ಸಾರಾಂಶ
ಬಳ್ಳಾರಿ: ಕರ್ನಾಟಕದ ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕರ ನಡುವೆ ನಡೆದ ಸಮೀಕ್ಷೆಯಲ್ಲಿ ಶಿಕ್ಷಣದ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರವೇ ವಹಿಸಬೇಕೆಂಬುದು ಕರ್ನಾಟಕದ ಜನತೆಯ ಆಗ್ರಹವಾಗಿದೆ. ನಾಲ್ಕು ವರ್ಷದ ಪದವಿಯನ್ನು ಕೈಬಿಡಬೇಕೆಂದು ವಿದ್ಯಾರ್ಥಿಗಳು ಹಾಗೂ ಪೋಷಕರ ಅಭಿಪ್ರಾಯವಾಗಿದೆ ಎಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟ(ಎಐಡಿಎಸ್ಒ) ಜಿಲ್ಲಾಧ್ಯಕ್ಷ ಕೆ. ಈರಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಐಡಿಎಸ್ಒ ವತಿಯಿಂದ ರಾಜ್ಯಾದ್ಯಂತ ಸಮೀಕ್ಷೆ ನಡೆಸಲಾಯಿತು. ರಾಜ್ಯದ 10 ಸರ್ಕಾರಿ ವಿಶ್ವವಿದ್ಯಾಲಯಗಳು, 82 ಸರ್ಕಾರಿ ಪದವಿ ಕಾಲೇಜುಗಳು, 12 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು ಮತ್ತು 15 ಸರ್ಕಾರಿ ವಿದ್ಯಾರ್ಥಿ ವಸತಿನಿಲಯಗಳು ಸೇರಿದಂತೆ 23,120 ಜನರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.ಶಿಕ್ಷಣ ನೀತಿಯ ಮೇಲೆ ರಾಜ್ಯದಲ್ಲಿ ನಡೆದ ಅತಿ ದೊಡ್ಡ ಸಮೀಕ್ಷೆ ಇದಾಗಿದ್ದು, ಜನಪರ ಶಿಕ್ಷಣ ನೀತಿಯನ್ನು ಜಾರಿಗೊಳಿಸಬೇಕು ಎಂದು ಜನರು ಸಮೀಕ್ಷೆ ವೇಳೆ ಆಗ್ರಹಿಸಿದ್ದಾರೆ ಎಂದರು.
ನವೋದಯ ಚಳವಳಿಯ ಚಿಂತಕರು, ಸ್ವಾತಂತ್ರ‍್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರರ ಕುರಿತು ಶಿಕ್ಷಣದಲ್ಲಿ ಹೆಚ್ಚು ವಿಷಯಗಳನ್ನು ಕಲಿಸಬೇಕೆಂಬುದು ಜನರ ಆಶಯವಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಬೇಕು ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದವರು ಒತ್ತಾಯಿಸಿದ್ದಾರೆ.ಸರ್ಕಾರಿ ಶಾಲಾ ಕಾಲೇಜು ನಿರ್ವಹಣೆಯ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕೆಂದು ಶೇ. 98.52 ರಷ್ಟು ಜನರು ಆಗ್ರಹಿಸಿದ್ದಾರೆ. ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸಲು ವಿದ್ಯಾರ್ಥಿಗಳಿಂದ ದೇಣಿಗೆ ಪಡೆಯಬಾರದೆಂದು ಶೇ. 95.71ರಷ್ಟು, ನಾಲ್ಕು ವರ್ಷದ ಪದವಿ ಅಧ್ಯಯನ ಬೇಡವೆಂದು ಶೇ. 82ರಷ್ಟು, ಕಡಿಮೆ ದಾಖಲಾತಿ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ವಿಲಿನಗೊಳಿಸುವುದು/ ಮುಚ್ಚುವುದು ತಪ್ಪು ಎಂದು ಶೇ. 99ರಷ್ಟು, ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಕಾರ್ಪೊರೇಟ್ ಕಂಪನಿಗಳ ಬಳಿ ಧನಸಹಾಯ ಪಡೆಯುವುದು ತಪ್ಪು ಎಂದು ಶೇ. 80ರಷ್ಟು, ನಮ್ಮ ದೇಶದ ಶೈಕ್ಷಣಿಕ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹಾಗೂ ವಿದೇಶಿ ವಿವಿಗಳು ಬೇಡವೆಂದು ಶೇ. 86ರಷ್ಟು, ವಿದ್ಯಾರ್ಥಿಗಳಿಗೆ ಕೌಶಲ್ಯ/ ಉದ್ಯೋಗ ತರಬೇತಿ ನೀಡುವ ನೆಪದಲ್ಲಿ ಪಠ್ಯಕ್ರಮದಲ್ಲಿ ಮೌಲ್ಯಗಳನ್ನು ಕಡೆಗಣಿಸಬಾರದು ಎಂದು ಶೇ. 93ರಷ್ಟು, ನಮ್ಮ ದೇಶದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಅಭೂತಪೂರ್ವ ಪಾತ್ರ ವಹಿಸಿದ ಮಹಾನ್ ಕ್ರಾಂತಿಕಾರಿಗಳು ಹಾಗೂ ಮಹಾನ್ ನವೋದಯ ಚಿಂತಕರ ಕುರಿತಾದ ಪಾಠಗಳು ಪಠ್ಯಕ್ರಮದ ಭಾಗವಾಗಬೇಕು ಎಂದು ಶೇ. 97ರಷ್ಟು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆಯಾಗಬೇಕು ಎಂದು ಶೇ. 97ರಷ್ಟು ರಾಜ್ಯದ ವಿದ್ಯಾರ್ಥಿಗಳು ಬಯಸಿದ್ದಾರೆ ಎಂದು ತಿಳಿಸಿದರು.
ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ, ಜಿಲ್ಲಾ ಉಪಾಧ್ಯಕ್ಷೆ ಎಂ. ಶಾಂತಿ, ಉಮಾ, ಪ್ರಮೋದ್, ಅನುಪಮಾ, ಹೊನ್ನೂರಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))