ಸಾರಾಂಶ
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದಿದ್ದು ಸ್ವಾಗತಾರ್ಹ. ಆದರೆ ಈ ಯೋಜನೆ ಈ ವರೆಗೂ ಶೇ. 60ರಷ್ಟು ಕುಟುಂಬಗಳಿಗೆ ಮಾತ್ರ ತಲುಪಿದ್ದು, ಉಳಿದವರಿಗೆ ಮರೀಚಿಕೆಯಾಗಿದೆ. ಕೂಡಲೇ ಅರ್ಹ ಕುಟುಂಬಗಳಿಗೆ ಯೋಜನೆ ಲಾಭ ದೊರೆಯಬೇಕು ಎಂದು ಕರ್ನಾಟಕ ರೈತ ಸಂಘದ ರೋಣ ತಾಲೂಕು ಪ್ರಧಾನ ಕಾರ್ಯದರ್ಶಿ ದೊಡ್ಡಬಸಪ್ಪ ನವಲಗುಂದ ರೋಣದಲ್ಲಿ ಆಗ್ರಹಿಸಿದರು.
ವಾಸ್ತವವಾಗಿ ಗ್ಯಾರಂಟಿ ಯೋಜನೆಗಳು ಇನ್ನೂ ಬಹುತೇಕರಿಗೆ ತಲುಪಿಲ್ಲ
ರೋಣ: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದಿದ್ದು ಸ್ವಾಗತಾರ್ಹ. ಆದರೆ ಈ ಯೋಜನೆ ಈ ವರೆಗೂ ಶೇ. 60ರಷ್ಟು ಕುಟುಂಬಗಳಿಗೆ ಮಾತ್ರ ತಲುಪಿದ್ದು, ಉಳಿದವರಿಗೆ ಮರೀಚಿಕೆಯಾಗಿದೆ. ಕೂಡಲೇ ಅರ್ಹ ಕುಟುಂಬಗಳಿಗೆ ಯೋಜನೆ ಲಾಭ ದೊರೆಯಬೇಕು ಎಂದು ಕರ್ನಾಟಕ ರೈತ ಸಂಘದ ರೋಣ ತಾಲೂಕು ಪ್ರಧಾನ ಕಾರ್ಯದರ್ಶಿ ದೊಡ್ಡಬಸಪ್ಪ ನವಲಗುಂದ ಆಗ್ರಹಿಸಿದರು.ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗ್ಯಾರಂಟಿ ನಂಬಿ ಜನತೆ 136 ಸ್ಥಾನ ಗೆಲ್ಲುವಂತೆ ಆಶೀರ್ವದಿಸಿದ್ದಾರೆ. ಇದೀಗ ಅಧಿಕಾರಕ್ಕೆ ಬಂದು ನುಡಿದಂತೆ ನಡೆದಿದ್ದೇವೆ ಎಂದು ಕಾಂಗ್ರೆಸ್ ಬೀಗುತ್ತಿದೆ. ಪ್ರತಿಯೊಬ್ಬರಿಗೂ ಗ್ಯಾರಂಟಿ ಯೋಜನೆ ತಲುಪಿವೆ ಎಂದು ಪ್ರಚಾರ ಮಾಡುತ್ತಿದೆ. ಆದರೆ ವಾಸ್ತವವಾಗಿ ಗ್ಯಾರಂಟಿ ಯೋಜನೆಗಳು ಇನ್ನೂ ಬಹುತೇಕರಿಗೆ ತಲುಪಿಲ್ಲ. ಈ ಯೋಜನೆ ಲಾಭ ಪಡೆಯಲು ಪಡಿತರ ಕಾರ್ಡ್‌ನಲ್ಲಿ ಮನೆಯೊಡತಿ ಮೊದಲಿದ್ದರೇ ಮತ್ತು ಪಡಿತರ ಕಾರ್ಡ್‌ಗೆ ಹಾಗೂ ಬ್ಯಾಂಕ್ ಖಾತೆಗೆ ಆಧಾರ ಲಿಂಕ್ ಇದ್ದರೆ ಮಾತ್ರ ಯೋಜನೆ ಲಾಭ ದೊರೆಯುತ್ತದೆ ಎಂಬ ನಿಯಮ ಜಾರಿ ಮಾಡಲಾಗಿದೆ. ಆದರೆ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್‌ನಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ ,ಇದನ್ನೆ ನೆಪವಾಗಿಸಿ ಅಂತಹ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಲಾಭ ದೊರೆಯದಂತೆ ಮಾಡಲಾಗಿದೆ ಎಂದು ದೂರಿದರು.