ಸಾರಾಂಶ
ಕಾರವಾರ: ಸಮಾಜದ ಕಟ್ಟಕಡೆಯ ಅರ್ಹ ವ್ಯಕ್ತಿಗೂ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಸೌಲಭ್ಯದ ಪ್ರಯೋಜನವನ್ನು ಪಡೆಯಲು, ತಕ್ಷಣದಲ್ಲಿ ಸ್ಪಂದಿಸಲು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ರಚನೆ ಮಾಡಲಾಗಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.
ಅವರು ಗುರುವಾರ ಜಿಪಂ ಕಾರ್ಯಾಲಯದಲ್ಲಿನ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಚೇರಿ ಉದ್ಘಾಟನೆ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಮಿತಿ ಸದಸ್ಯರು ಹಾಗೂ ಗ್ಯಾರಂಟಿ ಯೋಜನಗಳ ಅನುಷ್ಠಾನ ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸರ್ಕಾರ ನೀಡಿರುವ ಜವಾಬ್ದಾರಿಯನ್ನು ಅರಿತು ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ಕೊಂಡಿಯಾಗಿ ಸೇವೆ ಸಲ್ಲಿಸಲು ಸಿಕ್ಕ ಅವಕಾಶವನ್ನು ಬಳಸಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
ಪ್ರಾಧಿಕಾರದ ಸದಸ್ಯರು ತಾಲೂಕುವಾರು ಸಭೆ ಸೇರಿ ಸ್ಥಳೀಯ ಅಸಹಾಯಕರು, ಬಡವರನ್ನು ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯ ದೊರಕಿಸಿಕೊಡುವ ಜತೆಗೆ ಸರ್ಕಾರದ ಇತರ ಯೋಜನೆಗಳ ಸೌಲಭ್ಯವನ್ನು ತಲುಪಿಸುವ ಕೆಲಸ ಮಾಡಿ ಆರ್ಥಿಕವಾಗಿ ಸಬಲರನ್ನಾಗಿಸಲು ಪ್ರಯತ್ನಿಸಬೇಕು ಎಂದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠನ ಪ್ರಾಧಿಕಾರದ ಅಧ್ಯಕ್ಷ ಸತೀಶ ಪಿ. ನಾಯ್ಕ, ಕೆಲವು ತಾಂತ್ರಿಕ ತೊಂದರೆಗಳ ಜತೆಗೆ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯಲು ಹೆಬ್ಬೆರಳಿನ ಗುರುತು ಒಂದೇ ಮಾನದಂಡವಾಗಿರುವುದರಿಂದ ವಯಸ್ಸಾದವರಿಗೆ ಯೋಜನೆಯ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಐ-ಇಂಪ್ರೆಶನ್ ಪರಿಗಣನೆಗೆ ತೆಗೆದುಕೊಳ್ಳುವಂತಾಗಬೇಕು ಎಂದರು.
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲೆಯಲ್ಲಿ ಈಗಾಗಲೇ ಶೇ. 90ರಷ್ಟು ಯೋಜನೆಗಳ ಅನುಷ್ಠಾನವಾಗಿದ್ದು, ಉಳಿದ ಶೇ. 10ರಷ್ಟು ಪ್ರಕರಣಗಳನ್ನು ಜಂಟಿಯಾಗಿ ಅನುಷ್ಠಾನಗೊಳಿಸುವ ಮೂಲಕ ಯಶಸ್ವಿಗೊಳಿಸಲಾಗುವುದು ಹಾಗೂ ಈ ಯೋಜನೆಗಳ ಅನುಷ್ಠಾನ ಸಂಬಂಧ ಸದಸ್ಯರಿಗೆ ತರಬೇತಿ ನೀಡಿ ಅವರಿಗೆ ಜನರಿಗೆ ಮಾಹಿತಿಯನ್ನು ಯಾವ ರೀತಿ ತಿಳಿಸಿಕೊಡಬೇಕು ಎಂಬುದರ ಬಗ್ಗೆ ತಿಳಿಸಲಾಗುವುದು ಎಂದರು.ಜಿಪಂ ಸಿಇಒ ಈಶ್ವರ್ ಕುಮಾರ್ ಕಾಂದೂ, ಸದಸ್ಯರಿಗೆ ಹೊಸ ಜವಾಬ್ದಾರಿ ನೀಡಲಾಗಿದ್ದು, ಕೇಲವು ತಾಂತ್ರಿಕ ಕಾರಣಗಳಿಂದ ಶೇ. 100ರಷ್ಟು ಅನುಷ್ಠಾನ ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ ತರಬೇತಿ ನೀಡಿ ಯೋಜನೆಗಳ ಶೇ. 100ರಷ್ಟು ಅನುಷ್ಠಾನ ಮಾಡಲು ಎಲ್ಲರೂ ಕೈಜೋಡಿಸುವಂತೆ ಹೇಳಿದರು.