ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಮಳೆ ಹಾನಿಗೆ ಒಳಗಾದ ಸಂತ್ರಸ್ತರಿಗೆ ಈ ಹಿಂದೆ ರಾಜ್ಯ ಸರ್ಕಾರ ನೀಡುತ್ತಿದ್ದ ಮೊತ್ತದ ಪರಿಹಾರ ಧನವನ್ನು ನೀಡಲು ಪ್ರಸಕ್ತ ಸರ್ಕಾರ ಮುಂದಾಗಬೇಕಾಗಿದೆ ಎಂದು ಮಾಜಿ ಸಚಿವರಾದ ಎಂ ಪಿ ಅಪ್ಪಚ್ಚು ರಂಜನ್ ಆಗ್ರಹಿಸಿದ್ದಾರೆ.ಅವರು ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಮಳೆ ಹಾನಿಗೆ ಒಳಗಾಗಿರುವ ಮನೆಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಅಗತ್ಯ ದಿನಸಿ ವಸ್ತುಗಳನ್ನು ವಿತರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪೂರ್ಣ ಮನೆ ಕಳೆದುಕೊಂಡ ಸಂದರ್ಭ 10 ಲಕ್ಷ ರು. ಪರಿಹಾರ ಧನ ನೀಡಲಾಗುತ್ತಿತ್ತು. ಭಾಗಶಃ ಹಾನಿಯಾದಲ್ಲಿ ಸರ್ಕಾರದ ನಿಯಮದಂತೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿತ್ತು.ಆದರೆ ಈಗ ರಾಜ್ಯ ಸರ್ಕಾರ ಕೇವಲ 1. 20 ಲಕ್ಷ ರು. ಮಾತ್ರ ಪರಿಹಾರ ನೀಡುತ್ತಿದೆ ಎಂದು ಹೇಳಿದರು.
ಸರ್ಕಾರ ಬಡ ಜನರ ಹಾಗೂ ತೊಂದರೆಗೆ ಒಳಗಾದವರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಿದ ರಂಜನ್, ಕೂಡಲೇ ಸರ್ಕಾರ ಈ ಬಗ್ಗೆ ಚಿಂತನೆ ಹರಿಸಬೇಕಾಗಿದೆ ಎಂದರು.ಕೊಡಗು ಜಿಲ್ಲೆಗೆ ಸರ್ಕಾರ ಈ ಹಿಂದಿನಂತೆ ವಿಶೇಷವಾಗಿ ಪರಿಹಾರ ಧನ ನೀಡುವ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಪಕ್ಷದ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಉಚಿತ ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ನೈಜ ಬಡವರ ಬಗ್ಗೆ ಸರ್ಕಾರ ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಿದ ಮಾಜಿ ಶಾಸಕರು ಅರ್ಹ ಫಲಾನುಭವಿಗಳಿಗೆ ಸರ್ಕಾರದ ಅಗತ್ಯ ಪರಿಹಾರ ಯೋಜನೆಗಳು ತಲುಪಬೇಕು ಎಂದರು.ರಂಜನ್ ಅವರು ಕುಶಾಲನಗರ ತಾಲೂಕು ಗುಡ್ಡ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಣ್ಣದ ಕೆರೆ ಬಳಿ, ಹಾರಂಗಿ ರಸ್ತೆಯ ಅತ್ತೂರು ಗ್ರಾಮದಲ್ಲಿ ಮತ್ತು ಗುಡ್ಡೆ ಹೊಸೂರು ಗ್ರಾಮದ ಮಾದಾಪಟ್ಟಣ ಬಳಿ ಮಳೆಗೆ ಕುಸಿದು ಬಿದ್ದಿರುವ ಮನೆಗೆ ತೆರಳಿ ಸಂತ್ರಸ್ತ ಕುಟುಂಬಕ್ಕೆ ಅಗತ್ಯ ದಿನಸಿ ವಸ್ತುಗಳನ್ನು ವಿತರಿಸುವ ಮೂಲಕ ಧೈರ್ಯ ಹೇಳಿದರು.
ನೂತನ ಮನೆ ನಿರ್ಮಾಣ ಸಂದರ್ಭ ಸಾಮಗ್ರಿ ನೀಡುವ ಮೂಲಕ ಸಹಾಯ ಮಾಡುವ ಭರವಸೆ ವ್ಯಕ್ತಪಡಿಸಿದರು.ಈ ಸಂದರ್ಭ ಭಾರತೀಯ ಜನತಾ ಪಕ್ಷದ ತಾಲೂಕು ಅಧ್ಯಕ್ಷರಾದ ಗೌತಮ್, ಜಿಲ್ಲಾ ಉಪಾಧ್ಯಕ್ಷ ಆರ್ ಕೆ ಚಂದ್ರ, ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ, ಉಪಾಧ್ಯಕ್ಷ ಪಟ್ಟು ಮಾದಪ್ಪ, ಸತ್ಯ, ಪ್ರವೀಣ್, ಪ್ರದೀಪ್, ಪಂಚಾಯಿತಿ ಸದಸ್ಯರು, ಗೀತಾ ಧರ್ಮಪ್ಪ, ಕುಶಾಲನಗರ ನಗರ ಅಧ್ಯಕ್ಷ ಎಂ ಎಂ ಚರಣ್, ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮತ್ತು ಪ್ರಮುಖರಾದ ವೈಶಾಖ ಪ್ರವೀಣ್, ಶಿವಶಂಕರ್ ಮತ್ತಿತರರು ಇದ್ದರು.