ಸುರಪುರ ಇತಿಹಾಸ ನಾಡಿನಾದ್ಯಂತ ಪಸರಿಸಲಿ: ಡಾ.ಚೆಲುವರಾಜ್

| Published : Feb 09 2024, 01:49 AM IST

ಸುರಪುರ ಇತಿಹಾಸ ನಾಡಿನಾದ್ಯಂತ ಪಸರಿಸಲಿ: ಡಾ.ಚೆಲುವರಾಜ್
Share this Article
  • FB
  • TW
  • Linkdin
  • Email

ಸಾರಾಂಶ

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಈ ಸಂಸ್ಥಾನದರಸರ ಕೆಚ್ಚೆದೆಯ ಹೋರಾಟ ಕುರಿತ ಇತಿಹಾಸ ಕೇವಲ ಸುರಪುರ ಭಾಗದಲ್ಲಷ್ಟೇ ಅಲ್ಲ, ನಾಡಿನಾದ್ಯಂತ, ದೇಶಾದ್ಯಂತ ಪಸರಿಸಲಿ.

ಕನ್ನಡಪ್ರಭ ವಾರ್ತೆ ಸುರಪುರ

ಸುರಪುರದ ಜನಾನುರಾಗಿ ಬಲವಂತ ಬಹರಿ ಬಹದ್ದೂರ್‌ ಅರಸು ಮನೆತನ ಹಾಗೂ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಈ ಸಂಸ್ಥಾನದರಸರ ಕೆಚ್ಚೆದೆಯ ಹೋರಾಟ ಕುರಿತ ಇತಿಹಾಸ ಕೇವಲ ಸುರಪುರ ಭಾಗದಲ್ಲಷ್ಟೇ ಅಲ್ಲ, ನಾಡಿನಾದ್ಯಂತ, ದೇಶಾದ್ಯಂತ ಪಸರಿಸಲಿ ಎಂದು ಸಂಸ್ಕೃತಿ ಚಿಂತಕ ಹಾಗೂ ಹಂಪಿ ಕನ್ನಡ ವಿವಿಯ ಸಮಾಜ ವಿಜ್ಞಾನಗಳ ನಿಕಾಯದ ಡೀನ್‌ ಡಾ. ಚೆಲುವರಾಜು ಆಶಿಸಿದರು.

ಸಂಸ್ಥಾನಕ್ಕೆ ಹಿರಿಯರು ನೀಡಿದ ಪರಿಶ್ರಮದ ಫಲವಾಗಿ ವಿಜಯೋತ್ಸವವನ್ನು ಆಚರಿಸುತ್ತಿದ್ದು, ಮಣ್ಣಿನ ಅಭಿಮಾನವಿದ್ದರೆ ಸಾಂಸ್ಕೃತಿಕ ಅರಿವು ನೀಡುತ್ತದೆ. ಉತ್ಸವಗಳು ನೆನಪಿನ ದಿನಗಳಾಗಿರುತ್ತವೆ. ಅವು ನಮ್ಮ ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತದೆ ಎಂದು ಸಾಂಸ್ಕೃತಿಕ ಚಿಂತಕ ಡಾ. ಚೆಲುವರಾಜ್ ಹೇಳಿದರು.

1857ರ ಸುರಪುರ ವಿಜಯೋತ್ಸವ ನೆನಪಿಗಾಗಿ, ನಗರದ ಸುರಪುರ ಸಂಸ್ಥಾನದ ಕನಡಿ ಅರಮನೆಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿ ಮತ್ತು ಫಿರಂಗಿ ಹಿಡಿದು ಹೋರಾಡಿದ ಕಾಲಘಟ್ಟದಲ್ಲಿ ಆಡಳಿತ ನಡೆಸಿದ ಸುರುಪುರ ಸಂಸ್ಥಾನ ಮೇಲ್ಪಂಕ್ತಿಯಲ್ಲಿದೆ. ಬ್ರಿಟಿಷರ ವಿರುದ್ಧ ಪ್ರಥಮ ಸ್ವಾತಂತ್ರ್ಯ ಹೋರಾಟದ ನೇತೃತ್ವವನ್ನು ಸುರಪುರ ಸಂಸ್ಥಾನ ವಹಿಸಿತ್ತು.

ಸುರಪುರ ಚರಿತ್ರೆ ನಾಡಿನಾದ್ಯಂತ ಪ್ರಚಾರವಾಗಬೇಕಾಗಿದೆ. ಪ್ರಾಕಾರ, ಆಯಾಮಾನಗಳನ್ನು ಶೋಧಿಸಬೇಕಾಗಿದೆ. ಸುರಪುರ ಧರ್ಮ ಸಮನ್ವಯ ಕೇಂದ್ರವಾಗಿದೆ. ಚರಿತ್ರಕಾರರು ಈ ಹೊಸ ರೀತಿಯ ಇತಿಹಾಸ ಕುರಿತು ಚಕಾರ ಎತ್ತಬೇಕಾಗಿದೆ ಎಂದು ಡಾ. ಚೆಲುವರಾಜು ಹೇಳಿದರು.

