ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ:ಬದುಕು ಕಟ್ಟಿಕೊಳ್ಳಲು ಹತ್ತಾರು ವರ್ಷಗಳಿಂದ ಕಂದಾಯ ಹಾಗೂ ಅರಣ್ಯದ ಕುರುಚಲು ಗಿಡದಂತಹ ಪ್ರದೇಶದಲ್ಲಿ ಉಳುಮೆ ಮಾಡಿಕೊಂಡು ಬರುತ್ತಿರುವ ಬಗರ್‌ಹುಕುಂ ಸಾಗುವಳಿದಾರರು ಈ ಚಳಿಗಾಲದ ಅವಧಿವೇಶದಲ್ಲಾದರೂ ಹಕ್ಕುಪತ್ರ ಕೊಡುವ ಕುರಿತು ಮಹತ್ವದ ನಿರ್ಣಯ ಹೊರ ಬರುವುದೇ ಎಂಬ ನಿರೀಕ್ಷೆಯಲ್ಲಿದ್ದಾರೆ.
ಬಗರ್‌ಹುಕುಂ ಪ್ರಕರಣದಲ್ಲಿ 90 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದರೂ, ಹಕ್ಕುಪತ್ರಕ್ಕಾಗಿ ಬೇಡಿಕೆ ಇಟ್ಟು ಎರಡು ತಲೆಮಾರು ಕಳೆದರೂ ರಾಜ್ಯ ಸರ್ಕಾರ ಇನ್ನೂ ತುಂಡು ಭೂಮಿ ನೀಡಲು ಮೀನಮೇಷ ಎಣಿಸುತ್ತಿರುವ ಹಿನ್ನೆಲೆಯಲ್ಲಿ ಈ ಚಳಿಗಾಲದ ಅಧಿವೇಶನದಲ್ಲಿ ಡಿ. 16ರಂದು ಸಾವಿರಾರು ಫಲಾನುಭವಿ ರೈತರು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಮೂಲಕ ಬೆಳಗಾವಿ ಚಲೋ ಹಮ್ಮಿಕೊಂಡಿದ್ದಾರೆ.ಶಾಸನಬದ್ಧವಾಗಿ ಭೂಮಿ ಹಕ್ಕು ದೊರೆಯದೇ ಪರದಾಡುತ್ತಿರುವ ಧಾರವಾಡ ಜಿಲ್ಲೆಯ 3 ಸಾವಿರ ರೈತರ 6000 ಎಕರೆ ಹಾಗೂ ರಾಜ್ಯದ 12 ಲಕ್ಷ ರೈತರ 25 ಲಕ್ಷ ಎಕರೆ ಭೂಮಿಗಾಗಿ ಇದೀಗ ದೊಡ್ಡ ಮಟ್ಟದ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ. ಈ ಪ್ರಕರಣದಲ್ಲಿ ಬಹುತೇಕ ರೈತರು ಅನಕ್ಷರಸ್ಥರಿದ್ದು, ಈ ತುಂಡು ಭೂಮಿ ಮೇಲೆಯೇ ಸಂಪೂರ್ಣ ಅವಲಂಬಿತರಾಗಿದ್ದಾರೆ. ಅನಿವಾರ್ಯ ಕಾರಣಗಳಿಂದ ನಿಶ್ಚಿತ ಬದುಕು ರೂಪಿಸಿಕೊಳ್ಳಲಾಗದೇ ಈ ಭೂಮಿಯ ಹಕ್ಕುಪತ್ರಗಳಿಗಾಗಿ ದಶಕಗಳಿಂದ ತೀವ್ರ ಮಾನಸಿಕ ತೊಳಲಾಟದಿಂದ ಜರ್ಜರಿತರಾಗಿದ್ದಾರೆ. ಭೂಮಿ ಉಳಿಮೆಗೆ ಅವಕಾಶ ಇದ್ದರೂ ಆ ಭೂಮಿ ಮೇಲೆ ಯಾವ ಹಕ್ಕು ಹೊಂದದೇ, ಕೃಷಿ ಬೆಳೆ ಸಾಲ, ಕೃಷಿ ಪರಿಕರ ಮೇಲಿನ ಸಾಲ ಹಾಗೂ ಇನ್ನಿತರ ಜೀವನೋಪಾಯಕ್ಕಾಗಿ ಸಹಕಾರಿ ಹಾಗೂ ಬ್ಯಾಂಕ್‌ಗಳಲ್ಲಿ ಯಾವುದೇ ರೀತಿ ಅಲ್ಪಾವಧಿ ಸಾಲವು ದೊರೆಯದೇ ಕಂಗಾಲಾಗಿದ್ದಾರೆ.
ಇನ್ನೊಂದೆಡೆ ಆಡಳಿತ ಸರ್ಕಾರ ಶ್ರೀಮಂತ ಉದ್ಯಮಿಗಳಿಗೆ ರೆಸಾರ್ಟ್, ಹೋಮ್‌ಸ್ಟೇ ಮಾಡಿಕೊಳ್ಳಲು ಅರಣ್ಯ ಪ್ರದೇಶದಲ್ಲಿ ಸಾವಿರಾರು ಎಕರೆ ಭೂಮಿ ನೀಡಿದೆ. ಹಲವಾರು ವರ್ಷಗಳಿಂದ ಸಣ್ಣಪುಟ್ಟ ಹಿಡುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಗರ್‌ಹುಕುಂ ಸಾಗುವಳಿದಾರರಿಗೆ ಮಾತ್ರ ಸರ್ಕಾರದ ಹೃದಯ ಮಿಡಿಯುತ್ತಿಲ್ಲ ಎಂದು ಈ ವಿಷಯವಾಗಿ ಹೋರಾಡುತ್ತಿರುವ ಶರಣು ಗೊನವಾರ, ಹನುಮೇಶ ಹುಡೇದ ಹಾಗೂ ದೀಪಾ ಬೇಸರ ವ್ಯಕ್ತಪಡಿಸುತ್ತಾರೆ.ಬೇಡಿಕೆಗಳು...- ಬಗರ್‌ಹುಕುಂ ಸಾಗುವಳಿ ರೈತರಿಗೆ ಹಕ್ಕುಪತ್ರ ವಿತರಿಸಲಿ
- 50, 53 ಮತ್ತು 57 ನಂಬರ್ ಅರ್ಜಿ ಹಾಕದ ರಾಜ್ಯದ ಸಾವಿರಾರು ರೈತರಿಗೂ ಅರ್ಜಿ ಹಾಕಲು ಅವಕಾಶ, ಸಮರ್ಪಕ ಸಮಯ ಮಾಡಿಕೊಟ್ಟು ಹಕ್ಕುಪತ್ರ ಒದಗಿಸಲಿ.- ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಹೊಸದಾಗಿ ಜಾರಿಗೆ ತಂದಿರುವ ಆಪ್ ಕೂಡಲೇ ಹಿಂಪಡೆದು ಗ್ರಾಮಮಟ್ಟದ ಸರ್ವೇಗಳನ್ನು ನಡೆಸಬೇಕು.
- ತಕ್ಷಣ ಎಲ್ಲ ತಹಸೀಲ್ದಾರ್ ಹಾಗೂ ಜನಪ್ರತಿನಿಧಿಗಳ ಸಭೆ ಕರೆದು ಬಗರ್‌ಹುಕುಂ ರೈತರಿಗೆ ಹಕ್ಕುಪತ್ರ ಕೊಡಲು ಚರ್ಚಿಸಬೇಕು.- ಕೂಡಲೇ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಭೂ ಮಂಜೂರಾತಿ ಸಮಿತಿ ರಚಿಸಬೇಕು.
- ಒಂದು ಕಡೆ 50, 53, 57 ಫಾರ್ಮ್ ರೈತರಿಗೆ ಅರ್ಜಿ ಹಾಕಲು ಹೇಳಿ ಇನ್ನೊಂದೆಡೆ ರೈತರಿಗೆ ಕಿರುಕುಳ ನೀಡಿ ನೋಟಿಸ್ ಕೊಡುವ ನೀತಿ ಕೈಬಿಡಬೇಕು.- ಬಗರ್‌ಹುಕುಂ ರೈತರಿಗೆ ಬ್ಯಾಂಕ್ , ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಸಿಗಬೇಕು. ಬಗರ್‌ಹುಕುಂ ವಿಚಾರದಲ್ಲಿ ರಾಜ್ಯ ಸರ್ಕಾರ ಚಳಿಗಾಲದಲ್ಲಿ ಅಧಿವೇಶನದಲ್ಲಿ ಮಹತ್ವದ ನಿರ್ಣಯ ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಸಾವಿರಾರು ರೈತರಿಂದ ಸೋಮವಾರ ಬೆಳಗಾವಿ ಚಲೋ ಹಮ್ಮಿಕೊಂಡಿದ್ದೇವೆ. ರಾಜ್ಯ ಸರ್ಕಾರ ಮಾಡಿರುವ ಹಲವಾರು ನಿಯಮ ಸರಳೀಕರಣಗೊಳಿಸಿ, ರೈತರು ಭೂಮಿ ಪಡೆದುಕೊಳ್ಳುವ ಅನುಕೂಲವಾಗುವಂತೆ ಕ್ರಮಕೈಗೊಳ್ಳಬೇಕು ಎಂದು ಎಐಕೆಕೆಎಂಸ್ ರಾಜ್ಯ ಉಪಾಧ್ಯಕ್ಷ ಎಸ್.ಎನ್. ಸ್ವಾಮಿ ಹೇಳಿದರು.