ಸಾರಾಂಶ
ಅಖಿಲ ಭಾರತ ವೀರಶೈವ ಮಹಾಸಭಾದ 24ನೇ ಮಹಾಧಿವೇಶನದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಕರೆಕನ್ನಡಪ್ರಭ ವಾರ್ತೆ ದಾವಣಗೆರೆ
ವೀರಶೈವ ಲಿಂಗಾಯತರು ಒಳ ಪಂಗಡಗಳ ಗುದ್ದಾಟದಿಂದ ಹೊರ ಬಂದು, ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಇಂತಹ ಮಹಾ ಅಧಿವೇಶನಗಳಿಗೆ ಅರ್ಥ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿವಿಮಾತು ಹೇಳಿದ್ದಾರೆ.ನಗರದ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಮಹಾಸಭಾ ಹಮ್ಮಿಕೊಂಡಿದ್ದ 24ನೇ ಮಹಾಧಿವೇಶನದ ಸಮಾರೋಪದಲ್ಲಿ ಮಾತನಾಡಿದ ಅವರು, ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪನವರು ಸಮಾಜವನ್ನು ಒಗ್ಗೂಡಿಸಬೇಕು ಎಂದರು. ನಮ್ಮಲ್ಲಿನ ಭಿನ್ನಾಭಿಪ್ರಾಯ ಬಿಟ್ಟು, ಮುಂದೆ ಸಾಗಬೇಕೆಂಬ ನಿಟ್ಟಿನಲ್ಲಿ ಶಾಮನೂರು ಶಿವಶಂಕರಪ್ಪ ಶ್ರಮ ಹಾಕಿದ್ದಾರೆ. ವೀರಶೈವ ಲಿಂಗಾಯತ ಸಮಾಜ ಅತ್ಯಂತ ಗಟ್ಟಿಯಾದ ಸಮಾಜ ಇದಾಗಿದ್ದು, ಒಗ್ಗಟ್ಟಿನ ಬಲ ಹೊಂದಿದೆ. ಇತರೆ ಸಮುದಾಯಗಳನ್ನು ಒಟ್ಟಿಗೆ ಕರೆದೊಯ್ದಾಗ ಮಾತ್ರ ನಮಗೂ ಶಕ್ತಿ ಬರುತ್ತದೆ. ಎಲ್ಲಾ ವರ್ಗದವರನ್ನು ಒಟ್ಟಿಗೆ ಕರೆದೊಯ್ಯೋಣ ಎಂದು ಅವರು ತಿಳಿಸಿದರು. ಬಹು ವರ್ಷದಿಂದಲೂ ವೀರಶೈವ ಲಿಂಗಾಯತರನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಬೇಕೆಂಬ ಹೋರಾಟ ಇದೆ. ಅದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಶರಣ ಪರಂಪರೆ, ಸಮಾಜದ ಪರಿಕಲ್ಪನೆ, ಕಟ್ಟಕಡೆಯ ವ್ಯಕ್ತಿಗೂ ಸಮಾನತೆ ನೀಡುವುದು ನಮ್ಮ ಧರ್ಮದ ಧ್ಯೇಯ. ಇದು ವಿಶ್ವಾದ್ಯಂತ ಪಸರಿಸಿದೆ. 12ನೇ ಶತಮಾನದಲ್ಲಿ ಎಲ್ಲರನ್ನೂ ಒಟ್ಟೊಟ್ಟಿಗೆ, ಜೊತೆ ಜೊತೆಗೆ ಕರೆದೊಯ್ದು ಸಮಾಜ ನಮ್ಮದು. ಎಲ್ಲಾ ಮಠಾಧೀಶರನ್ನು ಬಳಸಿಕೊಂಡು, ಸಮಾಜವೂ ವಿಸ್ತಾರವಾಗಿ ಬೆಳೆಯುತ್ತಿದೆ ಎಂದು ಅವರು ಹೇಳಿದರು.