ಪಡಿತರ ಚೀಟಿಯಲ್ಲಿ ಮನೆಯೊಡತಿ ಮೊದಲು ಸ್ಥಾನದಲ್ಲಿರಲು ಮತ್ತು ಪಡಿತರ ಚೀಟಿಯಲ್ಲಿನ ಲೋಪದೋಷ ತಿದ್ದುಪಡಿಗೆ ಮುಂದಾದಲ್ಲಿ ಸರ್ವರ್ ಸಮಸ್ಯೆ, ಅರ್ಜಿ ಸಲ್ಲಿಸಬೇಕಿದ್ದ ಸೈಟ್ ಬಂದ್ ಇರುತ್ತದೆ. ಕಳೆದ 4 ತಿಂಗಳಿನಿಂದ ಗೃಹಲಕ್ಷ್ಮೀ ಯೋಜನೆ ಪ್ರಯೋಜನ ಪಡೆಯಲು ಶೇ. 40ರಷ್ಟು ಕುಟುಂಬಗಳು ನಿತ್ಯ ತಹಸೀಲ್ದಾರ್ ಮತ್ತು ಸಿಡಿಪಿಒ ಕಚೇರಿ ಮತ್ತು ಇಂಟರನೆಟ್ ಸೆಂಟರ್‌ಗೆ ಅಲೆಯುತ್ತಿದ್ದಾರೆ. ಹೊಸ ಪಡಿತರ ಚೀಟಿ ತಿದ್ದುಪಡಿ ಮಾಡಲು ಜನತೆ ನಿತ್ಯ ಕಚೇರಿಗೆ ಅಲೆದಾಟುತ್ತಿದ್ದಾರೆ. ಸರ್ವರ್ ಸಮಸ್ಯೆಯಿಂದ ಪಡಿತರ ತಿದ್ದುಪಡಿ ಸಾಧ್ಯವಾಗುತ್ತಿಲ್ಲ. ಇದರಿಂದ ಗೃಹಲಕ್ಷ್ಮೀ ಯೋಜನೆ ಮರೀಚಿಕೆಯಾಗಿದೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿಗೆ ಸಾಕಷ್ಟು ಬಾರಿ ಲಿಖಿತ ಮನವಿ ಸಲ್ಲಿಸಲಾಗಿದ್ದು, ಈ ವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೂರಿದರು.ಸಮಸ್ಯೆ ನಿವಾರಿಸಿ, ಯೋಜನೆ ತಲುಪಿಸಿ: ಗೃಹಲಕ್ಷ್ಮಿ ಯೋಜನೆಗೆ ಅರ್ಹರಿದ್ದರು ಅರ್ಜಿ ಹಾಕಲು ಸಾಧ್ಯವಾಗುತ್ತಿಲ್ಲ. ಪಡಿತರ ಚೀಟಿ ತಿದ್ದುಪಡೆಗೂ ಸರ್ವರ್ ಸಮಸ್ಯೆ ಎದುರಾಗಿದೆ. ಇನ್ನೂ ಈಗಾಗಲೇ ₹2000 ಪ್ರೋತ್ಸಾಹ ದನ ಕೆಲವರಿಗೆ 3 ತಿಂಗಳು ಬಂದಿದೆ. ಇನ್ನೂ ಕೆಲವರಿಗೆ ಒಂದೇ ತಿಂಗಳು ಮಾತ್ರ ಪಾವತಿಯಾಗಿದೆ. ಈ ಕುರಿತು ಫಲಾನುಭವಿಗಳು ಕೇಳಿದಲ್ಲಿ ಸಂಬಂಧಿಸಿದ ಅಧಿಕಾರಿ ಇಲ್ಲಸಲ್ಲದ ಸಬೂಬ ಹೇಳುತ್ತಾ ಜನರನ್ನು ನಿತ್ಯ ಕಚೇರಿಗೆ ಅಲೆಯುವಂತೆ ಮಾಡುತ್ತಿದ್ದಾರೆ. ಸರ್ಕಾರ ಕೂಡಲೆ ಗೃಹಲಕ್ಷ್ಮೀ ಯೋಜನೆಗೆ ಅರ್ಹರಿರುವ ಫಲಾನುಭವುಗಳು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಮುಂದಾಗಬೇಕು, ಪ್ರತಿಯೊಂದು ಕುಟುಂಬಕ್ಕೂ ಶೀಘ್ರ ಯೋಜನೆ ಲಾಭ ತಲುಪುವಂತಾಗಬೇಕು ಎಂದು ಆಗ್ರಹಿಸಿದರು.ನಿಷ್ಕಾಳಜಿ ಮಾಡಿದಲ್ಲಿ ಹೋರಾಟ ಎಚ್ಚರಿಕೆ: ಗೃಹಲಕ್ಷ್ಮೀ ಯೋಜನೆ ಪ್ರಯೋಜನ ಪಡೆಯಲು ಅಲೆಯುತ್ತಿರುವ ಜನರಿಗೆ ಸ್ಪಂದಿಸಬೇಕು. ಅನಗತ್ಯ ವಿಳಂಬ ಮತ್ತು ನಿಷ್ಕಾಳಜಿ ಮಾಡಿದಲ್ಲಿ ರೈತ ಸಂಘದ ನೇತೃತ್ವದಲ್ಲಿ ಬೀದಿಗಿಳಿದು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ತಾಲೂಕಾಧ್ಯಕ್ಷ ಶಿವಾಜಿ ಜಾಧವ, ನಾರಾಯಣ ಬಾವಿ, ಸಂಗಪ್ಪ ದಂಡಿನ ಉಪಸ್ಥಿತರಿದ್ದರು.