ಸಾರಾಂಶ
ಗುರುಮಠಕಲ್ : ಮಕ್ಕಳು ಶಾಲೆಯಲ್ಲಿ ಕಲಿಯುವುದಕ್ಕಿಂತ ಹೆಚ್ಚು ಮನೆ ಹಾಗೂ ಸಮಾಜದಿಂದ ಕಲಿಯುತ್ತಾರೆ. ಹಾಗಾಗಿ ಉತ್ತಮ ನಡತೆ, ಆಚಾರ-ವಿಚಾರ ಮುಂತಾದ ಸಂಗತಿಗಳು ಸಿಗುವ ಹಾಗೆ ನೋಡಿಕೊಳ್ಳಬೇಕು. ಮನೆಗಳು ಮಕ್ಕಳಿಗೆ ಸಂಸ್ಕಾರ ನೀಡುವ ಕೇಂದ್ರಗಳಾಗಬೇಕು ಎಂದು ಸಂಪನ್ಮೂಲ ವ್ಯಕ್ತಿ ಭೀಮಣ್ಣ ಬಿ. ವಡವಟ್ ಹೇಳಿದರು.
ಸಮೀಪದ ಕಾಳೆಬೆಳಗುಂದಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನ ವಿಕಾಸ ಕೇಂದ್ರ ವತಿಯಿಂದ ನಡೆದ ಶಿಕ್ಷಣ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಲ್ಯದಲ್ಲಿ ಕಲಿತದ್ದು ಕಟ್ಟಡಕ್ಕೆ ಅಡಿಪಾಯವಿದ್ದಂತೆ. ಜೀವನದಲ್ಲಿ ಭವಿಷ್ಯಕ್ಕೆ ನೆರವಾಗುತ್ತದೆ. ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕಾರ, ಮೌಲ್ಯ ಕಲಿಸಬೇಕು ಎಂದರು.
ಜ್ಞಾನ ವಿಕಾಸ ಸಮನ್ವಯಾಧಿಕಾರಿ ಲಕ್ಷ್ಮೀದೇವಿ ಮಾತನಾಡಿ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಡೆಗ ಮತ್ತು ಮಾತೋಶ್ರೀ ಹೇಮಾವತಿ ಅವರ ಮಾರ್ಗದರ್ಶನದ ಮೂಲಕ ನಮ್ಮ ಸಂಸ್ಥೆ ಹಲವು ಸಾಮಾಜಿಕ ಕಾರ‍್ಯಕ್ರಮಗಳನ್ನು ಮಾಡುತ್ತಿದ್ದು, ಅದರಲ್ಲಿ ಮುಖ್ಯವಾಗಿ ಸಮುದಾಯ ಜ್ಞಾನವೃದ್ಧಿಗೆ ಅನೇಕ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಈ ದೆಸೆಯಲ್ಲಿ ಗ್ರಾಮೀಣ ಭಾಗದ ಮಾತೆಯರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜ್ಞಾನ ಪಡೆಯುವುದರ ಮೂಲಕ ನಿಮ್ಮ ಕುಟುಂಬ ಮತ್ತು ಸಮುದಾಯ ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದರು.
ಈ ವೇಳೆ ಮೇಲ್ವಿಚಾರಕ ಶಿವಕುಮಾರ, ಸೇವಾ ಪ್ರತಿನಿಧಿ ರೆಡ್ಡಪ್ಪ, ಮಹಿಳಾ ಸೇವಾ ಸಂಘದ ಸದಸ್ಯರು ಸೇರಿದಂತೆ ಇತರರಿದ್ದರು.