ಭಾರತದ ಹಿಂದು ಧರ್ಮದ ಆಚಾರ, ವಿಚಾರ, ಸಂಸ್ಕೃತಿಯ ಮೇಲೆ ನಡೆದಷ್ಟು ದಾಳಿ, ದೌರ್ಜನ್ಯಗಳು ಜಗತ್ತಿನ ಯಾವುದೇ ದೇಶದಲ್ಲೂ ನಡೆದಿಲ್ಲ. ಧರ್ಮವು ಇಲ್ಲದೇ ಇದ್ದಿದ್ದರೆ ಭಾರತ ಎಂದೋ ನಾಶವಾಗಿರುತ್ತಿತ್ತು. ಮಠ ಮಾನ್ಯಗಳು ನಮ್ಮ ಸಂಸ್ಕೃತಿಯ ಬೇರುಗಳಿದ್ದಂತೆ. ಮಠ ಮಾನ್ಯಗಳು ಸರ್ಕಾರವೊಂದು ಮಾಡಬೇಕಾದ ಕೆಲಸವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಮಾಡುತ್ತಿದ್ದು, ಇದೇ ಕಾರಣಕ್ಕೆ ಇಂದಿಗೂ ಭಾರತ ಉಳಿದಿದೆ ಎಂದು ಅವರು ವಿವರಿಸಿದರು. ವೀರಶೈವ ಲಿಂಗಾಯತ ಮಠಗಳು ನೀಡುತ್ತಿರುವ ತ್ರಿವಿಧ ದಾಸೋಹದಿಂದಾಗಿ ಸರ್ಕಾರದ ಮೇಲಿನ ಹೊಣೆ ಸಾಕಷ್ಟು ಕಡಿಮೆಯಾಗಿದೆ. ಕಾಯಕವೇ ಕೈಲಾಸ ಎಂಬಂತೆ ಶಾಂತಿಯ ನೆಲೆವೀಡಾದ ಕರ್ನಾಟಕವನ್ನು ಮತ್ತಷ್ಟು ಬೆಳೆಸಲು ನಮ್ಮ ಶಕ್ತಿ ಬಳಸೋಣ. ಪಕ್ಷಬೇಧ ಮರೆತು, ಎಲ್ಲರನ್ನೂ ಒಟ್ಟಾಗಿ ದಾವಣಗೆರೆ ಮಹಾಧಿವೇಶನದಲ್ಲಿ ಅಭಾವೀಮ ಸೇರಿಸಿದೆ. ಮಠ ಮಾನ್ಯಗಳ ಮಠಾಧೀಶರನ್ನು ಇಲ್ಲಿ ಸೇರಿಸಿದ್ದು ಕಡಿಮೆ ಸಾಧನೆಯಲ್ಲ. ಅದೇ ರೀತಿ ಸಮಾಜವೂ ಒಳ ಪಂಗಡಗಳನ್ನು ಮರೆತು, ಮಹಾಸಭಾದಡಿ ಸಂಘಟಿತ ಶಕ್ತಿಯಾಗಿ ಏಕತೆ ಮೆರೆಯಬೇಕು ಎಂದು ಯಡಿಯೂರಪ್ಪ ಕರೆ ನೀಡಿದರು....................................
ಸಮಾಜದ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಇಲ್ಲ!ವೀರಶೈವ ಲಿಂಗಾಯತ ಅಧಿಕಾರಿಗಳಿಗೆ ಈಚಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲವೆಂಬ ಮಾತು ಕೇಳಿ ಬರುತ್ತಿವೆ. ಈ ಬಗ್ಗೆ ಸರ್ಕಾರದಲ್ಲಿ ಇರುವಂತಹ ಸಮಾಜದ ಶಾಸಕರು ಗಮನ ಹರಿಸಬೇಕು. ವೀರಶೈವ ಲಿಂಗಾಯತ ಸಮುದಾಯದ ಅಧಿಕಾರಿಗಳ ಕಡೆಗೂ ಒತ್ತು ನೀಡಬೇಕು. ಯಾವುದೇ ಸಚಿವರು, ಜನ ಪ್ರತಿನಿಧಿಗಳು ಯಾವುದೇ ಧರ್ಮಗಳನ್ನು ತುಷ್ಟೀಕರಣ ಮಾಡದೇ, ಅತಿಯಾಗಿ ಓಲೈಸದೇ, ಲಭ್ಯವಿರುವ ಅನುದಾನ ಸೂಕ್ತ ರೀತಿ ಹಂಚಿಕೆ ಮಾಡಿ, ಎಲ್ಲರ ವಿಶ್ವಾಸ ಗಳಿಸಬೇಕು. ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳು.