ಸಾರಾಂಶ
ಗ್ಯಾರಂಟಿ ಯೋಜನೆಯ ಸಭೆಯನ್ನು ಕೇವಲ ಕೇಂದ್ರ ಸ್ಥಾನದಲ್ಲಿ ಆಯೋಜಿಸದೆ ಗ್ರಾಪಂ ಮಟ್ಟದಲ್ಲಿ ನಡೆಸುವ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ.
ಅಳ್ನಾವರ:
ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಸಂಕಷ್ಟ ದೂರ ಮಾಡಿವೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಳ್ನಾವರ ತಾಲೂಕು ಅಧ್ಯಕ್ಷ ವಿನಾಯಕ ಕುರುಬರ ಹೇಳಿದರು.ತಾಲೂಕಿನ ಅರವಟಗಿ ಗ್ರಾಮ ಪಂಚಾಯಿತಿಯಲ್ಲಿ ಜರುಗಿದ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿರುವುದನ್ನು ಕಂಡುಕೊಳ್ಳುವ ಹೊಣೆಗಾರಿಕೆ ಆಯಾ ಇಲಾಖೆ ಮತ್ತು ಸಮಿತಿಯವರದ್ದಾಗಿದೆ ಎಂದರು.
ಗ್ಯಾರಂಟಿ ಯೋಜನೆಯ ಸಭೆಯನ್ನು ಕೇವಲ ಕೇಂದ್ರ ಸ್ಥಾನದಲ್ಲಿ ಆಯೋಜಿಸದೆ ಗ್ರಾಪಂ ಮಟ್ಟದಲ್ಲಿ ನಡೆಸುವ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದರು.ತಾಲೂಕಿನಲ್ಲಿ ೮೩೪೦ ಅರ್ಹ ಫಲಾನುಭವಿಗಳ ಪೈಕಿ ೮೨೧೦ ಪಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆ ಸೌಲಭ್ಯ ದೊರೆಯುತ್ತಿದೆ. ಇನ್ನುಳಿದವರಿಗೆ ದಾಖಲಾತಿ ಕೊರತೆಯಿಂದ ಹಣ ನೀಡಿಕೆ ವಿಳಂಬವಾಗಿದೆ ಎಂದು ಸಿಡಿಪಿಒ ಉಮಾ ಬಳ್ಳೊಡಿ ಸಭೆಯಲ್ಲಿ ತಿಳಿಸಿದರು.
ಅನ್ನಭಾಗ್ಯ ಯೋಜನೆಯ ೮೦೪೨ ಫಲಾನುಭವಿಗಳ ಪೈಕಿ ೭೯೦೨ ಫಲಾನುಭವಿಗಳು ಸೌಲಭ್ಯ ಪಡೆಯುತ್ತಿರುವುದಾಗಿ ಆಹಾರ ನಿರೀಕ್ಷಕ ವಿನಾಯಕ ದೀಕ್ಷಿತ ವಿವರಣೆ ನೀಡಿದರು ಇನ್ನುಳಿದಂತೆ ಸ್ತ್ರೀಶಕ್ತಿ, ಗೃಹಜ್ಯೋತಿ ಹಾಗೂ ಯುವ ನಿಧಿ ಯೋಜನೆಗಳ ಬಗ್ಗೆ ಆಯಾ ಇಲಾಖೆಯ ಅಧಿಕಾರಿಗಳು ಮಾಹಿತಿ ಒದಗಿಸಿದರು.ಬಹು ದಿನಗಳ ಬೇಡಿಕೆಯಂತೆ ಅಳ್ನಾವರ ಸಮೀಪದ ಕೋಗಿಲಗೇರಿ ಗ್ರಾಮಕ್ಕೆ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ನಿಗದಿತ ಸಮಯಕ್ಕೆ ಸಾರಿಗೆ ಬಸ್ ವ್ಯವಸ್ಥೆ ಮಾಡುವಂತೆ ಸಭೆಯಲ್ಲಿ ಆಗ್ರಹಿಸಲಾಯಿತು.
ಸಭೆಯಲ್ಲಿ ತಾಪಂ ಇಒ ಪ್ರಶಾಂತ ತುರಕಾಣಿ, ಗ್ರಾಪಂ ಅಧ್ಯಕ್ಷ ಅಶೋಕ ಜೋಡಟ್ಟಿ, ಪಿಡಿಒ ರೇಣುಕಾ ಕೊಪ್ಪದ ಹಾಗೂ ಸಮಿತಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.