿ ಮಾಡುವ ಮುಂಚೆ ಸಮಾಜದಲ್ಲಿ ಪರಿವರ್ತನೆ ತರಲು ಮುಂದಾಗಬೇಕು. ಇದು ನಿಜವಾದ ಪತ್ರಿಕೆ ಧರ್ಮ ಪಾಲಿಸಿದಂತೆ. ಪ್ರತಿಯೊಬ್ಬರೂ ಪತ್ರಿಕೆಯನ್ನು ಕೊಂಡು ಓದಿ ಪತ್ರಿಕೆಯನ್ನು ಬೆಳೆಸಬೇಕು ಎಂದು ಹಿರಿಯ ಪತ್ರಕರ್ತ ವಿಠ್ಠಲದಾಸ್ ಕಾಮತ ಮನವಿ ಮಾಡಿದರು.
ದಾಂಡೇಲಿ: ಪ್ರಸ್ತುತ ದಿನಮಾನದಲ್ಲಿ ಪತ್ರಿಕೆಗಳ ಉಳಿವಿಗಾಗಿ ಮನೆಗೊಂದು ಪತ್ರಿಕೆ ಅಭಿಯಾನದ ಜರೂರತ್ತಿದೆ. ಜತೆಗೆ ಪತ್ರಕರ್ತರಿಗೆ ಸರ್ಕಾರ ಸವಲತ್ತುಗಳೂ ಅಗತ್ಯವಿವೆ ಎಂದು ಹಿರಿಯ ಪತ್ರಕರ್ತ ವಿಠ್ಠಲದಾಸ ಕಾಮತ ಹೇಳಿದರು.
ದಾಂಡೇಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ದಾಂಡೇಲಿ ಪ್ರೆಸ್ ಕ್ಲಬ್ ಆಶ್ರಯದಡಿ ಶನಿವಾರ ವೆಸ್ಟ್‌ಕೋಸ್ಟ್ ಕಾಗದ ಬಂಗೂರನ ನಗರದ ಡೀಲಕ್ಸ್ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಕರ್ತರು ಸಮಾಜದ ಡೊಂಕು ತಿದ್ದುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಸುದ್ದಿ ಮಾಡುವ ಮುಂಚೆ ಸಮಾಜದಲ್ಲಿ ಪರಿವರ್ತನೆ ತರಲು ಮುಂದಾಗಬೇಕು. ಇದು ನಿಜವಾದ ಪತ್ರಿಕೆ ಧರ್ಮ ಪಾಲಿಸಿದಂತೆ. ಪ್ರತಿಯೊಬ್ಬರೂ ಪತ್ರಿಕೆಯನ್ನು ಕೊಂಡು ಓದಿ ಪತ್ರಿಕೆಯನ್ನು ಬೆಳೆಸಬೇಕು ಎಂದರು.ಪೌರಾಯುಕ್ತ ರಾಜಾರಾಮ ಎಸ್. ಪವಾರ, ಸಿಪಿಐ ಭೀಮಣ್ಣ ಎಂ. ಸೂರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಚೌವ್ಹಾಣ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಸಿಯೂಟ ಕಾರ್ಯಕರ್ತೆಯಾಗಿ ಕಳೆದ ೨೧ ವರ್ಷಗಳಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೇರವಾಡದಲ್ಲಿ ಸೇವೆ ಸಲ್ಲಿಸುತ್ತಿರುವ ಲೀಲಾವತಿ ಪ್ರಹ್ಲಾದ ಕೊರಡೆ ಹಾಗೂ ವಿಶೇಷಚೇತನ ಸ್ವ- ಉದ್ಯೋಗಿಯಾಗಿ ಸ್ವಾವಲಂಬಿ ಬದುಕು ಕಟ್ಟಿಕೊಂಡು ಮಾದರಿಯಾಗಿರುವ ಮಾರುತಿನಗರದ ನಿವಾಸಿ ಎಜಾಜ್ ಅಹ್ಮದ್ ಎಂ. ಖಾನಪುರಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೆಸ್‌ಕ್ಲಬ್ ಅಧ್ಯಕ್ಷ ಸಂದೇಶ ಎಸ್. ಜೈನ್ ವಹಿಸಿ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ಸ್ವಾಗತಿಸಿ, ಪರಿಚಯಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಯು.ಎಸ್. ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ ವಂದಿಸಿದರು. ಮಾನಸಾ ವಾಸರೆ ಪ್ರಾರ್ಥಿಸಿದರು. ಖಜಾಂಚಿ ಅಕ್ಷಯಗಿರಿ ಗೋಸಾವಿ ಹಾಗೂ ಪ್ರವೀಣಕುಮಾರ ಸುಲಾಖೆ ಸನ್ಮಾನಿತರನ್ನು ಪರಿಚಯಿಸಿದರು. ಹಿರಿಯ ಪತ್ರಕರ್ತರಾದ ಕೃಷ್ಣ ಪಾಟೀಲ, ರಾಜೇಶ ತಳೇಕರ, ಅಪ್ತಾಬ್ ಶೇಖ ಕಾರ್ಯಕ್ರಮಕ್ಕೆ ಸಹಕರಿಸಿದರು.