ಸಾಹಿತಿಗಳು ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಲಿ: ಎಲ್.ಎಸ್. ಶಾಸ್ತ್ರಿ

| Published : Jul 15 2024, 01:50 AM IST

ಸಾಹಿತಿಗಳು ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಲಿ: ಎಲ್.ಎಸ್. ಶಾಸ್ತ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾಹಿತಿಗಳು ಆತ್ಮಗೌರವ ಕಳೆದುಕೊಳ್ಳದೆ ಅನ್ಯಾಯವಾದಾಗ ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಪತ್ರಕರ್ತ ಹಾಗೂ ಸಾಹಿತಿ ಎಲ್.ಎಸ್. ಶಾಸ್ತ್ರಿ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಸಾಹಿತಿಗಳು ಆತ್ಮಗೌರವ ಕಳೆದುಕೊಳ್ಳದೆ ಅನ್ಯಾಯವಾದಾಗ ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಪತ್ರಕರ್ತ ಹಾಗೂ ಸಾಹಿತಿ ಎಲ್.ಎಸ್. ಶಾಸ್ತ್ರಿ ಹೇಳಿದರು.

ನಗರದ ಜೆ.ಎಸ್.ಎಸ್. ಮಹಾವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ಶ್ರೀ ಪರಮೇಶ್ವರಿ ಪ್ರಕಾಶನ ಹಾಗೂ ಸಾಹಿತ್ಯ ಚಿಂತನ ಕಮ್ಮಟ ಗೋಕಾಕ ಇವರ ಸಂಯುಕ್ತಾಶ್ರಯದಲ್ಲಿ ಪ್ರೊ.ಶಕುಂತಲಾ ದಂಡಗಿ ಅವರ ಆತ್ಮತೃಪ್ತಿ ಕಾದಂಬರಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾಮಾಜಿಕ ಸ್ವಾಸ್ಥ್ಯ ಕಾಯ್ದುಕೊಳ್ಳುವಂತಹ ಸಾಹಿತ್ಯ ಜನರಿಗೆ ನೀಡುವ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಬೇಕು. ಜನರಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವ ಕಾರ್ಯವಾಗಬೇಕು. ಯುವ ಪೀಳಿಗೆಯಲ್ಲಿ ಕನ್ನಡ ಸಾಹಿತ್ಯದ ಕುರಿತು ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.

ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಜಾನಪದ ತಜ್ಞ ಡಾ.ಸಿ.ಕೆ. ನಾವಲಗಿ, ಆತ್ಮ ತೃಪ್ತಿ ಕಾದಂಬರಿ ಅರ್ಥಪೂರ್ಣ ಶೀರ್ಷಿಕೆಯೊಂದಿಗೆ ಓದುಗರಿಗೆ ತೃಪ್ತಿ ನೀಡುತ್ತದೆ. ಸಮಾಜ ಬದಲಾವಣೆ ಅಂಶದೊಂದಿಗೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತದೆ ಎಂದರು.

ಕಾದಂಬರಿ ಕುರಿತು ಮಾತನಾಡಿದ ಸವದತ್ತಿಯ ಹಿರಿಯ ಸಾಹಿತಿ ಪ್ರಾಚಾರ್ಯ ಡಾ.ವೈ.ಎಂ. ಯೊಕೊಳಿ ಕಾದಂಬರಿಗಳ ಸಾಮ್ರಾಟ್ ಕೃಷ್ಣಮೂರ್ತಿ ಪುರಾಣಿಕ, ಬಸವರಾಜ ಕಟ್ಟಿಮನಿ, ಬೆಟಗೇರಿ ಕೃಷ್ಣಶರ್ಮ, ಚಂದ್ರಶೇಖರ್ ಕಂಬಾರ ಅವರಂತಹ ಮಹಾನ್‌ ಸಾಹಿತಿಗಳು ಹುಟ್ಟಿದ ನೆಲ ಗೋಕಾಕ. ಅವರ ಪ್ರೇರಣೆಯಿಂದ ಹಲವಾರು ಸಾಹಿತಿಗಳು ತಮ್ಮ ಕಾದಂಬರಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ಅಂತಹ ಸಾಹಿತಿಗಳಲ್ಲಿ ಒಬ್ಬರಾದ ಶಕುಂತಲಾ ದಂಡಗಿ ಅವರು ಸುಂದರವಾದ ಕಾದಂಬರಿ ರಚಿಸಿ ಓದುಗರೊಂದಿಗೆ ತಾವು ಆತ್ಮ ತೃಪ್ತಿ ಹೊಂದಿದ್ದಾರೆ. ಸಮಾಜದಲ್ಲಿ ನಡೆಯುವ ನೈಜ ಘಟನೆಗಳೊಂದಿಗೆ ಮನುಷ್ಯ ಒಳ್ಳೆಯವನಾಗಬೇಕು. ಎಂಬುದನ್ನು ತಮ್ಮ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ ಎಂದರು.

ವೇದಿಕೆಯಲ್ಲಿ ಗೋಕಾಕ ಶಿಕ್ಷಣ ಸಂಸ್ಥೆಯ ಚೇರ್ಮನ್‌ ವಿಶ್ವಾನಾಥ್ ಕಡಕೋಳ, ಕೆಎಲ್‌ಇ ನಿರ್ದೇಶಕ ಜಯಾನಂದ ಮುನ್ನವಳ್ಳಿ, ಸಾಹಿತಿಗಳಾದ ಮಹಾಲಿಂಗ ಮಂಗಿ, ಪ್ರೋ.ಚಂದ್ರಶೇಖರ್ ಅಕ್ಕಿ, ಜಯಾನಂದ ಮಾದರ, ಈಶ್ವರಚಂದ್ರ ಬೆಟಗೇರಿ, ಶಕುಂತಲಾ ದಂಡಗಿ, ಪ್ರಾಚಾರ್ಯ ಡಾ.ವಿರಾಜ ಮೋದಿ, ಸುರೇಶ ಮುದ್ದಾರ, ಲಕ್ಷ್ಮೀ ದುಗ್ಗಾಣಿ ಇದ್ದರು.