ಶಾಸಕರ ಬಂಧನದ ನಂತರ ಗೃಹ ಸಚಿವರು ಮನೆಗೆ ಬರಲಿ

| Published : Aug 07 2024, 01:09 AM IST

ಸಾರಾಂಶ

ಗೃಹ ಸಚಿವ ಪರಮೇಶ್ವರ ಅವರು ನಮ್ಮ ಮನೆಗೆ ಬರುವ ಮುನ್ನ ಯಾದಗಿರಿ ಶಾಸಕ ಮತ್ತು ಅವರ ಮಗನನ್ನು ಮೊದಲು ಬಂಧಿಸಬೇಕು ಎಂದು ಮೃತ ಪಿಎಸ್‌ಐ ಪರಶುರಾಮ ಕುಟುಂಬಸ್ಥರು ಒತ್ತಾಯಿಸಿದರು.

ಮೃತ ಪರುಶುರಾಮ ಕುಟುಂಬ ಒತ್ತಾಯ । ಎಸ್ಪಿ ಭೇಟಿ ನೀಡಿದ ವೇಳೆ ಆಕ್ರೋಶ

ಕನ್ನಡಪ್ರಭ ವಾರ್ತೆ ಕಾರಟಗಿ

ಗೃಹ ಸಚಿವ ಪರಮೇಶ್ವರ ಅವರು ನಮ್ಮ ಮನೆಗೆ ಬರುವ ಮುನ್ನ ಯಾದಗಿರಿ ಶಾಸಕ ಮತ್ತು ಅವರ ಮಗನನ್ನು ಮೊದಲು ಬಂಧಿಸಬೇಕು ಎಂದು ಮೃತ ಪಿಎಸ್‌ಐ ಪರಶುರಾಮ ಕುಟುಂಬಸ್ಥರು ಒತ್ತಾಯಿಸಿದರು.

ತಾಲೂಕಿನ ಸೋಮನಾಳ ಗ್ರಾಮದ ಮನೆಗೆ ಆ.೭ರಂದು ಗೃಹ ಸಚಿವ ಜಿ. ಪರಮೇಶ್ವರ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ ಕೊಪ್ಪಳ ಎಸ್ಪಿ ಡಾ. ರಾಮ ಎಲ್. ಅರಸಿದ್ದಿ ಭೇಟಿ ನೀಡಿ, ಸ್ಥಳ ಪರಿಶೀಲನೆ ಮಾಡಿದರು. ಈ ವೇಳೆ ಕುಟುಂಬಸ್ಥರು ಈ ಮೇಲಿನಂತೆ ಒತ್ತಾಯ ಮಾಡಿದರು.

ಪರಶುರಾಮ ನಿಧನದ ಐದನೇ ದಿನದ ಕಾರ್ಯವನ್ನು ಅವರ ಕುಟುಂಬಸ್ಥರು ಹಮ್ಮಿಕೊಂಡಿದ್ದರು. ಈ ಕಾರ್ಯಕ್ಕೆ ರಾಯಚೂರಿನಿಂದ ಅವರ ಪತ್ನಿ ಶ್ವೇತಾ ಸಹ ಆಗಮಿಸಿದ್ದರು.

ಪರಶುರಾಮ ಸಹೋದರರು, ಪತ್ನಿ ಮತ್ತು ಮಾವಂದಿರನ್ನು ಭೇಟಿ ಮಾಡಿದ ಎಸ್ಪಿ, ಗೃಹ ಸಚಿವರು ನಿಮ್ಮ ಸಮಸ್ಯೆ ಆಲಿಸಲು ಬರುತ್ತಿದ್ದಾರೆ. ಯಾವುದೇ ಕಾರಣಕ್ಕೆ ಗಲಾಟೆ ಮಾಡಬೇಡಿ ಎಂದು ಮನವಿ ಮಾಡಿದರು. ಆಗ ಮೃತ ಪಿಎಸ್‌ಐ ಕುಟುಂಬಸ್ಥರು ಮಾತನಾಡಿ, ನಾವು ಅವರನ್ನು ನಮ್ಮ ಮನೆಗೆ ಬರಬೇಡಿ ಎಂದು ಹೇಳಲ್ಲ. ಬದಲಾಗಿ ಇಲ್ಲಿಗೆ ಬರುವ ಮೊದಲು ಆರೋಪಿತ ಯಾದಗಿರಿ ಶಾಸಕ ಚನ್ನಾರೆಡ್ಡಿ ಮತ್ತವರ ಮಗ ಪಂಪನಗೌಡರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದೇವೆ ಎಂದು ಏರು ಧ್ವನಿಯಲ್ಲಿ ಹೇಳಿದರು.

ಇದೇ ವೇಳೆ ಸ್ಥಳದಲ್ಲಿದ್ದ ದಲಿತ ಸಂಘಟನೆಗಳ ಪದಾಧಿಕಾರಿಗಳು ಸಹ ಆಕ್ರೋಶಭರಿತರಾಗಿ ಮಾತನಾಡಿದರೂ ಆ ಎಲ್ಲ ಗುಂಪಿಗೆ ಸಮಾಧಾನದಿಂದಲೇ ಉತ್ತರಿಸಿದ ಎಸ್ಪಿ, ಮನೆ ಒಳಗೆ ತೆರಳಿ, ಮೃತ ಪಿಎಸ್‌ಐ ತಾಯಿ ಮತ್ತು ಪತ್ನಿ ಜೊತಗೂ ಮಾತನಾಡಿದರು.