ದೇಶದ ಮೇಲಿನ ಅಭಿಮಾನ ಕಡಿಮೆಯಾಗದಿರಲಿ- ಶಾಸಕ ಡಾ. ಚಂದ್ರು ಲಮಾಣಿ

| Published : Aug 16 2025, 12:00 AM IST

ಸಾರಾಂಶ

ವೀರ ಹೋರಾಟಗಾರರು ತಮ್ಮ ಜೀವವನ್ನೇ ಮುಡಿಪಾಗಿಟ್ಟು, ಹಗಲಿರುಳೆನ್ನದೆ ಹೋರಾಡಿದ ಪ್ರತಿಫಲವೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಜಾತಿ, ಧರ್ಮ, ಭಾಷೆಗಳನ್ನು ಮೀರಿ ಸುಖ, ಶಾಂತಿ ಹಾಗೂ ಸಮೃದ್ಧ ರಾಷ್ಟ್ರ ನಿರ್ಮಾಣಕ್ಕಾಗಿ ನಾವೆಲ್ಲರೂ ಸಂಕಲ್ಪ ಮಾಡೋಣ ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿದರು.

ಶಿರಹಟ್ಟಿ: ವೀರ ಹೋರಾಟಗಾರರು ತಮ್ಮ ಜೀವವನ್ನೇ ಮುಡಿಪಾಗಿಟ್ಟು, ಹಗಲಿರುಳೆನ್ನದೆ ಹೋರಾಡಿದ ಪ್ರತಿಫಲವೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಜಾತಿ, ಧರ್ಮ, ಭಾಷೆಗಳನ್ನು ಮೀರಿ ಸುಖ, ಶಾಂತಿ ಹಾಗೂ ಸಮೃದ್ಧ ರಾಷ್ಟ್ರ ನಿರ್ಮಾಣಕ್ಕಾಗಿ ನಾವೆಲ್ಲರೂ ಸಂಕಲ್ಪ ಮಾಡೋಣ ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿದರು.

