ಸಾರಾಂಶ
ಶಾಸಕ ದರ್ಶನ್ ಧ್ರುವನಾರಾಯಣ್
- ಶಾಸಕ ದರ್ಶನ್ ಧ್ರುವನಾರಾಯಣ್
-----ಕನ್ನಡಪ್ರಭ ವಾರ್ತೆ ನಂಜನಗೂಡು
ಬಕಾರ್ಡಿ ಕಂಪನಿ ತಮ್ಮ ಸಿಎಸ್ ಆರ್ ಅನುದಾನವನ್ನು ಬಳಸಿ ಐತಿಹಾಸಿಕ ಅರಸನ ಕೆರೆಯ ಜೀರ್ಣೋದ್ದಾರ ಮಾಡಿರುವುದು ಶ್ಲಾಘನೀಯ ಕೆಲಸವಾಗಿದೆ. ರೈತರು ಈ ಕೆರೆಯ ಸಂರಕ್ಷಣೆ ಮಾಡುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.ತಾಲೂಕಿನ ಚಿನ್ನದ ಗುಡಿಹುಂಡಿ ಬಳಿಯ ಅವರು ತಾಲೂಕಿನ ಚಿನ್ನದಗುಡಿ ಹುಂಡಿ ಬಳಿಯಲ್ಲಿ ಬಕಾರ್ಡಿ ಕೈಗಾರಿಕೆಯವರು ತಮ್ಮ ಸಿಎಸ್ ಆರ್ ಅನುದಾನ ಬಳಸಿ ಜೀರ್ಣೋದ್ಧಾರ ಪಡಿಸಿರುವ ಅರಸನಕೆರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಪೂರ್ವಜನರು ಜಮೀನುಗಳಲ್ಲಿ ಮಳೆ ನೀರು ನಿಲ್ಲಲು ಒಡ್ಡುಗಳನ್ನು ನಿರ್ಮಿಸುತ್ತಿದ್ದರು, ಹಾಗೆಯೇ ಊರಿಗೊಂದು ಕೆರೆ ನಿರ್ಮಿಸುತ್ತಿದ್ದರು. ಇಂದಿನ ದಿನಗಳಲ್ಲಿ ಕೆರೆಗಳು ನಾಶವಾಗುತ್ತಿರುವ ಕಾರಣ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದರಿಂದ ಇಂದಿನ ದಿನಗಳಲ್ಲಿ ಮಳೆಯಿಲ್ಲದೆ ಭೂಮಿ ಆಳಕ್ಕೆ ಅಗೆದರೂ ಸಹ ನೀರು ದೊರಕುತ್ತಿಲ್ಲ, ಇನ್ನೂ ನಾವು ಎಚ್ಚೆತ್ತುಕೊಂಡು ಕೆರೆಗಳ ಸಂರಕ್ಷಣೆಗೆ ಮುಂದಾಗದಿದ್ದರೆ ನಮಗೆ ಕುಡಿಯುವ ನೀರಿಗೂ ತೊಂದರೆ ಎದುರಾಗಬಹುದಾಗಿದೆ. ಕೆರೆ ತುಂಬುವುದರಿಂದ ಪರಿಸರ ಸಂರಕ್ಷಣೆ, ಜೀವ ವೈವಿದ್ಯಗಳನ್ನು ಸಂರಕ್ಷಿಸುವ ಜೊತೆಗೆ ಅಂತರ್ಜಲ ಹೆಚ್ಚಾಗಿ ಈ ಭಾಗದ ರೈತರ ಜಮೀನುಗಳಿಗೆ ನೀರು ದೊರಕಿ ಅನುಕೂಲವಾಗಲಿದೆ. ಆದ್ದರಿಂದ ಎಲ್ಲರೂ ಕೆರೆ ಕಟ್ಟೆಗಳ ಸಂರಕ್ಷಣೆ ಮೂಲಕ ಪರಿಸರವನ್ನು ಸಂರಕ್ಷಿಸಲು ಮುಂದಾಗಬೇಕು ಎಂದರು.ಮಾಜಿ ಗ್ರಾಪಂ ಅಧ್ಯಕ್ಷ ಕುಳ್ಳಯ್ಯ ಮಾತನಾಡಿದರು.
ಅರಸನ ಕೆರೆ ಪಕ್ಕದಲ್ಲಿ ಎಲ್ಆರ್ಎಫ್ ಭೂಸುಧಾರಣೆ ಕಾಯ್ದೆಯಡಿ ಮಂಜೂರಾಗಿರುವ ವೀರದೇವನಪುರ ಗ್ರಾಮದ ರೈತರ ಜಮೀನುಗಳನ್ನು ಪೋಡಿ ಮಾಡಿ ದುರಸ್ತಿಪಡಿಸಿಕೊಡಬೇಕೆಂದು ಶಾಸಕ ದರ್ಶನ್ ಧ್ರುವನಾರಾಯಣ್ ಅವರಿಗೆ ವೀರದೇವನಪುರ ರೈತರು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಪ್ರದೀಪ್ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಶ್ರೀಕಂಠನಾಯಕ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಪ್ರದೀಪ್ ಕುಮಾರ್, ಮುಖಂಡರಾದ ವಿಜಯಕುಮಾರ್, ಶ್ರೀನಿವಾಸಮೂರ್ತಿ, ರಂಗದಾಸ್, ನಾಗರಾಜು, ಕುಮಾರ್ಗೌಡ, ದೊರೆಸ್ವಾಮಿನಾಯಕ, ಗ್ರಾಪಂ ಸದಸ್ಯ ಶಿವಸ್ವಾಮಿ, ಬಕಾರ್ಡಿ ಕಂಪನಿ ನಿರ್ದೇಶಕ ಮುತ್ತುಕುಮಾರ್, ಹ್ಯಾಂಡ್ಸ್ ಆನ್ ಸಂಸ್ಥೆ ಅಧ್ಯಕ್ಷ ಗುರುನಂದನ್, ಹರ್ಷತೇಜ್ ಇದ್ದರು.