ಸಾರಾಂಶ
ಚಿತ್ರದುರ್ಗ: ವೈಚಾರಿಕ ಸಂಘರ್ಷಗಳು ಸಂವಾದದ ರೂಪ ಪಡೆದುಕೊಳ್ಳಬೇಕಾದ ತುರ್ತು ಅಗತ್ಯವಿದೆ ಎಂದು ಚಿಂತಕ ಬರಗೂರು ರಾಮಚಂದ್ರಪ್ಪ ಹೇಳಿದರು.
ಇಲ್ಲಿನ ತರಾಸು ರಂಗಮಂದಿರಲ್ಲಿ ಗೆಳೆಯರ ಬಳಗದಿಂದ ಗುರುವಾರ ಆಯೋಜಿಸಿದ್ದ ಕಾಗೆ ಕಾರುಣ್ಯದ ಕಣ್ಣು ಕೃತಿಯ ಮೂರನೇ ಆವೃತ್ತಿ ಜನಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಪ್ರಜಾಸತ್ತಾತ್ಮಕ ದೇಶದಲ್ಲಿ ಇಂದು ಸಂವಾದ ಅಪಾಯದಲ್ಲಿದೆ. ಭಿನ್ನಾಭಿಪ್ರಾಯಗಳು ಬೀದಿ ಜಗಳ ಆಗುತ್ತಿವೆ. ಪರಸ್ಪರ ಸಂವಾದಿಸುವ ವಾತಾವರಣ ಇಂದು ಬೇಕಾಗಿದೆ ಎಂದರು.ಪ್ರಸ್ತುತ ವಿಭಜಕ ಪ್ರವೃತ್ತಿ ಬೆಳೆಯುತ್ತಿದೆ. ಜಾತಿ, ವರ್ಣ, ವರ್ಗದ ಕಾರಣಕ್ಕೆ ವಿಭಜನೆ ಆಗುತ್ತಿದೆ. ಬೌದ್ಧಿಕ ವಲಯದ ವಿಭಜಕತೆ ಭಾರೀ ಅಪಾಯ ತಂದಿಟ್ಟಿದೆ. ಭಿನ್ನಾಭಿಪ್ರಾಯ ಇರುವವರ ಜೊತೆ ಮಾತನಾಡುವುದನ್ನೇ ಅಪಾರ್ಥ ಮಾಡಿಕೊಳ್ಳುವ ಸ್ಥಿತಿಯಿದೆ. ಸಂವಾದಿಸುವ ಮನೋಭಾವ ಪ್ರಜಾಪ್ರಭುತ್ವದ ಲಕ್ಷಣ. ವಿಭಜಕಗಳು ರಸ್ತೆಯಲ್ಲಿರುತ್ತದೆ. ಎರಡೂ ಕಡೆಯ ಭೇಟಿ ಆಗುವುದಿಲ್ಲ. ಸಾಮಾಜಿಕ, ರಾಜಕೀಯ ವಲಯ ವಿಭಜಕವಾಗಿದೆ. ಈಗ ಬೌದ್ಧಿಕ ವಲಯ ವಿಭಜನೆ ಆಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಯಾವುದೋ ಒಂದು ಪಕ್ಷದ ಬಗ್ಗೆ ಸಹಾನುಭೂತಿ ಹೊಂದುವುದು ತಪ್ಪಲ್ಲ. ಆದರೆ, ಆ ಪಕ್ಷ ಅಧಿಕಾರಕ್ಕೆ ಬಂದಾಗ ಆ ಪಕ್ಷವನ್ನು ವಿಮರ್ಶೆ ಮಾಡುವ ಹಕ್ಕು ಉಳಿಸಿಕೊಳ್ಳಬೇಕು. ಮಾಧ್ಯಮಗಳು ಒಂದು ಕಾಲದಲ್ಲಿ ಆಳುವ ಸರ್ಕಾರಗಳ ವಿಮರ್ಶೆ ಮಾಡುತ್ತಿದ್ದವು. ಆದರೆ, ಇಂದು ವಕ್ತಾರರಂತೆ ಕೆಲಸ ಮಾಡುತ್ತಿವೆ. ಚಿಂತನೆಗಳು ಸೃಜನಶೀಲವಾಗಿರಬೇಕು ಸ್ಥಗಿತವಾಗಬಾರದು ಎಂದರು.ಚಿಕ್ಕಂದಿನಿಂದಲೇ ಕಾಗೆ ನೋಡುತ್ತಾ ಬೆಳೆದವನು. ಕರ್ನಾಟಕ ಕಾಗೆ, ಕೋಗಿಲೆಗಳ ನಾಡೂ ಹೌದು.