ಶುಕ್ರವಾರ ಪಟ್ಟಣದ ಎಸ್.ಎಂ. ಡಬಾಲಿ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ನೆರವೇರಿಸಲ್ಪಟ್ಟ ೭೯ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶದ ಮೇಲಿರುವ ಪ್ರೇಮ, ಅಭಿಮಾನ ಎಂದೂ ಕಡಿಮೆ ಆಗಬಾರದು. ದೇಶದ ಪ್ರಗತಿ ಬಗ್ಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.ಬಾಲಗಂಗಾಧರ ತಿಲಕ, ವಲ್ಲಭಭಾಯಿ ಪಟೇಲ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಸಂಗೊಳ್ಳಿ ರಾಯಣ್ಣ, ಲಾಲಾಲಜಪತ ರಾಯ್, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಅನೇಕರು ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣ ಹೊಂದಿದ್ದಾರೆ. ಅವರ ಹೋರಾಟದ ಫಲವಾಗಿ ನಾವು ಸ್ವತಂತ್ರರಾಗಿದ್ದೇವೆ ಎಂದರು. ರಾಷ್ಟ್ರದ ಸರ್ವತೋಮುಖ ಪ್ರಗತಿಗೆ ನಮ್ಮ ಯುವಶಕ್ತಿ, ವಿದ್ಯಾರ್ಥಿಗಳು ದೇಶಭಕ್ತಿ, ನಿಷ್ಠೆ, ಶಿಸ್ತು, ಪ್ರಜ್ಞೆ, ವಿಶ್ವಾಸ ಹಾಗೂ ಸ್ವಾವಲಂಬನೆಯಂತಹ ಗುಣಗಳನ್ನು ರೂಢಿಸಿಕೊಳ್ಳಬೇಕು. ಸಹಸ್ರ ವರ್ಷಗಳ ಗುಲಾಮಗಿರಿಯನ್ನು ಕೊಡವಿಕೊಂಡು ಲಕ್ಷಾಂತರ ಜೀವಗಳ ತ್ಯಾಗ ಬಲಿದಾನದಿಂದ ದೊರೆತ ಸ್ವಾತಂತ್ರ್ಯವನ್ನು ರಕ್ಷಿಸಿಕೊಂಡು ಅದನ್ನು ಬಲವರ್ಧನೆಗೊಳಿಸಲು ಪ್ರತಿಯೊಬ್ಬರು ಮುಂದಾಗುವಂತೆ ಕರೆ ನೀಡಿದರು.ವೀರಯೋಧರ ಸ್ಮರಣೆ: ತಮ್ಮ ಸಂದೇಶದಲ್ಲಿ ಸೈನಿಕರ ಕೊಡುಗೆಯನ್ನು ಸ್ಮರಿಸಿದ ಅವರು ವೀರಯೋಧರು ಸ್ಥಿತಪ್ರಜ್ಞತೆಯಿಂದ ರಾಷ್ಟ್ರದ ಗಡಿ ಕಾಯುತ್ತಿರುವ ಸಮಸ್ತ ಯೋಧರಿಗೆ ಗೌರವಪೂರ್ವಕ ಸಂದೇಶಗಳನ್ನು ಸಲ್ಲಿಸುವೆ ಎಂದು ಸೈನಿಕರಿಗೆ ಗೌರವ ಸಲ್ಲಿಸಿದರು.ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದು, ಶಿರಹಟ್ಟಿ ಪಟ್ಟಣದಲ್ಲಿ ನೂರು ಹಾಸಿಗೆಯುಳ್ಳ ತಾಲೂಕು ಆಸ್ಪತ್ರೆ ₹೩೭ ಕೋಟಿ ವೆಚ್ಚದಲ್ಲಿ ನಿರ್ಮಾಣ ಕಾರ್ಯ ನಡೆದಿದೆ. ಅಗ್ನಿ ಶಾಮಕ ಠಾಣೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಅಮೃತ ಯೋಜನೆ ಅಡಿಯಲ್ಲಿ ಪ್ರತಿ ಮನೆಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಮೌಲಾನಾ ಆಝಾದ ಶಾಲೆಗೆ ₹ ೪ ಕೋಟಿ ವೆಚ್ಚದಲ್ಲಿ ಕಟ್ಟಡದ ನಿರ್ಮಾಣ ಹೀಗೆ ಹತ್ತಾರು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ತಹಸೀಲ್ದಾರ್ ಕೆ. ರಾಘವೇಂದ್ರರಾವ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಬಡತನದಲ್ಲಿರುವ ರಾಷ್ಟ್ರ ವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಲು ವೈಜ್ಞಾನಿಕವಾಗಿ ಹೊಸ ತಂತ್ರಜ್ಞಾನವನ್ನು ಕಂಡು ಹಿಡಿಯುವ ಮೂಲಕ ದೇಶಕ್ಕೆ ಅನೇಕ ಮಹನೀಯರು ತಮ್ಮ ಕೊಡುಗೆಗಳನ್ನು ನೀಡಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಆತ್ಮಾರ್ಪಣೆ ಮಾಡಿದ ಆತ್ಮಗಳ ಸಂತೃಪ್ತಿಗಾಗಿ ನಿಸ್ವಾರ್ಥತೆಯಿಂದ ನಡೆದಾಗ ಮಾತ್ರ ಬೆಂಬಲ ಬರಲು ಸಾಧ್ಯ. ಸಂಪದ್ಭರಿತ ಭಾರತ ನಿರ್ಮಾಣಕ್ಕೆ, ಭವ್ಯ ಭಾರತ ಕಟ್ಟಲು ಏಕತೆ ಕಾಪಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.ಪರಕೀಯರ ಆಳ್ವಿಕೆಯಿಂದ ಮುಕ್ತಿಗೊಳಿಸಿ ದೇಶವನ್ನು ಸ್ವಾತಂತ್ರ್ಯಗೊಳಿಸಲು ಅಸಂಖ್ಯಾತ ಹೋರಾಟಗಾರರು ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ. ಅವರ ಹೋರಾಟ ಸ್ಮರಿಸಬೇಕು. ಶಾಸಕರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ, ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ಚನ್ನಯ್ಯ ದೇವೂರ, ಬಿಇಒ ಎಚ್. ನಾಣಕೀ ನಾಯಕ, ತಾಪಂ ಕಾರ್ಯನಿವಾಹಕ ಅಧಿಕಾರಿ ರಾಮಣ್ಣ ದೊಡ್ಡಮನಿ, ಪಪಂ ಮುಖ್ಯಾಧಿಕಾರಿ ಸವಿತಾ ತಾಮ್ರೆ, ಕೃಷಿ ಇಲಾಖೆಯ ರೇವಣೆಪ್ಪ ಮನಗೂಳಿ, ಖಜಾನೆ ಇಲಾಖೆಯ ಶಿವಪ್ಪ ಹದ್ಲಿ ವೇದಿಕೆ ಮೇಲೆ ಇದ್ದರು.

ಕಂದಾಯ ನಿರೀಕ್ಷಕ ಬಸರಾಜ ಕಾತ್ರಾಳ, ನಾಗರಾಜ ಲಕ್ಕುಮಡಿ, ಜಾನು ಲಮಾಣಿ, ಬಿ.ಡಿ. ಪಲ್ಲೇದ, ಹೊನ್ನಪ್ಪ ಶಿರಹಟ್ಟಿ, ಫಕ್ಕೀರೇಶ ರಟ್ಟಿಹಳ್ಳಿ, ಸಂದೀಪ ಕಪ್ಪತ್ತನವರ, ವೀರಯ್ಯ ಮಠಪತಿ, ಸಂತೋಷ ಅಸ್ಕಿ, ಶೀನು ಬಾರಬರ, ಎಚ್.ಎಂ. ದೇವಗೀರಿ ಹಾಜರಿದ್ದರು.