ಸಾರಾಂಶ
ಕಾರವಾರ: ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲ ಮತದಾರರ ಮನದಲ್ಲಿ ಮೂಡಿಸುವ ಮೂಲಕ ನಮ್ಮ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.
ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ವತಿಯಿಂದ ಸ್ವೀಪ್ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ್ದ ಪಂಜಿನ ಮರವಣಿಗೆಯಲ್ಲಿ ರವೀಂದ್ರನಾಥ ಠಾಗೂರ್ ಕಡಲತೀರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮೇ 7ರಂದು ಮತದಾನ ನಡೆಯಲಿದ್ದು, ಮತದಾರರು ಯಾವುದೇ ಆಸೆ, ಆಮಿಷ, ಒತ್ತಡಗಳಿಗೆ ಒಳಗಾಗದೇ ಆ ದಿನ ಜಿಲ್ಲೆಯ ಎಲ್ಲ ಮತದಾರರು ತಪ್ಪದೇ ತಮ್ಮ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕಿದೆ, ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಮತದಾನ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಅಪರಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಪೌರಾಯುಕ್ತ ರವಿಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ವಿವಿಧ ಸಂಘಟನೆಗಳ ಸದಸ್ಯರು, ನಗರಸಭೆಯ ಸಿಬ್ಬಂದಿ ಮತ್ತಿತರರು ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭಗೊಂಡ ಪಂಜಿನ ಮೆರವಣಿಗೆಯು ಪಿಕಳೆ ರಸ್ತೆ, ಅಂಬೇಡ್ಕರ್ ಸರ್ಕಲ್ ಮೂಲಕರವೀಂದ್ರನಾಥ ಠಾಗೂರ್ ಕಡಲತೀರದ ವರೆಗೆ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ, ಅಪರ ಜಿಲ್ಲಾಧಿಕಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ವಿವಿಧ ಸಂಘಟನೆಗಳ ಸದಸ್ಯರು ಮತ್ತಿತರರು ಭಾಗವಹಿಸಿದ್ದು, ಕಡಲತೀರದಲ್ಲಿ ಪಂಜಿನ ಬೆಳಕಿನ ಮೂಲಕ ಮತದಾನ ಜಾಗೃತಿಯ ಘೋಷಣೆ ರಚಿಸಲಾಯಿತು.