ಸಾರಾಂಶ
ಕುಕನೂರು:
ಸಮಾನತೆ ಭಾವ ಹೃದಯಾಂತರಾಳದಿಂದ ಒಡಮೂಡಿ ಬಂದಾಗ ಮಾತ್ರ ಸಮಾನತೆ ಬೆಳಕು ಪ್ರಜ್ವಲಿಸಲು ಸಾಧ್ಯವೆಂದು ಪದ್ಮಶ್ರೀ ಪುರಸ್ಕೃತೆ, ಜಾನಪದ ಕಲಾವಿದೆ ಡಾ. ಬಿ. ಮಂಜಮ್ಮ ಜೋಗತಿ ಹೇಳಿದರು.ತಾಲೂಕಿನ ಮಂಗಳೂರು ಗ್ರಾಮದಲ್ಲಿ ಸೋಮವಾರ ರಾತ್ರಿ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಸಮಾನತೆ ಬೆಳಕು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅವಮಾನಗಳೇ ಮನುಷ್ಯನ ಯಶಸ್ಸಿನ ಮೆಟ್ಟಿಲು. ಅವಮಾನವನ್ನು ಸಾಧನೆಗೆ ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು. ಸಾಧಿಸುವವರೆಗೂ ಅವಮಾನ ನಿತ್ಯ ತಲೆಯಲ್ಲಿ ಗುಣುಗುಡುತ್ತಿರಬೇಕು. ಬುದ್ಧ, ಬಸವ, ಅಂಬೇಡ್ಕರ್ ಅವರು ಸಮಾಜದ ಸಮಾನತೆಯನ್ನು ಕಾಣಲು ಹೋರಾಡಿದರು. ಸಮಾನತೆ ಎಂಬುದು ಎಲ್ಲಿಯೂ ಹೋರಾಟ ಮಾಡಿ ತರಬೇಕಿಲ್ಲ. ಪ್ರತಿಯೊಬ್ಬರು ತಮ್ಮ ಹೃದಯದಲ್ಲಿ ಎಲ್ಲರೂ ಸಮಾನರು ಎಂದು ಭಾವಿಸಿ ಅಪ್ಪಿಕೊಂಡು ನಡೆದರೆ ಅದುವೇ ಸಮಾನತೆ ಬೆಳಕು ಎಂದ ಅವರು, ಜೀವನದಲ್ಲಿ ಸಂಸ್ಕಾರ ಹಾಗೂ ಶಿಕ್ಷಣ ಪಡೆದುಕೊಳ್ಳಬೇಕು ಎಂದರು.ಜಗತ್ತಿನಲ್ಲಿ ಎಲ್ಲರೂ ಸಮಾನರು. ಯಾರು ದೊಡ್ಡವರಲ್ಲ, ಚಿಕ್ಕವರಲ್ಲ. ಪ್ರತಿಯೊಬ್ಬರ ಆತ್ಮದಲ್ಲಿ ಕೂಡ ಪರಮಾತ್ಮನಿರುತ್ತಾನೆ. ಒಳ್ಳೆಯ ಕಾರ್ಯ ಮಾಡಲು ಆಗದಿದ್ದರೂ ಕೆಟ್ಟ ಕಾರ್ಯ ಮಾಡಬೇಡಿ ಎಂದ ಅವರು, ಮಕ್ಕಳಿಗೆ ಕನ್ನಡ ಶಾಲೆಗಳಲ್ಲಿ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕಡಿಮೆ ಆಗದಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಶರಣಪ್ಪ ಉಮಚಗಿ, ಬುದ್ಧ. ಬಸವ, ಅಂಬೇಡ್ಕರ್ ಅವರ ಆಶಯಗಳನ್ನು ಮೈಗೂಡಿಸಿಕೊಂಡರೆ ಪ್ರತಿಯೊಬ್ಬರು ಸಾಧಕರಾಗಿ ಗುರುತಿಸಿಕೊಳ್ಳುತ್ತಾರೆ. ಸಮಾನತೆ ಬೆಳಕು ಕಾರ್ಯಕ್ರಮ ಪ್ರತಿ ವರ್ಷ ಆಗಬೇಕು ಎಂದರು.ಜಿಪಂ ಮಾಜಿ ಸದಸ್ಯ ಈರಪ್ಪ ಕುಡುಗುಂಟಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಅವರ ಜೀವನ ಪಯಣವೇ ನಮಗೆ ಮಾರ್ಗದರ್ಶನವಾಗುತ್ತದೆ ಎಂದರು.
ಜಿಪಂ ಮಾಜಿ ಸದಸ್ಯ ಅಶೋಕ ತೋಟದ ಮಾತನಾಡಿದರು. ಮಂಜಮ್ಮ ಜೋಗತಿ ಅವರಿಗೆ ಗ್ರಾಮಸ್ಥರು ಉಡಿ ತುಂಬಿದರು. ಸಾಧಕರಾದ ಪ್ರತಿಭಾ ಗೊಂಡಬಾಳ, ಪ್ರಜ್ವಲ ಸುರೇಶ ಮಡಿವಾಳ, ಯಮನೂರಪ್ಪ ಬಂಗಾಳ ಗಿಡದ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ರವಿ ಆಗೋಲಿ ಆಯೋಜಿಸಿದ್ದರು.ಅರಳೆಲೆ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಗ್ರಾಪಂ ಅಧ್ಯಕ್ಷ ಸಕ್ರಪ್ಪ ಮಂಗಳಪ್ಪ ಚಿನ್ನೂರು, ಉಪಾಧ್ಯಕ್ಷೆ ಅನ್ನಪೂರ್ಣ ಮ್ಯಾಗಳೇಷಿ, ಈಶಪ್ಪ ದೊಡ್ಡಮನಿ, ವಿಶ್ವನಾಥ ಎಂ, ಸುರೇಶ ಮಡಿವಾಳರ, ಕೃಷಿ ಅಧಿಕಾರಿ ನಿಂಗಪ್ಪ, ಮರಿಸ್ವಾಮಿ ಪೂಜಾರ, ಯೋಗೇಂದ್ರ ಪೂಜಾರ, ರವಿ ತೋಟದ, ಮಾರುತಿ ಯಡಿಯಾಪುರ, ಪ್ರಕಾಶ ಚಿನ್ನೂರು, ಪ್ರಕಾಶ ಇದ್ದರು. ನಂತರ ರಸಮಂಜರಿ ಕಾರ್ಯಕ್ರಮ ಜರುಗಿದವು.