ನೇಕಾರರ ಬದುಕು ಸುಧಾರಣೆಯಾಗಲಿ

| Published : Dec 23 2024, 01:01 AM IST

ಸಾರಾಂಶ

ನೇಕಾರರ ಬದುಕು ಹಾಗೂ ನೇಯ್ಗೆ ಸಮುದಾಯದ ಸಾಮಾಜಿಕ ಆರ್ಥಿಕ ಆಯಾಮ ಹಾಗೂ ಸ್ಥಿತಿಗತಿಗಳತ್ತ ನಾವೆಲ್ಲರೂ ಗಮನ ಹರಿಸಿ ಅವರ ಆರ್ಥಿಕ ಸದೃಢತೆ ನಮ್ಮೆಲ್ಲರ ಚಿತ್ತವಿರಲಿ

ಗದಗ: ಇತ್ತೀಚಿನ ದಿನಗಳಲ್ಲಿ ನೇಕಾರಿಕೆಯು ಹಲವಾರು ಸಮಸ್ಯೆ ಎದುರಿಸುತ್ತಿದ್ದು, ನೇಕಾರರ ಜೀವನ ಸಂಕಷ್ಟಮಯವಾಗಿದೆ. ನೇಕಾರಿಕೆ ವೃತ್ತಿಗೆ ಸರ್ಕಾರ ಆರ್ಥಿಕ ಭದ್ರತೆಯ ಅವಶ್ಯಕತೆ ಇದೆ ಎಂದು ನೇಕಾರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ಹೇಳಿದರು.

ಅವರು ನಗರದ ನೇಕಾರರ ಪತ್ತಿನ ಸಹಕಾರ ಸಂಘದ ಕಾರ್ಯಾಲಯದಲ್ಲಿ 2025ನೇ ವರ್ಷದ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನೇಕಾರರ ಬದುಕು ಹಾಗೂ ನೇಯ್ಗೆ ಸಮುದಾಯದ ಸಾಮಾಜಿಕ ಆರ್ಥಿಕ ಆಯಾಮ ಹಾಗೂ ಸ್ಥಿತಿಗತಿಗಳತ್ತ ನಾವೆಲ್ಲರೂ ಗಮನ ಹರಿಸಿ ಅವರ ಆರ್ಥಿಕ ಸದೃಢತೆ ನಮ್ಮೆಲ್ಲರ ಚಿತ್ತವಿರಲಿ ಎಂದರು.

ಸಂಘದ ಉಪಾಧ್ಯಕ್ಷ ವಿಜಯಕುಮಾರ ಕಬಾಡಿ ಮಾತನಾಡಿ, ನೇಕಾರರ ಪತ್ತಿನ ಸಹಕಾರ ಸಂಘ ಹಾಗೂ ಸರ್ಕಾರದಿಂದ ನೇಕಾರರಿಗೆ ಲಭ್ಯವಿರುವ ಸೌಲಭ್ಯ ಪಡೆದುಕೊಂಡು ನೇಕಾರರು ಆರ್ಥಿಕವಾಗಿ ಸುಧಾರಿಸಿಕೊಳ್ಳಲಿ ಎಂದರು.

ನಿರ್ದೇಶಕ ವಿ.ಕೆ.ಗುರುಮಠ, ಚನ್ನವೀರಪ್ಪ ಚನ್ನಪ್ಪನವರ ಮಾತನಾಡಿ, ಭಾರತದಲ್ಲಿ ಕೈಮಗ್ಗ ಮತ್ತು ವಸ್ತ್ರೋದ್ಯಮ ಒಂದು ಪ್ರಾಚೀನ ಸಂಪ್ರದಾಯದ ಪ್ರತಿಬಿಂಬವಾಗಿದೆ. ಈ ಕಲೆ ಹಾಗೂ ನೇಕಾರರು ನಮ್ಮ ಸಂಸ್ಕೃತಿ ಬಿಂಬಿಸುತ್ತಾರೆ. ನೇಕಾರಿಕೆ ಉಳಿದು ಮುಂದಿನ ಪೀಳಿಗೆಗೆ ಬಳವಳಿಯಾಗಿ ಮುನ್ನಡೆಯಬೇಕು ಎಂದರು.

ಈ ವೇಳೆ ನಿರ್ದೇಶಕ ಸುಭಾಸ ಗಂಜಿ, ಮೋಹನಸಾ ರಾಯಭಾಗಿ, ವೀರಭದ್ರಪ್ಪ ಗಂಜಿ, ಅನೀಲ ಗಡ್ಡಿ, ಅಮರೇಶ ಚಾಗಿ, ನಾಮದೇವ ಸೂರೆ, ಮೈಲಾರಪ್ಪ ಅರಣಿ, ವಿಷ್ಣು ಪಾಸ್ತೆ, ವೀಣಾ ನೀಲಗುಂದ, ಶೈಲಾ ಹೆಬ್ಬಳ್ಳಿ, ಮುಖ್ಯ ಕಾರ್ಯ ನಿರ್ವಾಹಕ ಪ್ರಭು ನೀಲಗುಂದ, ಸಿಬ್ಬಂದಿ ವೀರೇಶ ಕುಂಬಾರ ಮುಂತಾದವರಿದ್ದರು.