ರೈತರ ಪರ ಕಾನೂನು ಅನುಷ್ಠಾನಗೊಳ್ಳಲಿ: ವಿನಾಯಕ ಮುದೇನೂರು

| Published : Nov 07 2025, 02:45 AM IST

ಸಾರಾಂಶ

ಕಳೆದ ಎರಡು ದಶಕಗಳಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಹಲವಾರು ಕಾರ್ಪೊರೇಟ್‌ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸಾವಿರಾರು ಕೋಟಿ ರು. ನೆರವು ನೀಡಿದೆ. ಆದರೆ ರೈತರ ಪರ ಕಾನೂನುಗಳನ್ನು ಜಾರಿಗೊಳಿಸಲು ಮೀನಮೇಷ ಎಣಿಸುತ್ತಿವೆ ಕೃಷಿಕ ವಿನಾಯಕ ಮುದೇನೂರು ಆಕ್ರೋಶ ವ್ಯಕ್ತಪಡಿಸಿದರು.

ಕೊಟ್ಟೂರು: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡದಿರುವುದು ರೈತರ ಪರ ಎಂದು ಹೇಳಿಕೊಳ್ಳುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ತಂತ್ರಜ್ಞಾನ ಪದವೀಧರ ಹಾಗೂ ಕೃಷಿಕ ವಿನಾಯಕ ಮುದೇನೂರು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ಜಿ.ಕೆ. ಅಮರೀಶ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿ ಮಾತನಾಡಿದ ಅವರು, ಕಳೆದ ಎರಡು ದಶಕಗಳಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಹಲವಾರು ಕಾರ್ಪೊರೇಟ್‌ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸಾವಿರಾರು ಕೋಟಿ ರು. ನೆರವು ನೀಡಿದೆ. ಆದರೆ ರೈತರ ಪರ ಕಾನೂನುಗಳನ್ನು ಜಾರಿಗೊಳಿಸಲು ಮೀನಮೇಷ ಎಣಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಂಎಸ್‌ಪಿ ಕಾನೂನು ಭದ್ರತೆಗಾಗಿ ರೈತರು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಸಿ 2 ಪ್ಲಸ್ ಶೇ. 50 ಆಧಾರದ ಮೇಲೆ 23 ಬೆಳೆಗಳಿಗೆ ಕಾನೂನು ಭದ್ರತೆ ನೀಡಬೇಕೆಂಬ ಬೇಡಿಕೆ ಇನ್ನೂ ಅನುಷ್ಠಾನವಾಗಿಲ್ಲ. ರೈತರಿಗೆ ಒಂದು ನ್ಯಾಯ, ಕಾರ್ಪೊರೇಟ್‌ ಸಂಸ್ಥೆಗಳಿಗೆ ಒಂದು ನ್ಯಾಯ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಪಟ್ಟಣದ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಪರಿಸ್ಥಿತಿ ಅಂತಹ ಅನ್ಯಾಯಕ್ಕೆ ಸಾಕ್ಷಿ. ಮೆಕ್ಕೆಜೋಳ ಕ್ವಿಂಟಲ್‌ಗೆ ₹1500ರಿಂದ ₹1800ಕ್ಕೆ ಇಳಿದಿದೆ. ಎಂಎಸ್‌ಪಿ ಧರಕ್ಕಿಂತಲೂ ₹500ರಿಂದ ₹900 ಕಡಿಮೆಯಾಗಿದೆ. ಖರೀದಿ ವ್ಯವಸ್ಥೆಯ ಕೊರತೆ, ಮಾರುಕಟ್ಟೆ ದಬ್ಬಾಳಿಕೆ ಮತ್ತು ತಪ್ಪು ನೀತಿಗಳ ಕಾರಣದಿಂದಾಗಿ ರೈತರಿಗೆ ನಷ್ಟ ಉಂಟಾಗುತ್ತಿದೆ ಎಂದು ಹೇಳಿದರು.

ಕೂಡಲೇ ಸರ್ಕಾರ ಬೆಂಬಲ ಬೆಲೆ ಅಡಿಯಲ್ಲಿ ಬೆಳೆಗಳನ್ನು ಖರೀದಿಸಿ, ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ದಿವಾಕರ ಸಂಗಮೇಶ್ವರ, ವಿಠ್ಠಲ ಗಜಾಪುರ, ಅಜ್ಜಯ್ಯ ಮುಂತಾದ ಯುವ ಕೃಷಿಕರು ಇದ್ದರು.