ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಯುವ ಪ್ರಜ್ಞೆ, ಆತ್ಮಪ್ರಜ್ಞೆಯನ್ನು ಯುವಕರು ಮೈಗೂಡಿಸಿಕೊಂಡಾಗ ಮಾತ್ರ ವೈಚಾರಿಕ ಜಗತ್ತನ್ನು ನಿರ್ಮಾಣ ಮಾಡಲು ಸಾಧ್ಯ. ಆ ನಿಟ್ಟಿನಲ್ಲಿ ಮುಂದುವರೆದರೆ ಶತಮಾನದ ಭಾರತವನ್ನು ವಿಜ್ಞಾನ ಭಾರತವಾಗಿ ಕಾಣಲು ಸಾಧ್ಯವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.
ಜಿಲ್ಲಾ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಕುವೆಂಪುರವರ ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಭಾಷಣದ ಐವತ್ತನೇ ವರ್ಷಾಚರಣೆ ಪ್ರಯುಕ್ತ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಯುವ ವೈಜ್ಞಾನಿಕ ಸಂಸತ್ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದರು.ಪ್ರಸ್ತುತ ಸಮಾಜದಲ್ಲಿ ಸ್ವಾರ್ಥ ಮನಸ್ಥಿತಿಗಳು ತುಂಬಿಕೊಂಡಿವೆ. ಧನದಾಹಿ ಚಿಂತನೆಗಳು ಹೆಚ್ಚಿವೆ. ಇದನ್ನು ಹೋಗಲಾಡಿಸಬೇಕಾದರೆ ಕುವೆಂಪು ವಿಚಾರಧಾರೆಗಳು ಯುವಕರನ್ನು ಎಚ್ಚರಗೊಳಿಸಬೇಕು. ಕುವೆಂಪು ಅವರು ನೀಡಿದ ಸಂದೇಶಗಳು ಈಗಲೂ ಈಡೇರಿಲ್ಲ. ವ್ಯಕ್ತಿ ಪ್ರಜ್ಞೆ, ಜಾತಿ ಪ್ರಜ್ಞೆ, ಕೋಮು ಪ್ರಜ್ಞೆ, ಧರ್ಮಪ್ರಜ್ಞೆ, ಸಂಕುಚಿತ ಪ್ರಜ್ಞೆಗೆ ಅವಕಾಶವನ್ನು ನೀಡದೆ ಎಲ್ಲರೂ ವೈಚಾರಿಕ ಪ್ರಜ್ಞೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸಲಹೆ ನೀಡಿದರು.
ವೈಚಾರಿಕ ಮನೋಭಾವದೊಂದಿಗೆ ನಡೆಯುತ್ತಾ ಸಂವಿಧಾನದ ಮೌಲ್ಯಗಳನ್ನು ಅರ್ಥ ಮಾಡಿಕೊಂಡರೆ ಸಂವಿಧಾನದತ್ತ ಆತ್ಮಶ್ರೀ ಭಾರತವನ್ನು ಶಕ್ತಿಶಾಲಿಯಾಗಿ ಕಟ್ಟುವುದಕ್ಕೆ ಸಾಧ್ಯವಾಗಲಿದೆ. ಮನಸ್ಸು, ಬುದ್ಧಿ, ಸಂಸ್ಕಾರದಂತಹ ಉದಾತ್ತ ಧ್ಯೇಯಗಳನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ವೈಚಾರಿಕ ಪ್ರಜ್ಞೆ ಹೆಚ್ಚಿದಂತೆಲ್ಲಾ ಬುದ್ಧಿ ವಿಕಾಸವಾಗುವುದಲ್ಲದೆ, ವ್ಯಕ್ತಿತ್ವದ ವಿಕಸನವೂ ಆಗುತ್ತದೆ ಎಂದು ನುಡಿದರು.ಕುವೆಂಪು ವೈಚಾರಿಕ ಪ್ರಜ್ಞೆಯ ದಿಕ್ಸೂಚಿಯಾಗಿದ್ದಾರೆ. ಅವರ ವಿಚಾರಧಾರೆಗಳು, ಚಿಂತನೆಗಳು ವೈಜ್ಞಾನಿಕ ನೆಲೆಗಟ್ಟಿನ ಮೇಲೆ ನಿಂತಿವೆ. ಹಾಗಾಗಿಯೇ ಕುವೆಂಪು ವಿಚಾರಗಳನ್ನು ಯುವಕರು ಹೆಚ್ಚು ಅಧ್ಯಯನ ಮಾಡುವ ಮೂಲಕ ವಿಚಾರಶೀಲರಾಗಿ ಬೆಳವಣಿಗೆ ಕಾಣಬೇಕು ಎಂದರು.
