ಸಾರಾಂಶ
ಕಿನ್ನಾಳ ಗ್ರಾಮ ದತ್ತು ಸ್ವೀಕಾರ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕೊಪ್ಪಳಗ್ರಾಮದ ಸ್ವಚ್ಛತೆಯ ಜೊತೆಗೆ ಮನಸ್ಸು ಮತ್ತು ಅಂತರಂಗವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನಸ್ಸಿನಲ್ಲಿನ ಕಲ್ಮಶಗಳನ್ನು ತೆಗೆದು ಶುದ್ಧಿಯಾಗಿಸಿಕೊಳ್ಳುವ ಸಂಕಲ್ಪ ಮಾಡಬೇಕು ಎಂದು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಗ್ರಾಪಂ ಸಹಯೋಗದಲ್ಲಿ ನಡೆದ ಕಿನ್ನಾಳ ಗ್ರಾಮ ದತ್ತು ಸ್ವೀಕಾರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಎಲ್ಲರೂ ನ್ಯಾಯಕ್ಕಾಗಿ ನ್ಯಾಯಾಂಗದ ಮೊರೆ ಹೋಗುತ್ತೀರಿ. ಆದರೆ ನಿಮ್ಮ ಸುದೈವ. ನಿಮ್ಮೂರಿನ ಸ್ವಚ್ಛತೆಗಾಗಿ ನ್ಯಾಯಾಂಗವೇ ಇಲ್ಲಿಗೆ ಬಂದಿದೆ. ನಿಮ್ಮೂರನ್ನು ದತ್ತು ಪಡೆದು ಸ್ವಚ್ಛತೆ ಮಾಡುವ ಸಂಕಲ್ಪ ಮಾಡಿದೆ. ಇದು ನಿಜಕ್ಕೂ ಸಂತಸದ ವಿಚಾರ ಎಂದರು.ನಾವು ಬರಿ ಸ್ವಚ್ಛ ಭಾರತ ಎಂದು ಕೈಯಲ್ಲಿ ಕಸಬರಿಗೆ ಹಿಡಿದು ತೋರಿಸಿದರೆ ಸಾಲದು, ಸ್ವಚ್ಛತೆ ವಿಷಯ ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು ಅದರಂತೆ ನಡೆಯಬೇಕು ಎಂದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಸಿ. ಪ್ರಾಸ್ತಾವಿಕ ಮಾತನಾಡಿ, ಈ ಗ್ರಾಮಕ್ಕೆ ಒಂದು ಸುಸಜ್ಜಿತ ರಸ್ತೆಯಿಲ್ಲ ಎಂಬುದು ಮಾಧ್ಯಮದಲ್ಲಿ ವರದಿಯಾಗಿತ್ತು. ಈ ಗ್ರಾಮದ ಯುವಕರೇ ಆ ರಸ್ತೆ ದುರಸ್ತಿ ಮಾಡಿದ್ದು ನಮ್ಮ ಗಮನ ಸೆಳೆಯಿತು. ಗ್ರಾಮದಲ್ಲಿ ಒಗ್ಗಟ್ಟಿದೆ. ಆ ಕಾರಣಕ್ಕಾಗಿ ನ್ಯಾಯಾಲಯದಿಂದ ನಿಮ್ಮೂರನ್ನು ದತ್ತು ಪಡೆದಿದ್ದೇವೆ. ಎಲ್ಲ ಇಲಾಖೆಗಳ ಅಧಿಕಾರಿಗಳೊಂದಿಗೂ ನಾವು ಚರ್ಚೆ ಮಾಡಿದ್ದೇವೆ. ನಿಮ್ಮೂರನ್ನು ಸ್ವಚ್ಛ ಮಾಡುವ ಸಂಕಲ್ಪ ಮಾಡಿದ್ದೇವೆ. ನಾವು ಯಾವುದೇ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡಲ್ಲ. ನಮ್ಮ ಕೆಲಸವನ್ನು ನಾವು ಮಾಡುತ್ತೇವೆ ಎಂದರು.ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಮಹಾಂತೇಶ ಸಂಗಪ್ಪ ದರಗದ, ಕುಮಾರ ಡಿ.ಕೆ., ಸರಸ್ವತಿದೇವಿ, ರಾಮಪ್ಪ ಒಡೆಯರ್, ಆದಿತ್ಯ ಕುಮಾರ, ಭಾಗ್ಯಲಕ್ಷ್ಮಿ, ರಂಗಸ್ವಾಮಿ, ವಕೀಲರಾದ ಆಸೀಫ್ ಅಲಿ, ಎ.ವಿ.ಕಣವಿ, ಬೆಳ್ಳಪ್ಪ, ಕೊಪ್ಪಳ ತಹಸೀಲ್ದಾರ್ ವಿಠ್ಠಲ್ ಚೌಗಲೆ, ಹರಿ ಶಂಕರ್, ತಾಪಂ ದುಂಡಪ್ಪ ತುರಾದಿ, ಗ್ರಾಪಂ ಅಧ್ಯಕ್ಷೆ ಕರಿಯಮ್ಮ ಉಪ್ಪಾರ, ಉಪಾಧ್ಯಕ್ಷ ದುರುಗಪ್ಪ ಡಂಬರ, ಹೆಚ್ಚುವರಿ ಎಸ್ಪಿ ಹೇಮಂತಕುಮಾರ, ಕಾಮನಕಟ್ಟೆ ಗೆಳೆಯರ ಬಳಗ, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.