ಸಾರಾಂಶ
ಹರಪನಹಳ್ಳಿ: ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಕೆ.ಶಿವಮೂರ್ತಿ ತಾಕೀತು ಮಾಡಿದರು.ಅವರು ಪಟ್ಟಣದ ತಾಪಂ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ಬೇಕಾದರೆ ನನಗೆ, ಸಮಿತಿ ಸದಸ್ಯರಿಗೆ ಸಂಪರ್ಕಿಸಿ ವಿಷಯ ತಿಳಿದುಕೊಂಡು ಫಲಾನುಭವಿಗಳಿಗೆ ಸರಿಯಾಗಿ ತಲುಪುವಂತೆ ನೋಡಿಕೊಳ್ಳಿ ಎಂದು ಅವರು ಸೂಚಿಸಿದರು.ಗೃಹಲಕ್ಷ್ಮಿ ಹಣವನ್ನು ಸಾಲದ ಖಾತೆಗೆ ಜಮಾ ಮಾಡಿಕೊಳ್ಳಬಾರದು. ಈ ಬಗ್ಗೆ ದೂರುಗಳಿದ್ದು, ಗಮನ ಹರಿಸಿ ಎಂದು ಸ್ಥಳೀಯ ಸಿಡಿಪಿಒ ಅಶೋಕ ಅವರಿಗೆ ಸೂಚಿಸಿದರು.
ಸಿಡಿಪಿಒ ಅಶೋಕ ಶೇ.90ಕ್ಕೂ ಹೆಚ್ಚು ಗೃಹಲಕ್ಷ್ಮಿ ಯೋಜನೆ ತಾಲೂಕಿನಲ್ಲಿ ಜಾರಿಯಾಗಿದೆ ಎಂದಾಗ ಶೇ.100ರಷ್ಟು ಸಾಧನೆಯಾಗಬೇಕು ಎಂದು ಅಧ್ಯಕ್ಷ ಕೆ.ಶಿವಮೂರ್ತಿ ಹೇಳಿದರು.ಗೃಹಜ್ಯೋತಿ ಯೋಜನೆ ಬಗ್ಗೆ ಮಾಹಿತಿ ನೀಡಿದ ತೆಲಿಗಿ ಬೆಸ್ಕಾಂ ಎಇಇ ಪಂಡಿತಾರಾದ್ಯ 66393 ಫಲಾನುಭವಿಗಳಿಗೆ ಶೂನ್ಯ ಬಿಲ್ ಬಂದಿದೆ. 3216 ಬಳಕೆದಾರರಿಗೆ ಸ್ವಲ್ಪ ಮಟ್ಟಿನ ಬಿಲ್ ಬಂದಿದೆ. ಈ ತಿಂಗಳಿನಿಂದ ಶಾಲಾ ಕಾಲೇಜುಗಳಿಗೂ ಉಚಿತ ವಿದ್ಯುತ್ ಸರ್ಕಾರದ ಆದೇಶದ ಪ್ರಕಾರ ನೀಡಲಾಗುವುದು ಎಂದು ಹೇಳಿದರು.
ಗೃಹ ಲಕ್ಷ್ಮಿ ಶೇ99.46 ರಷ್ಟು ತಾಲೂಕಿನಲ್ಲಿ ಸಾಧನೆ ಯಾಗಿದೆ ಎಂದರು. ಹರಪನಹಳ್ಳಿ ಉಪವಿಭಾಗದ ಬೆಸ್ಕಾಂ ಎಇಇ ಪ್ರಕಾಶ ಪತ್ತೆನೂರು ಅವರು ಗೃಹ ಜ್ಯೋತಿ ಯೋಜನೆಗೆ ಹೊಸದಾಗಿ ನೊಂದಣಿ ಮಾಡಿಸುವವರು ನಮ್ಮ ಇಲಾಖೆಗೆ ಬಂದರೆ ಮಾಡಿ ಕೊಡಲಾಗುವುದು ಎಂದು ತಿಳಿಸಿದರು.ವಿದ್ಯುತ್ ತಂತಿಗಳಿಗೆ ಕೊಂಡಿ ಹಾಕಿಕೊಂಡು ಮನೆಗೆ ಬಳಸುವ ಗ್ರಾಹಕರನ್ನು ಗೃಹ ಜ್ಯೋತಿ ಯೋಜನೆಗೆ ಒಳಪಡಿಸಿ ಎಂದು ಅಧ್ಯಕ್ಷ ಶಿವಮೂರ್ತಿ ಹೇಳಿದಾಗ ಎಇಇ ಪ್ರಕಾಶ, ಕೊಂಡಿ ಹಾಕುವವರ ಮನೆಗಳಿಗೆ ಮೀಟರ್ ಇರುವುದಿಲ್ಲ, ಸ್ಟೇಟ್ ಪಾಲಿಸಿ ಅಲ್ಲಿಂದಲೇ ಆಗಬೇಕು ಎಂದು ನುಡಿದರು.