ಚರಿತ್ರೆ, ಸಂಸ್ಕೃತಿ, ಬದುಕಿನಲ್ಲಿ ಎಲ್ಲವನ್ನು ವಿಜಯೋತ್ಸವ ಒಳಗೊಂಡಿದೆ. ಇತಿಹಾಸಕಾರರು ಸ್ಥಳೀಯ ಚರಿತ್ರೆಯನ್ನು ಕಟ್ಟಿಕೊಟ್ಟಾಗ ನಿಜವಾದ ಚರಿತ್ರೆ ಹೊರಹೊಮ್ಮಲು ಸಾಧ್ಯವಾಗುತ್ತದೆ. ಸುರಪುರದ ವಿಜಯೋತ್ಸವ ಕೇವಲ ರಾಜ್ಯಕ್ಕೆ ಸೀಮಿತವಾಗದೆ, ದೇಶವೇ ಆಚರಿಸಬೇಕು ಎಂದು ಮನವಿ ಮಾಡಿದರು.

ಸುರಪುರ ಸಂಸ್ಥಾನದರಸರ ಕಾಲದಲ್ಲಿ ಸಾರಂಗಧರ ಎಂಬ ವೀರಯೋಧ ಬಗ್ಗೆ ತಿಳಿಸಿದ ಡಾ. ಚೆಲುವರಾಜು, ಪಾಳೆಪಟ್ಟು ಇದ್ದಂತಹ ಸಂದರ್ಭದಲ್ಲಿ ಪಾಳೆಗಾರರನ್ನು ಒಗ್ಗೂಡಿಸಲು ಎಲ್ಲಾ ರಾಜರನ್ನು ಭೇಟಿ ಮಾಡಿದ ಸುರಪುರ ಸಾರಂಗಧರ, ದೊಡ್ಡಬಳ್ಳಾಪುರ, ದೇವನಹಳ್ಳಿಗಳಿಗೆ ಹೋಗಿ ಸುರಪುರ ಸಂಸ್ಥಾನದ ಜೊತೆಗೆ ಕೈಜೋಡಿಸುವಂತೆ ಮನವಿ ಮಾಡಿದ್ದನು. ಇದೆಲ್ಲ ಅಲ್ಲಿನ ಧರ್ಮ ಗ್ರಂಥಗಳಲ್ಲಿ ಉಲ್ಲೇಖವಿದೆ. ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಎಲ್ಲರನ್ನೂ ಒಗ್ಗೂಡಿಸಿ, ಸುರಪುರ ಸೇರುವ ಮೊದಲೇ ಸಾರಂಗಧರ ಭೀಕರ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದನು. ಈ ಕುರಿತು ಬುರ‍್ರಾ ಕಥೆಗಳಲ್ಲಿ ಈಗಲೂ ಕನ್ನಡ, ತೆಲುಗು ಭಾಷೆಯಲ್ಲಿ ಕಾಣಬಹುದು.

ವಿಶೇಷ ಉಪನ್ಯಾಸ ನೀಡಿದ ಬೀಳಗಿ ಆಯುರ್ವೇದ ಮಹಾವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕ ಡಾ. ಲಕ್ಷ್ಮಿಕಾಂತ ವಿ. ಮೊಹರೀರ್, ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಪಡೆಯಬೇಕೆಂಬುದು 24ನೇ ಅರಸ ರಾಜಾ ವೆಂಕಟಪ್ಪ ನಾಯಕರ ಕನಸಾಗಿತ್ತು. ಅದರಂತೆಯೇ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರನ್ನು ಸೋಲಿಸಿದರು. ಬಳಿಕ ಮೋಸದಿಂದ ವೆಂಕಟಪ್ಪ ನಾಯಕರನ್ನು ಬಂಧಿಸಿ, ಕೊಲೆ ಮಾಡಲಾಯಿತು ಎಂದು ವಿವರಿಸಿದರು.

ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯ ಹಾಸ್ಯ ಕಲಾವಿದ, ಯಾದಗಿರಿಯ ಬಸವರಾಜ್‌ ಮಹಾಮನಿ ಮಾತನಾಡಿ, ಇತಿಹಾಸಕ್ಕೆ ಸುರಪುರ ಸಂಸ್ಥಾನ ನೀಡಿದ ಕೊಡುಗೆಯನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಸುರಪುರ ಇತಿಹಾಸ ಪ್ರಸಿದ್ಧಿ ಬಗ್ಗೆ ಎದೆಯುಬ್ಬಿಸಿ ಹೇಳಬೇಕು. ಮೆಡೋಸ್ ಟೇಲರ್ ಬಂಗಲೆ ಐಬಿ ಆಗದೆ ಪ್ರವಾಸೋದ್ಯಮ ಕೇಂದ್ರವಾಗಬೇಕು. ಜನರಿಗೆ ಯಾದಗಿರಿ ಜಿಲ್ಲೆಯಲ್ಲಿರುವ ಹನ್ನೊಂದು ಕೋಟೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಇತಿಹಾಸ ಸಂಶೋಧಕ, ಹಿರಿಯ ನ್ಯಾಯವಾದಿ ಭಾಸ್ಕರರಾವ್ ಮುಡಬೂಳ ಮಾತನಾಡಿ, ಇತಿಹಾಸದ ಕಾರ್ಯಗಳನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಸುರಪುರದ ಇತಿಹಾಸದ ಅಸ್ತಿತ್ವವನ್ನು ಉಳಿಸಬೇಕಿದೆ. ಇತಿಹಾಸ ಸಂರಕ್ಷಿಸುವ ಜವಾಬ್ದಾರಿ ಬಹಳ ಅಗತ್ಯವಾಗಿದೆ. ಐತಿಹಾಸಿಕವಾಗಿರುವ ಕುರುಹಗಳನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಿದೆ ಎಂದರು.

ಸನ್ಮಾನ: ಕಾರ್ಯಕ್ರಮದಲ್ಲಿ ಹೈಕೋರ್ಟ್‌ ನ್ಯಾಯವಾದಿ ಜೆ ಅಗಸ್ಟಿನ್‌, ಕನ್ನಡ ಸಾಹಿತ್ಯ ಸಂಘದ ಬಸವರಾಜ್ ಜಮಾದ್ರಖಾನಿ, ಸಾಮಾಜಿಕ ಹೋರಾಟಗಾರ ಮಾನಪ್ಪ ಹಡಪದ, ಪಿಡಿಓ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಕುಮಾರ್ ಸುಬೇದಾರ್ ಹಾಗೂ ಪತ್ರಕರ್ತ ಆನಂದ್ ಸೌದಿ ಅವರುಗಳನ್ನು ಸುರಪುರದ ಬಲವಂತ ಬಹರಿ ಬಹದ್ದೂರ್‌ ಸಂಸ್ಥಾನದರಸ ವಂಶಸ್ಥ ಡಾ. ರಾಜಾ ಕೃಷ್ಣಪ್ಪ ನಾಯಕ್‌ ಸನ್ಮಾನಿಸಿದರು.

ಬಲವಂತ ಬಹರಿ ಬಹದ್ದೂರ ಸಂಸ್ಥಾನದ ಡಾ. ರಾಜಾ ಕೃಷ್ಣಪ್ಪ ನಾಯಕ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆರೋಗ್ಯಧಿಕಾರಿ ಡಾ. ರಾಜಾ ವೆಂಕಪ್ಪ ನಾಯಕ, ಇತಿಹಾಸಕಾರ ರಾಜಗೋಪಾಲ ವಿಭೂತಿ, ಮರೆಪ್ಪ ನಾಯಕ ಗುಡ್ಡಕಾಯಿ, ರಾಜಕುಮಾರ, ರಮೇಶ ಕುಲಕರ್ಣಿ, ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ, ಶಿವಕುಮಾರ ಮಸ್ಕಿ ಸೇರಿದಂತೆ ಇತರರಿದ್ದರು.

ಕಾರ್ಯಕ್ರಮದಲ್ಲಿನ ನಿರ್ಣಯಗಳು:

ಕಾರ್ಯಕ್ರಮದಲ್ಲಿ ಕೆಲವೊಂದು ನಿರ್ಣಯಗಳನ್ನು ಮಂಡಿಸಿ, ಸರ್ಕಾರದ ಗಮನ ಸೆಳೆಯುವಂತೆ ಕೋರಲಾಯಿತು. ಇತಿಹಾಸ ಸಂಶೋಧಕ ಹಾಗೂ ಸುರಪುರ ಪಿಎಸ್ಐ ಕೃಷ್ಣ ಸುಬೇದಾರ್ ನಿರ್ಣಯಗಳ ಮಂಡಿಸಿದರು.

ಸುರಪುರ ವಿಜಯೋತ್ಸವವನ್ನು ಸರಕಾರದಿಂದ ಆಚರಿಸಬೇಕು, ಸುರಪುರ ಸಮಗ್ರ ಇತಿಹಾಸವನ್ನು ಸರಕಾರ ಅಥವಾ ವಿಶ್ವವಿದ್ಯಾಲಯಗಳಿಂದ ಪ್ರಕಟಿಸಬೇಕು, ಕಲಬುರಗಿ ವಿಮಾನ ನಿಲ್ದಾಣಕ್ಕೆ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ನಾಮಕರಣಗೊಳಿಸಬೇಕು, ಹಳೆಯ ಅರಮನೆಯನ್ನು ವಸ್ತು ಸಂಗ್ರಹಾಲಯವಾಗಿ ರೂಪಿಸಿ, ಐತಿಹಾಸಿಕ ಸ್ಮಾರಗಳನ್ನು ಸಂರಕ್ಷಿಸಬೇಕು, ಶಾಲಾ-ಕಾಲೇಜು, ಉದ್ಯಾನವನ, ರಸ್ತೆಗಳಿಗೆ ಮಹನೀಯರ ಹೆಸರಿಡಬೇಕು.