ಸಾರಾಂಶ
ಗದಗ: ಗದಗ ಕ್ಷೇತ್ರದ ಎಲ್ಲ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ನಾವು ಸಿದ್ಧ. ಶಾಲೆಗಳ ಫಲಿತಾಂಶ ಸುಧಾರಣೆ ನಮ್ಮೇಲ್ಲರ ಗುರಿಯಾಗಿರಲಿ ಎಂದು ಕಾನೂನು, ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಹೇಳಿದರು.
ತಾಲೂಕಿನ ಹಿರೇಹಂದಿಗೋಳ ಗ್ರಾಮದಲ್ಲಿ ಭಾನುವಾರ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಿರೇಹಂದಿಗೋಳ ಗ್ರಾಮದಲ್ಲಿ ನೂತನವಾಗಿ ನಿರ್ಮಿತವಾದ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಕೊಠಡಿಗಳ ಉದ್ಘಾಟನೆ, ಅಂಗನವಾಡಿ ಕಟ್ಟಡ ಭೂಮಿ ಪೂಜೆ ಹಾಗೂ ಶ್ರೀ ಶರಣಬಸವೇಶ್ವರ ಕಲ್ಯಾಣ ಮಂಟಪ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿದರು.ದಿಲ್ಲಿಯಲ್ಲಿರುವ ಸರ್ಕಾರಿ ಶಾಲೆಗಳ ವ್ಯವಸ್ಥೆ ಹಾಗೂ ಫಲಿತಾಂಶ ಸುಧಾರಣೆ ಕುರಿತಂತೆ ಅಧ್ಯಯನಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಕಳುಹಿಸಿ ಕೊಡಲಾಗಿತ್ತು ಅವರು ಅಧ್ಯಯನ ನಡೆಸಿ ಬಂದು ಸದ್ಯ ಗದಗ ಜಿಲ್ಲೆಯಲ್ಲಿ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಿಲ್ಲಿಯಲ್ಲಿರುವಂತೆ ಶಾಲೆಗಳು ಸುಧಾರಣೆಯಾಗಲು ಅಗತ್ಯವಿರುವ ಎಲ್ಲ ಸೌಲಭ್ಯ ಒದಗಿಸಲು ಸಿದ್ಧವಾಗಿದ್ದೇವೆ. ಶಿಕ್ಷಕಸಮೂಹ ಫಲಿತಾಂಶ ಸುಧಾರಣೆ ಮಾಡಲಿ ಎಂದರು.
ಈ ಹಿಂದೆ ಶ್ರೇಣಿಕೃತ ವರ್ಗ ವ್ಯವಸ್ಥೆಯಲ್ಲಿ ಮೇಲಿದ್ದವರು ಎಲ್ಲ ರಂಗದಲ್ಲಿಯೂ ಮೇಲೆ ಇರುತ್ತಿದ್ದರು ಅದರಂತೆ ಶೈಕ್ಷಣಿಕ ವ್ಯವಸ್ಥೆಯಲ್ಲಿಯೂ ಮೇಲ್ವರ್ಗದಲ್ಲಿಯೇ ಇರುತ್ತಿದ್ದರು. ಈಗ ಆ ವ್ಯವಸ್ಥೆ ಬದಲಾಗಿದ್ದು ಕಟ್ಟ ಕಡೆಯ ಸಮುದಾಯದ ವ್ಯಕ್ತಿಯು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಬಹುದಾಗಿದೆ.ಇದೆಲ್ಲದಕ್ಕೂ ಕಾರಣಿಭೂತವಾದದ್ದು ಶಿಕ್ಷಣ ಅದನ್ನು ಮಕ್ಕಳಿಗೆ ಸರಿಯಾಗಿ ಒದಗಿಸೋಣ ಎಂದರು.ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಸಮಾಜದಲ್ಲಿ ಅಗಾಧ ಆರ್ಥಿಕ ಸುಧಾರಣೆ ತರಲು ಸಾಧ್ಯವಾಗಿದೆ. ಪಂಚ ಗ್ಯಾರಂಟಿಗಳ ಮೂಲಕ ಆರ್ಥಿಕ ಅಭಿವೃದ್ಧಿಯೊಂದಿಗೆ ಕುಟುಂಬದ ವಾರ್ಷಿಕ ವರಮಾನವು ಅಧಿಕವಾಗಿದೆ. ಇದು ಸಹ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಲಿ ಎಂದರು.
ಈ ಸಂದರ್ಭದಲ್ಲಿ ಸಹಕಾರ ರತ್ನ ಪುರಸ್ಕೃತ ಧಾರವಾಡ ಕೆಎಂಎಫ್ ನಿರ್ದೇಶಕ ಎಚ್.ಜಿ. ಹಿರೇಗೌಡ್ರ ಅವರನ್ನು ಸನ್ಮಾನಿಸಲಾಯಿತು.ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ರವಿ ಮೂಲಿಮನಿ, ಎಂ.ಐ. ಪಾಟೀಲ, ಬಿಂಕದಕಟ್ಟಿ ಗ್ರಾಪಂ ಅಧ್ಯಕ್ಷೆ ತುಳಸಾ ತಿಮ್ಮನಗೌಡ್ರ, ಉಪಾಧ್ಯಕ್ಷೆ ದ್ಯಾಮವ್ವ ಆರಟ್ಟಿ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ನಿಂಗಪ್ಪ ತಳವಾರ, ಬಸವರಾಜ ಕಡೆಮನಿ, ಎಸ್.ಎನ್.ಬಳ್ಳಾರಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್.ಎಸ್. ಬುರಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳ ತಾಪಸ್ಕರ, ಎಸ್.ಎನ್. ನಡುವಿನಮನಿ, ಶಾಲಾ ಮುಖ್ಯ ಶಿಕ್ಷಕ ಗಂಗಾಧರಗೌಡ ಗೌಡರ, ಜಿ.ಕೆ. ಆದಪ್ಪಗೌಡರ, ಯು.ಬಿ. ಜಕ್ಕನಗೌಡರ ಸೇರಿದಂತೆ ಮತ್ತಿತರರು ಇದ್ದರು.