ಸಾರಾಂಶ
ಕಲ್ಯಾಣ ಕರ್ನಾಟಕದ ಶಿಕ್ಷಕರ ಸಮಸ್ಯೆಗೆ ಸರ್ಕಾರ ಸ್ಪಂದಿಸಲಿ
ಪ್ರೌಢಶಾಲಾ ನೌಕರರ ಪತ್ತಿನ ಸಹಕಾರ ಸಂಘದ ೨೮ನೇ ವರ್ಷದ ವಾರ್ಷಿಕ ಮಹಾಸಭೆ
ಕನ್ನಡಪ್ರಭ ವಾರ್ತೆ ಯಲಬುರ್ಗಾಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ನೇಮಕ ಸೇರಿದಂತೆ ಅವರ ಮೂಲಭೂತ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಶಾಶ್ವತ ಪರಿಹಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಪ್ರೌಢಶಾಲಾ ನೌಕರರ ಪತ್ತಿನ ಸಹಕಾರ ಸಂಘದ ೨೮ನೇ ವರ್ಷದ ವಾರ್ಷಿಕ ಮಹಾಸಭೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಈ ಭಾಗದ ಏಳು ಜಿಲ್ಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಶಿಕ್ಷಕರು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಮಕ್ಕಳ ಸಂಖ್ಯೆ ಅನುಗುಣವಾಗಿ ಶಿಕ್ಷಕರ ನೇಮಕಕ್ಕೆ ರಾಜ್ಯ ಸರ್ಕಾರ ಹೆಚ್ಚು ಗಮನಹರಿಸಬೇಕು. ನಾನು ಶಿಕ್ಷಕರ ಕ್ಷೇತ್ರದ ಪರವಾಗಿ ಅನೇಕ ಸಮಸ್ಯೆಗಳ ಕುರಿತು ಸರ್ಕಾರ ಮಟ್ಟದಲ್ಲಿ ಸಾಕಷ್ಟು ಹೋರಾಟ ಮಾಡುತ್ತಿದ್ದೇನೆ. ನಿಮ್ಮ ನಾನಾ ಬೇಡಿಕೆಗಳ ಬಗ್ಗೆ ಸರ್ಕಾರದ ಕಣ್ಣು ತೆರೆಸುವ ಕಾರ್ಯವನ್ನು ಮಾಡಲಾಗುವುದು ಎಂದರು.ಹಾಸನ, ಚಿಕ್ಕಮಗಳೂರು ಸೇರಿದಂತೆ ಮುಂದುವರೆದ ಜಿಲ್ಲೆಗಳಲ್ಲಿ ೧೩ ಮಕ್ಕಳಿಗೆ ಒಬ್ಬ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ನಮ್ಮ ಕಲ್ಯಾಣ ಕರ್ನಾಟಕದಲ್ಲಿ ೨೮ರಿಂದ ೪೦ ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕರಿದ್ದಾರೆ. ಇಂತಹ ತಾರತಮ್ಯ ನೀತಿಯನ್ನು ಸರಿಪಡಿಸುವಲ್ಲಿ ಸರ್ಕಾರ ಎಚ್ಚರ ವಹಿಸಬೇಕು. ಈ ಭಾಗದಲ್ಲಿ ಇನ್ನೂ ೧೦ ಸಾವಿರ ಶಿಕ್ಷಕರ ನೇಮಕ ಅವಶ್ಯಕತೆ ಇದ್ದು, ಈ ಕುರಿತು ಸಿಎಂ, ಶಿಕ್ಷಣ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ನೌಕರರ ಪತ್ತಿನ ಸಂಘದ ಅಧ್ಯಕ್ಷ ಉದಯಕುಮಾರ್ ತಳವಾರ ಮಾತನಾಡಿ, ಸಂಘದಿಂದ ಪ್ರಸಕ್ತ ವರ್ಷ ಒಟ್ಟು ₹೫.೧೨ ಕೋಟಿ ವ್ಯವಹಾರ ನಡೆಸಿ ₹೫೨ ಲಕ್ಷ ಲಾಭಗಳಿಸಲಾಗಿದೆ ಎಂದರು.ಬಳಿಕ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಆರ್.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ, ನಿವೃತ್ತ ಜಿಲ್ಲಾ ಉಪ ನಿರ್ದೇಶಕ ಶಂಕ್ರಪ್ಪ ಗಾಂಜಿ, ಸಂಘದ ಸಿಇಒ ನೀಲನಗೌಡ ಪವಾಡಗೌಡ್ರು, ಸಂಘದ ಉಪಾಧ್ಯಕ್ಷ ದಾದಾಸಾಹೇಬ್ ತಾಳಿಕೋಟಿ, ಬಸವರಾಜ ಮಾಸ್ತಿ, ಅಶೋಕ ಮಾಲಿಪಾಟೀಲ್, ಬಸವರಾಜ ಮೇಟಿ, ಗಾಳೇಪ್ಪ ಬಂಡಿಹಾಳ, ದುರಗಪ್ಪ ಎಚ್., ಬಾಬುಸಾಬ ಲೈನದಾರ, ಸೋಮಶೇಖರ್ ಹರ್ತಿ, ಆರ್.ಬಿ. ಅಬ್ಬಿಗೇರಿ, ಸುರೇಶ ಮಾದನೂರು, ಸಂಘದ ಸರ್ವ ನಿರ್ದೇಶಕರು, ಶಿಕ್ಷಕರು ಇದ್ದರು.