ಕಾಗೆಯ ಬುದ್ಧಿ ಮನುಷ್ಯರಿಗೆ ಬಂದರೆ ದೇಶ ಚೆನ್ನಾಗಿರುತ್ತದೆ. ಕೊಗಿಲೆಯ ಮೊಟ್ಟೆಗೆ ಕಾಗೆ ಕಾವು ಕೊಟ್ಟು ಮರಿ ಮಾಡುತ್ತದೆ. ಕಾರುಣ್ಯ ಬುದ್ಧನಿಂದ ಬಂದದ್ದು. ಕಾಗೆ ಒಂದು ಅಗಳು ಅನ್ನ ಕಂಡರೆ ಕಾಕಾ ಎಂದು ಎಲ್ಲರನ್ನೂ ಕರೆಯುತ್ತದೆ. ಶ್ರೀಗಂಧದ ನಾಡುಕನ್ನಡ ನಾಡು ಎನ್ನುತ್ತೇವೆ. ಅದೇ ರೀತಿ ಜಾಲಿ ಮರ, ಹೊಂಗೇ ಮರಗಳೂ ಇವೆ.ಆತ್ಮಕಥನಗಳು ಆತ್ಮರತಿಯಾಗುವ ಅಪಾಯ ಇದೆ. ಅಲ್ಲಿ ನಮಗಿಂತ ಬೇರೆಯವರ ಆತ್ಮಗಳೇ ಬರುತ್ತವೆ.
ಈಕೃತಿಯಲ್ಲಿ ನನ್ನ ಆಯ್ದ ಅನುಭವಗಳ ಕಥನವಾಗಿದೆ. ನಾನು ಅನುಭವಿಸಿದ ಕಷ್ಟಗಳಿಗೆ ಕಾರಣರಾದ ಮಹಾನುಭಾವರ ಬಗ್ಗೆ ಹೇಳಿಲ್ಲ. ಘಟನೆಗಳಷ್ಟೇ ನನಗೆ ಮುಖ್ಯ. ವ್ಯಕ್ತಿ ನಿಂದನೆ, ಸ್ವಪ್ರಶಂಸೆ ಮಾಡದೆಯೂ ಅನುಭವ ಹಂಚಿಕೊಳ್ಳಲು ಸಾಧ್ಯ ಎನ್ನುವ ಎಚ್ಚರದಲ್ಲಿ ಈಕೃ ತಿ ಬಂದಿದೆ ಎಂದು ಬರಗೂರು ರಾಮಚಂದ್ರಪ್ಪ ಹೇಳಿದರು.ಕೃತಿ ಬಿಡುಗಡೆ ಮಾಡಿ ಮಾತನಾಡಿದ ರಾಜಪ್ಪ ದಳವಾಯಿ, 6 ತಿಂಗಳಲ್ಲಿ ಮೂರು ಮುದ್ರಣ ಕಾಣುವುದು ಕೃತಿಯ ಸುಯೋಗ. ಬರಗೂರು ಅವರು ನೇರ ನಡೆ, ನುಡಿ ಇರುವ ವ್ಯಕ್ತಿ. ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಕನ್ನಡ ಸಾಹಿತ್ಯದ ಪುನರ್ ಮೌಲ್ಯೀಕರಣ ಎಂಬ ಯೋಜನೆಯಡಿ 11 ಸರಣಿ ಪ್ರಕಟಿಸಿದ್ದರು. ಉಪಸಂಸ್ಕೃತಿ ಯೋಜನೆ ಮೂಲಕ 48 ಸಣ್ಣಪುಟ್ಟ ಜಾತಿಗಳ ಕುರಿತ ಅಧ್ಯಯನ ಮಾಡಿಸಿ ಪುಸ್ತಕ ಪ್ರಕಟಿಸಿದ್ದಾರೆ. ಅವರು ಮಾಡಿರುವ ಕೆಲಸಗಳು ಉಳಿದಿವೆ. ಅಪಸ್ವರಗಳು ಉಳಿದಿಲ್ಲ ಎಂದರು.