ಶಕ್ತಿ ಯೋಜನೆ ಕುರಿತು ಮಾಹಿತಿ ನೀಡಿದ ಸ್ಥಳೀಯ ಸಾರಿಗೆ ಡಿಪೋ ವ್ಯವಸ್ಥಾಪಕಿ ಮಂಜುಳಾ, ಈವರೆಗೂ ತಾಲೂಕಿನಲ್ಲಿ 65.11ಲಕ್ಷ ಮಹಿಳೆಯರು ಪ್ರಯಾಣಿಸಿ ಈ ಯೋಜನೆಯ ಅನುಕೂಲತೆ ಪಡೆದುಕೊಂಡಿದ್ದಾರೆ. ಇದರಿಂದ ಹರಪನಹಳ್ಳಿ ಸಾರಿಗೆ ಸಂಸ್ಥೆಗೆ ₹24.79 ಕೋಟಿ ಆದಾಯ ಗಳಿಕೆಯಾಗಿದೆ ಎಂದರು.ಸ್ಥಳೀಯ ಡಿಪೋದ ಬಸ್‌ಗಳು ಹೊಸಪೇಟೆಗೆ ಹೋಗುವಾಗ ಢಾಣಾಪುರ ಮುಂತಾದ ಹಳ್ಳಿಗಳಲ್ಲಿ ಸಂಪರ್ಕ ರಸ್ತೆ ಮೂಲಕ ಗ್ರಾಮಕ್ಕೆ ತಲುಪಿ ಹೋಗಲು ನಿರ್ವಾಹಕರಿಗೆ ಸೂಚಿಸಿ ಎಂದು ಅಧ್ಯಕ್ಷ ಶಿವಮೂರ್ತಿ ತಿಳಿಸಿದರು.
ಜಿಲ್ಲಾ ಉದ್ಯೋಗಾಧಿಕಾರಿ ಪಿ.ಎಸ್. ಹಟ್ಟೆಪ್ಪ ಮಾತನಾಡಿ, ಯುವನಿಧಿ ಯೋಜನೆ ಅನುಷ್ಠಾನ ಕುರಿತು ಮಾಹಿತಿ ನೀಡಿ 2632 ಪದವಿ ಹಾಗೂ 80 ಡಿಪ್ಲೋಮಾ ನಿರುದ್ಯೋಗಿಗಳು ತಾಲೂಕಿನಲ್ಲಿ ಯುವ ನಿಧಿ ಫಲಾನುಭವಿಗಳಾಗಿದ್ದು, ₹80.16 ಲಕ್ಷ ಖರ್ಚಾಗಿದೆ ಎಂದು ಹೇಳಿದರು.ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮಾಹಿತಿಯನ್ನು ಆಹಾರ ಶಿರಸ್ತೇದಾರ ಭರತರಾಜ್ ಹಾಗೂ ನಿರೀಕ್ಷಕಿ ಕೊಟ್ರಮ್ಮ ಮಾಹಿತಿ ನೀಡಿದರು.
ಪಂಚಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಹುಲ್ಲಿಕಟ್ಟಿ ಚಂದ್ರಪ್ಪ ಬಡವರಿಗೆ ಸರ್ಕಾರದ ಯೋಜನೆಗಳನ್ನು ಸರಿಯಾಗಿ ಮುಟ್ಟಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.ತಹಶೀಲ್ದಾರ ಬಿ.ವಿ. ಗಿರೀಶಬಾಬು, ಪಂಚಗ್ಯಾರಂಟಿ ಯೋಜನೆಗಳ ಜಿಲ್ಲಾ ಉಪಾದ್ಯಕ್ಷ ಎಚ್.ಚಂದ್ರಪ್ಪ, ತಾಪಂ ಸಹಾಯಕ ನಿರ್ದೆಶಕ ವೀರಣ್ಣ ಲಕ್ಕಣ್ಣನವರ್ ಉಪಸ್ಥಿತರಿದ್ದರು.