ಸಾರಾಂಶ
ದೊಡ್ಡಬಳ್ಳಾಪುರ: ಚೈಲ್ಡ್ ರೈಟ್ಸ್ ಟ್ರಸ್ಟ್, ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇವರುಗಳ ಸಹಯೋಗದಲ್ಲಿ ಕಲ್ಪನೆಯಿಂದ ಸಾಧ್ಯತೆಯೆಡೆಗೆ ಮಕ್ಕಳ ಹಕ್ಕುಗಳು ಕುರಿತ 2 ದಿನಗಳ ತರಬೇತಿ ಕಾರ್ಯಕ್ರಮ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆಯಿತು.
ಮಕ್ಕಳ ಬದುಕು, ರಕ್ಷಣೆ, ಅಭಿವೃದ್ಧಿ ಹಾಗೂ ಭಾಗವಹಿಸುವಿಕೆಯ ಹಕ್ಕುಗಳನ್ನು ಎಲ್ಲರಿಗೂ ತಲುಪಿಸಲು ಹಾಗೂ ಮಕ್ಕಳ ಹಕ್ಕುಗಳು ಎಲ್ಲೆಡೆ ಜಾರಿಯಾಗುವಂತೆ ಮಾಡುವುದು ತರಬೇತಿಯ ಉದ್ದೇಶವಾಗಿತ್ತು.ಕಾರ್ಯಕ್ರಮದ ಕುರಿತು ಚೈಲ್ಡ್ ರೈಟ್ಸ್ ಟ್ರಸ್ಟ್ ನ ಕಾರ್ಯಕಾರಿ ನಿರ್ದೇಶಕ ಡಾ. ವಾಸುದೇವ ಶರ್ಮ ಮಾತನಾಡಿ, ಮಕ್ಕಳ ರಕ್ಷಣೆಯೂ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮಕ್ಕಳ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರಿಗೆ ಅರಿವು ಇರಬೇಕಿದೆ. ಸಮಾಜದಲ್ಲಿ ಗಂಡು ಹೆಣ್ಣು ತಾರತಮ್ಯ ಕಾಣುತ್ತೇವೆ. ಇದನ್ನು ಹೋಗಲಾಡಿಸುವ ಕೆಲಸವಾಗಬೇಕು. ಮಕ್ಕಳ ಹಕ್ಕುಗಳ ಪಾಲನೆ ಆಗಬೇಕಿದೆ. ಮಕ್ಕಳ ಹಕ್ಕುಗಳ ಮಾಹಿತಿ ಸಮುದಾಯವನ್ನು ತಲುಪಬೇಕು. ಯುನಿಸೆಫ್ ಮುಖ್ಯಸ್ಥರು ಇತ್ತೀಚಿಗೆ ಹೇಳಿದಂತೆ ಮಕ್ಕಳ ಮೇಲೆ ಸಂಪನ್ಮೂಲ ಹೂಡಬೇಕು ಅದು ಅವರು ದೊಡ್ಡವರು ಆದ ಮೇಲೆ ದೊಡ್ಡ ಫಲಿತಾಂಶ ನೀಡುತ್ತದೆ ಎಂದು ತಿಳಿಸಿದರು.
ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಚಿದಾನಂದಮೂರ್ತಿ ಮಾತನಾಡಿ, ಮಕ್ಕಳಿಗೆ ಜೀವಿಸುವ ರಕ್ಷಣೆ ಹೊಂದುವ ಹಕ್ಕು ಬಹಳ ಮುಖ್ಯ ಇತ್ತೀಚೆಗೆ ನಮ್ಮ ಊರಿನಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ದುರ್ಘಟನೆ ಕಾಡುತ್ತವೆ. ಇಬ್ಬರು ಚಿಕ್ಕ ವಯಸ್ಸಿನ ಮಕ್ಕಳು ಮರಣ ಹೊಂದಿರುವುದು ಬೇಸರದ ಸಂಗತಿ. ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡುವುದು ಹಾಗೂ ರೂಢಿಸುವುದು ಅಗತ್ಯ ಎಂದರು.ದೊಡ್ಡಬಳ್ಳಾಪುರ ಮಹಿಳಾ ಠಾಣೆಯ ವೃತ್ತ ನಿರೀಕ್ಷಕ ಡಾ. ನವೀನ್ ಕುಮಾರ್ ಮಾತನಾಡಿ, ಮಕ್ಕಳ ಸಮಸ್ಯೆಗಳು, ಅಪೌಷ್ಟಿಕತೆಯಿಂದ ಮರಣ ಹೊಂದುತ್ತಿರುವ ತಾಯಿ ಮತ್ತು ಮಕ್ಕಳ ಸ್ಥಿತಿಗೆ ಕಾರಣ, ಗಂಡು ಹಾಗೂ ಹೆಣ್ಣಿನ ಅನುಪಾತ ಸಮಸ್ಯೆ, ಮಕ್ಕಳು ಹಾಗೂ ಮಹಿಳೆಯರಿಗೆ ಸರ್ಕಾರ ನೀಡುತ್ತಿರುವ ಯೋಜನೆಗಳು ಹಾಗೂ ಇದಕ್ಕೆ ಸಂಬಂಧಪಟ್ಟ ಇಲಾಖೆಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ನೀಡಿ, ಮಕ್ಕಳ ಹಕ್ಕುಗಳ ಮಹತ್ವವನ್ನು ವಿವರಿಸಿದರು.
ಪ್ರಾಂಶುಪಾಲರಾದ ಮಾಯಾ ಸಾರಂಗಪಾಣಿ, ಡಾ. ಸುಷ್ಮಾ ಎಚ್, ಪ್ರೇರಣಾ ಸಂಚಾಲಕ ಸಂತೋಷ್, ಚೈಲ್ಡ್ ರೈಟ್ಸ್ ಟ್ರಸ್ಟ್ ನ ಲಕ್ಷ್ಮೀ, ಯೋಜನಾ ಸಂಚಾಲಕರಾದ ನಾಗಮಣಿ, ಪ್ರಶಾಂತಿ, ಪೊಲೀಸ್ ಇಲಾಖೆಯ ಅನ್ನಪೂರ್ಣ, ಯುವ ಸಂಚಲನದ ನವೀನ್ ಕುಮಾರ್ ಹಾಗೂ ಕಾಲೇಜಿನ ಪ್ರಾಧ್ಯಾಪಕರುಗಳು ಉಪಸ್ಥಿತರಿದ್ದರು.ಫೋಟೋ-
5ಕೆಡಿಬಿಪಿ1- ದೊಡ್ಡಬಳ್ಳಾಪುರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲ್ಪನೆಯಿಂದ ಸಾಧ್ಯತೆಯೆಡೆಗೆ ಮಕ್ಕಳ ಹಕ್ಕುಗಳು ಕುರಿತ 2 ದಿನಗಳ ತರಬೇತಿ ಕಾರ್ಯಕ್ರಮ ನಡೆಯಿತು.