ಕೃತಿ ಕುರಿತು ಮಾತನಾಡಿದ ಕವಯತ್ರಿ ತಾರಿಣಿ ಶುಭದಾಯಿನಿ, ಕೃತಿಯನ್ನು ಆತ್ಮಕಥನ ಎಂದು ಕರೆಯದೆ, ಅನುಭವ ಕಥನ ಎಂದು ಬರಗೂರು ಹೇಳಿಕೊಂಡಿದ್ದಾರೆ. ಯಾವ ಆತ್ಮಕಥನವೂ ಪರಿಪೂರ್ಣವಾಗಿರುವುದಿಲ್ಲ. ಅದರಲ್ಲಿ ಮಹತ್ತರ ಅಂಶಗಳುಮಾತ್ರ ಇರುತ್ತವೆ. ಆತ್ಮಕಥನ ಯಾವಾಗಲೂ ಒಂದು ಸವಾಲಾಗಿರುತ್ತದೆ. ಆತ್ಮಕಥೆ ಬರೆಯುವವರಿಗೆ ಎಲ್ಲ ಎಚ್ಚರ, ಜಾಗೃತಿ ಇರುವ ಕಾರಣಕ್ಕೆ ಅನುಭವ ಕಥನವಾಗಿ ಬರೆದಿದ್ದಾರೆ ಎಂದರು.ಬಂಡಾಯ ಸಾಹಿತ್ಯ ಸೇರಿದಂತೆ ಬೇರೆ ಬೇರೆ ಚಳುವಳಿಗಳ ನಾಯಕತ್ವ ವಹಿಸಿಕೊಂಡ ಅವರಿಗೆ, ರಾಜಕಾರಣಿಗಳ ಒಡನಾಟ, ಮುಖ್ಯಮಂತ್ರಿಗಳ ಒಡನಾಟವೂ ಇದ್ದ ಕಾರಣಕ್ಕೆ ಅವರ ರಾಜಕೀಯ ಧೋರಣೆ ಬಗ್ಗೆ ಸಹಜ ಕುತೂಹಲ ಇದ್ದೇ ಇರುತ್ತದೆ. ಸಾಮಾಜಿಕ ಬದ್ಧತೆ ಇಟ್ಟುಕೊಂಡು ಕೆಲಸ ಮಾಡುವಾಗ ಬರುವ ಆಪಾದನೆಗಳನ್ನು ತಾವು ಮಾಡುವ ಕೆಲಸದಿಂದಲೇ ಸರಿಪಡಿಸಬೇಕಾಗುತ್ತದೆ. ಸಾಕಷ್ಟು ಆತ್ಮಕಥೆಗಳು ಸ್ವಪ್ರಶಂಸೆಯ ಹಾದಿ ಹಿಡಿಯುತ್ತದೆ. ಆತ್ಮಘಾತುಕತನ ಮಾಡಿಕೊಂಡು ಬೇರೆಯವರ ಬಗ್ಗೆ ಬರೆದು ಕೆಸರೆರಚಾಟವೂ ಸೇರುವ ಅಪಾಯ ಇರುತ್ತದೆ. ಆದರೆ, ಬರಗೂರು ಕೆಸರೆರಚಾಟ ಇಲ್ಲದೆ, ಪ್ರಜ್ಞಾಪೂರ್ವಕವಾಗಿ ಮೆಲುಧ್ವನಿಯಲ್ಲಿ ನಿರೂಪಿಸಿದ್ದಾರೆ. ಅನುಭವ ಕಥನ ಆತ್ಮಾವಲೋಕನದ ಹಾದಿ ಹಿಡಿದಿದೆ ಎಂದು ತಾರಣಿ ಹೇಳಿದರು.
ಎಸ್ ಆರ್ ಎಸ್ ಕಾಲೇಜಿನ ಆಡಳಿತಾಧಿಕಾರಿ ಡಾ.ರವಿ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್, ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಓ.ಪರಮೇಶ್ವರಪ್ಪ, ಬರಗೂರು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ.ಸುಂದರರಾಜ ಅರಸು, ಡಾ.ಕರಿಯಪ್ಪ ಮಾಳಿಗೆ, ಚಿಕ್ಕಪ್ಪನಹಳ್ಳಿ ಷಣ್ಮುಖ, ಎಂ.ಎನ್.ಅಹೋಬಳಪತಿ, ಗೌನಹಳ್ಳಿ ಗೋವಿಂದಪ್ಪ, ಗೋಪಾಲಸ್ವಾಮಿ ನಾಯಕ, ವಿನಾಯಕ ತೊಡರನಾಳು, ಸಿ.ರಾಜಶೇಖರ್, ಓ.ಮುರಾರ್ಜಿ, ಹೊಳಿಯಪ್ಪ ಇದ್ದರು.