ಉದ್ಘಾಟನೆ ನೆರವೇರಿಸಿದ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ವಿಶ್ರಾಂತಕುಲಪತಿ ಡಾ.ಸಬೀಹಾ ಭೂಮಿಗೌಡ ಮಾತನಾಡಿ, ಸರಳವಾದ ಸಿದ್ಧ ಉತ್ತರ ಕೊಡುವ ವಿಚಾರಗಳಿಗೆ ಯುವಜನಾಂಗ ಮರುಳಾಗಬಾರದು. ಕೆಲವೊಮ್ಮೆ ಮತಾಚಾರ ನಮ್ಮನ್ನು ಕುರುಡಾಗಿಸುತ್ತದೆ. ನಮ್ಮ ಆಲೋಚನೆಗಳಳಿಗೆ ಬಂದ ಪೊರೆ ಕಳಚಿಕೊಂಡು ನೋಡಿದಾಗ ಜೀವವಿರೋಧಿ ಸಂಗತಿಗಳು ಅರಿವಾಗಿ ಅವುಗಳನ್ನು ಬದಲಾಯಿಸುವ ಮನಸ್ಥಿತಿ ಹುಟ್ಟಬೇಕು ಎಂದರು.ಯುವಸಮೂಹ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಯಾವುದೇ ವಿಚಾರವನ್ನು ಕುತೂಹಲದಿಂದ ಕೇಳಿಸಿಕೊಳ್ಳಬೇಕು. ವಯಸ್ಸಾದಂತೆ ನಮ್ಮಲ್ಲಿ ಪ್ರಶ್ನೆಗಳೇ ಇರುವುದಿಲ್ಲ. ಪ್ರಸ್ತುತ ದಿನಗಳಲ್ಲಿ ಪ್ರಶ್ನೆ ಮಾಡದಿರುವುದೇ ಒಳ್ಳೆಯತನ, ಆದರ್ಶ ಎಂಬ ಭಾವನೆ ಬೆಳೆಯುತ್ತಿದೆ. ನಮ್ಮೆದುರಿಗೆ ಕಾಣುವ ಎಲ್ಲ ಸಂಗತಿಗಳನ್ನು ಪ್ರಶ್ನಿಸಿ, ಪರಾಮರ್ಶಿಸಿ, ವಿವೇಚನೆಯಿಂದ ನೋಡಬೇಕು. ಅಮೂಲ್ಯ ಜೀವಪರ ಸಸಂಗತಿಯನ್ನು ವಿವೇಕಯುತವಾಗಿ ಬಳಸುವ ಎಚ್ಚರವೂ ನಮ್ಮಲ್ಲಿರಬೇಕು ಎಂದರು.
ಮನುಷ್ಯನ ಮನಸ್ಸು ವೈಚಾರಿಕ, ವೈಜ್ಞಾನಿಕ ಧರ್ಮಕ್ಕೆ ತೆರೆದುಕೊಳ್ಳಬೇಕು. ಧರ್ಮದ ಅಸ್ಮಿತೆಯನ್ನು ಬಿಟ್ಟು ಧರ್ಮಾತೀತವಾಗಿ ಬದುಕಿದಾಗ ಸತ್ಯದ ದರ್ಶನವಾಗುತ್ತದೆ. ಯುವಕರಲ್ಲಿ ಅಪಾರವಾದ ಸಾಮರ್ಥ್ಯ, ಪುಟಿಯುವ ಉತ್ಸಾಹ, ಅಸಾಧ್ಯವಾದುದನ್ನು ಸಾಧಿಸುವ ಸಾಮರ್ಥ್ಯವಿದೆ. ಅದನ್ನು ಅರಿತು ಮುನ್ನಡೆಯಬೇಕು. ವಿಜ್ಞಾನದ ಸತ್ಯ, ಪ್ರಾಮಾಣಿಕತೆಯನ್ನು ಕಲಿಸುತ್ತದೆ. ಯಾವುದೇ ವಿಚಾರವನ್ನು ವಿವೇಚನೆ ಮಾಡದೆ ಒಪ್ಪಿಕೊಳ್ಳುವುದೇ ಮೌಢ್ಯ. ಅದಕ್ಕೆ ಎಂದಿಗೂ ಅವಕಾಶ ನೀಡದೆ ಪರಾಮರ್ಶಿಸಿ, ವಿವೇಚನೆಯಿಂದ ನೋಡುವ ಮನೋಭಾವಗಳು ಸೃಷ್ಟಿಯಾಗಬೇಕು ಎಂದರು.ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜು ಅಧ್ಯಕ್ಷತೆ ವಹಿಸಿದ್ದರು. ರೈತ ಮುಖಂಡರಾದ ಸುನಂದಾ ಜಯರಾಂ, ಪರಿಷತ್‌ನ ನಿರ್ದೇಶಕಿ ಪ್ರಭಾವತಿ, ಜಿಲ್ಲಾಧ್ಯಕ್ಷ ಸಿ.ಶಿವಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಜಿ.ಎನ್.ಕೆಂಪರಾಜು, ಕೆ.ವಿ.ವೆಂಕಟಾಚಲಯ್ಯ, ಡಿ.ಸಿ.ಮಹೇಂದ್ರ, ಶಿವಶಂಕರ್ ಇತರರಿದ್ದರು.