ಸಾರಾಂಶ
ಪುರಸಭೆ ಸಭಾಂಗಣದಲ್ಲಿ ನಡೆದ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ
ಕನ್ನಡಪ್ರಭ ವಾರ್ತೆ ಬೀರೂರು ಮಹಾತ್ಮ ಗಾಂಧಿಯವರ ಆಶಯದ ಸತ್ಯ, ಅಹಿಂಸೆ ಮತ್ತು ಜಾತಿ, ವರ್ಗಭೇದವಿರದ ಕನಸಿನ ಭಾರತ ನಿರ್ಮಾಣವಾಗಲಿ ಎಂದು ಪುರಸಭೆ ಅಧ್ಯಕ್ಷೆ ವನಿತಮಧು ಆಶಿಸಿದರು.ಪುರಸಭೆ ಕಚೇರಿಯಲ್ಲಿ ಬುಧವಾರ ನಡೆದ 155ನೇ ಗಾಂಧಿ ಜಯಂತಿ ಮತ್ತು 120ನೇ ಲಾಲ್ ಬಹದ್ದೂರು ಶಾಸ್ತ್ರೀ ಜಯಂತಿ ಅಂಗವಾಗಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈದು ಅವರು ಮಾತನಾಡಿದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಎಲ್ಲ ವರ್ಗ-ವರ್ಣ ಸೇರಿದಂತೆ ಅಡೆತಡೆ ಗಳನ್ನು ನಿವಾರಿಸಿ ದೇಶದ ಜನತೆ ಒಗ್ಗೂಡಿ ಬ್ರಿಟಿಷರ ವಿರುದ್ಧ ಹೋರಾಡುವಂತೆ ಪ್ರೇರೇಪಿಸಿ ನಾಯಕತ್ವವಹಿಸಿದ್ದ ಗಾಂಧೀಜಿ ಸ್ಥಾನ, ಮಾನಗಳಿಗೆ ಆಸೆ ಪಟ್ಟವರಲ್ಲ. ಸರಳತೆ, ಸ್ವಚ್ಛತೆ ಮೂಲಕ ಹಳ್ಳಿಗಳ ದೇಶ ಭಾರತ ಗ್ರಾಮಸ್ವರಾಜ್ಯವಾಗಬೇಕು ಎಂದು ಬಯಸಿದ್ದರು.ಗ್ರಾಮಗಳು ಸ್ವಾವಲಂಬನೆ ಸಾಧಿಸಿ ದೇಶದ ಒಳಿತಿಗೆ ದುಡಿಯಬೇಕು ಎಂದು ಚಿಂತಿಸಿದ್ದರು.ಆದರೆ ಇಂದು ಗ್ರಾಮಗಳು ನಗರಿಕರಣದ ಪ್ರಭಾವಕ್ಕೆ ಒಳಗಾಗಿವೆ. ಇದು ಸಾಮಾಜಿಕ ವ್ಯವಸ್ಥೆ ಮೇಲೆ ಸಾಕಷ್ಟು ಪರಿಣಾಮ ಬೀರಲಿದ್ದು, ಗ್ರಾಮೀಣ ವ್ಯವಸ್ಥೆ ಸುಧಾರಣೆಗೊಂಡು ಸಣ್ಣ ಪಟ್ಟಣ ಗಳಲ್ಲಿ ಸ್ವಾವಲಂಬಿ ಬದುಕಿಗೆ ಆಸರೆ ದೊರೆತು ಒತ್ತಡಮುಕ್ತ ಜೀವನದ ಮೂಲಕ ಸುಧಾರಣೆ ಸಾಧ್ಯವಾಗಲಿ ಎನ್ನುವ ಅವರ ಆಶಯ ಈಡೇರಲು ಎಲ್ಲರೂ ಶ್ರಮಿಸೋಣ ಎಂದು ನುಡಿದರು.
ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಮಾತನಾಡಿ, ಜಗತ್ತಿನ ಮಾದರಿ ವ್ಯಕ್ತಿತ್ವದ ಗಾಂಧೀಜಿ ಮತ್ತು ಶಾಸ್ತ್ರೀಯವರ ಬದುಕು ಇಂದಿನ ಪೀಳಿಗೆಗೆ ಪ್ರೇರಕವಾಗಬೇಕು. ದೇಶವನ್ನು ಸ್ವಚ್ಛ ಮತ್ತು ಸ್ವಸ್ಥಗೊಳಿಸುವಲ್ಲಿ ಎಲ್ಲರ ಸಹಕಾರದ ಅಗತ್ಯವೂ ಇದೆ. ದೇಶ ನಿರ್ಮಲವಾಗಲು ಮೊದಲು ನಾವು ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿ ಮಹಾತ್ಮರ 155ನೇ ಜಯಂತಿಯನ್ನು ಅರ್ಥಪೂರ್ಣವಾಗಿಸೋಣ ಎಂದು ಕರೆ ನೀಡಿದರು.ಪುರಸಭೆ ಸದಸ್ಯ ಬಿ.ಆರ್.ಮೋಹನ್‌ಕುಮಾರ್ ಮಾತನಾಡಿ, ತನ್ನ ನಡೆ-ನುಡಿಯಿಂದ ಮಹಾತ್ಮ ಎನಿಸಿಕೊಂಡ ಗಾಂಧೀಜಿ ಇಡೀ ಜಗತ್ತಿನ ಸತ್ಯಾಗ್ರಹ ಸ್ವರೂಪಕ್ಕೆ ಹೊಸರೂಪ ನೀಡಿದವರು. ಸ್ವಚ್ಛತೆ ಮೂಲಕ ಆರೋಗ್ಯಪೂರ್ಣ ಸಮಾಜ ಕಟ್ಟಲು ಸಾಧ್ಯ ಎಂದು ಪ್ರತಿಪಾದಿಸಿದ್ದರು. ಆದರೆ ಇಂದಿನ ಸಮಾಜದಲ್ಲಿ ಜನಸಂಖ್ಯೆ ಹೆಚ್ಚಳ ಮತ್ತು ಬೆಳೆಯುತ್ತಿರುವ ಕಸದ ಪ್ರಮಾಣ ವಿಶ್ವವನ್ನೇ ಆವರಿಸುತ್ತಿದೆ. ಭೂಮಿ ಇರುವಷ್ಟೇ ಇದೆ. ನಾವು ಸ್ವಚ್ಛತೆಗೆ ಆದ್ಯತೆ ನೀಡದಿದ್ದರೆ ಅಸ್ವಸ್ಥ ಸಮುದಾಯವಾಗಿ ಬೆಳೆಯಬೇಕಾಗುತ್ತದೆ. ಅಂತೆಯೇ ಸರಳತೆ ಕೂಡಾ ನಮ್ಮಿಂದ ದೂರಾಗುತ್ತಿದೆ. ದೇಶದ ಪ್ರಧಾನಿಯಾದರೂ ಗಾಂಧೀಜಿ ಚಿಂತನೆಗಳ ಸಾಕಾರವಾಗಿ ಬದುಕಿದ ಲಾಲ ಬಹದ್ದೂರ ಶಾಸ್ತ್ರೀ ಬದುಕೂ ನಮಗೆ ಆದರ್ಶವಾದರೆ ಒಳಿತು ಎಂದು ತಿಳಿಸಿದರು.
ಪುರಸಭೆ ಉಪಾಧ್ಯಕ್ಷ ನಾಗರಾಜ್ ಸದಸ್ಯ ಜಿಮ್ ರಾಜು, ಜ್ಯೋತಿ ಸಂತೋಷ್ ಕುಮಾರ್, ಮಾಜಿ ಸದಸ್ಯ ಬಿ.ಎಂ.ರುದ್ರಪ್ಪ, ಮಾತನಾಡಿದರು.ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಸುದರ್ಶನ್, ಮಾನಿಕ್ ಭಾಷ, ಲೋಕೆಶಪ್ಪ, ಸಹನ ವೆಂಕಟೇಶ್, ಭಾಗ್ಯಲಕ್ಷ್ಮಿ ಮೋಹನ್, ಮೀನಾಕ್ಷಮ್ಮ, ಶಾರದ ರುದ್ರಪ್ಪ, ಸೇರಿದಂತೆ ಹಿರಿಯ ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷ್ಮಣ್, ನೂರುದ್ದೀನ್ ಹಾಗೂ ಮತ್ತಿತರ ಪುರಸಭೆ ಸದಸ್ಯರು, ಸಿಬ್ಬಂದಿ, ಸಾರ್ವಜನಿಕರು ಇದ್ದರು.2ಬೀರೂರು 1 ಬೀರೂರಿನ ಪುರಸಭೆ ಸಭಾಂಗಣದಲ್ಲಿ ಬುಧವಾರ ಮಹಾತ್ಮ ಗಾಂಧಿಯವರ 155ನೇ ಜನ್ಮದಿನದ ಅಂಗವಾಗಿ ಮಹಾತ್ಮಗಾಂಧಿ ಮತ್ತು ಲಾಲ್ ಬಹದ್ದೂರು ಶಾಸ್ತ್ರೀ ಭಾವಚಿತ್ರಕ್ಕೆ ಅಧ್ಯಕ್ಷೆ ವನಿತಾಮಧು, ಮುಖ್ಯಾಧಿಕಾರಿ ಜಿ.ಪ್ರಕಾಶ್ ಸೇರಿದಂತೆ ಸರ್ವ ಸದಸ್ಯರು ಪುಷ್ಪಾರ್ಚನೆ ಮಾಡಿದರು.