ಸಾರಾಂಶ
ವರ್ಷದ ಕೊನೆಯ ದಿನವನ್ನು ವಿಶ್ವ ಮದ್ಯಪಾನ ಪ್ರಿಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಮದ್ಯಪಾನ ಪ್ರಿಯರ ಕೋರಿಕೆಯಂತೆ ಸರ್ಕಾರ ಮದ್ಯದ ದರ ಕಡಿಮೆ ಮಾಡಬೇಕು ಎಂದು ಪುರಸಭೆ ಅಧ್ಯಕ್ಷ ಎ. ಆರ್. ಅಶೋಕ್ ಹೇಳಿದರು.
ಕನ್ನಡಪ್ರಭ ವಾರ್ತೆ ಬೇಲೂರು
ವರ್ಷದ ಕೊನೆಯ ದಿನವನ್ನು ವಿಶ್ವ ಮದ್ಯಪಾನ ಪ್ರಿಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಮದ್ಯಪಾನ ಪ್ರಿಯರ ಕೋರಿಕೆಯಂತೆ ಸರ್ಕಾರ ಮದ್ಯದ ದರ ಕಡಿಮೆ ಮಾಡಬೇಕು ಎಂದು ಪುರಸಭೆ ಅಧ್ಯಕ್ಷ ಎ. ಆರ್. ಅಶೋಕ್ ಹೇಳಿದರು.ಪಟ್ಟಣದ ಪುರಸಭೆ ಮುಂಭಾಗ ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದ ವತಿಯಿಂದ ಏರ್ಪಡಿಸಿದ್ದ ವಿಶ್ವ ಮದ್ಯಪಾನ ಪ್ರಿಯರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರ ನಡೆಯುತ್ತಿರುವುದೇ ಅಬಕಾರಿ ಇಲಾಖೆಯಿಂದ ಎನ್ನುವ ಮನೋಭಾವ ಅವರದ್ದಾಗಿದ್ದು ಇದು ನಿಜವೂ ಆಗಿದೆ. ಬಾರ್ ನಲ್ಲಿ ಸ್ವಚ್ಛತೆ ಇಲ್ಲವಾಗಿದ್ದು ನಾವು ಒಂದು ಬಾರಿ ಭೇಟಿ ನೀಡಿದ ಸಂದರ್ಭದಲ್ಲಿ ಇಡೀ ರಸ್ತೆಯಲ್ಲಿ ಬಿಸಾಕಿದ ಮದ್ಯದ ಪ್ಯಾಕೆಟ್ ಸಿಗರೇಟ್ ಪ್ಯಾಕ್ ಬೇಕಾಬಿಟ್ಟಿ ಎಸೆದು ಹಾಕಿದ್ದು ಕಂಡು ಬಂದಿದೆ ಎಂದರು.ಮದ್ಯಪಾನ ಪ್ರಿಯರು ಏನಾದರೂ ಇಲ್ಲ ಎಂದಿದ್ದರೆ ಬಾರ್ ಮಾಲೀಕರು ಬೆಳೆಯಲು ಸಾಧ್ಯವೇ ಆಗುತ್ತಿರಲಿಲ್ಲ. ಅವರಿಂದಾಗಿಯೇ ನೀವು ಬೆಳೆದಿದ್ದು, ಮದ್ಯಪ್ರಿಯರು ಎಷ್ಟೇ ಕುಡಿದಾಗ ಅದು ಮಿತಿ ಮೀರದಿರಲಿ. ಕುಡಿಯುವುದೇ ದೊಡ್ಡ ವಿಚಾರವಲ್ಲ. ನಿಮ್ಮ ಕೆಲಸಗಳಿಗೆ ಗಮನಕೊಟ್ಟು ಕೇವಲ ನಶೆಗಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದರು .
ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟಗಾರ ಸಂಘದ ತಾಲೂಕು ಅಧ್ಯಕ್ಷ ತೋಟೇಶ್ ತಗರೆ ಮಾತನಾಡಿ, ಮದ್ಯಪಾನಿಕರು ಸರ್ಕಾರದ ಆಧಾರ ಸ್ತಂಭವಾಗಿದ್ದು, ಇವರಿಗೆ ಸರ್ಕಾರದಿಂದ ಸರಿಯಾದ ಸವಲತ್ತು ಸಿಗುತಿಲ್ಲ. ಇವರು ಕಟ್ಟುವ ತೆರಿಗೆಯಿಂದಲೇ ಸರ್ಕಾರ ನಡೆಯುತ್ತಿದ್ದು ಮನಸ್ಸು ಮಾಡಿದರೆ ಸರ್ಕಾರದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಾರೆ. ಆದರೆ ಇವರು ಒಗ್ಗಟ್ಟಿನಲ್ಲಿ ವಿಫಲರಾಗಿದ್ದು ಶೇ. 80 ಪ್ರತೀಶತ ಮದ್ಯಪ್ರಿಯರಿರುವಾಗ ಒಗ್ಗಟ್ಟಿನಲ್ಲಿ ಬೀದಿಗಿಳಿದು ಹೋರಾಟಮಾಡಿದರೆ ಅವರ ಬೇಡಿಕೆಗಳನ್ನು ಒಂದು ವಾರದಲ್ಲಿ ಈಡೇರಿಸಿಕೊಳ್ಳಬಹುದು ಎಂದು ಹೇಳಿದರು. ಪುರಸಭಾ ಸದಸ್ಯ ಪ್ರಭಾಕರ್, ಸಾಮಾಜಿಕ ಹೋರಾಟಗಾರ ವೆಂಕಟೇಶ್, ಕುಮಾರ್ ಇದ್ದರು.