ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಹಲವು ವರ್ಷಗಳಿಂದಲೂ ಪಕ್ಷಕ್ಕಾಗಿ ದುಡಿದ ಮುಖಂಡರು ಮತ್ತು ಕಾರ್ಯಕರ್ತರನ್ನು ಪರಿಗಣಿಸಿ ಬಹುಸಂಖ್ಯಾತರಾಗಿರುವ ಒಕ್ಕಲಿಗರನ್ನೇ ಹುಡಾ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಕಾರ್ಯದರ್ಶಿ ಕುಮಾರಶೆಟ್ಟಿ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಈ ಹಿಂದಿನಿಂದಲೂ ಪಕ್ಷಕ್ಕಾಗಿ ದುಡಿದ ಮುಖಂಡರು ಮತ್ತು ಕಾರ್ಯಕರ್ತರನ್ನು ಪ್ರತಿ ಪಕ್ಷಗಳು ಮತ್ತು ಸರ್ಕಾರಗಳು ನೇಮಿಸುವ ಮೂಲಕ ಪಕ್ಷ ಸಂಘಟನೆಗೆ ಮತ್ತು ನಗರದ ಅಭಿವೃದ್ಧಿಗೆ ಆಯಾ ಸರ್ಕಾರಗಳು ಒತ್ತು ನೀಡಿರುತ್ತವೆ. ಉದಾಹರಣೆಗೆ ಸೈಯದ್ ಅಕ್ಬರ್, ಬಿ.ಕೆ. ರಂಗಸ್ವಾಮಿ, ಬಿ.ಕೆ. ಮಂಜುನಾಥ, ಎಸ್.ಎಂ. ಆನಂದ್, ಕೆ.ಎಂ. ರಾಜೇಗೌಡ, ಕೃಷ್ಣಕುಮಾರ್, ಲಲಾಟ್ ಮೂರ್ತಿ ಇತರ ಸ್ಥಳೀಯರು ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಈ ವಿಚಾರ ನಮ್ಮ ಕಣ್ಣ ಮುಂದೆ ಇರುತ್ತದೆ ಎಂದರು. ಅದೇ ಪ್ರಕಾರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಈಗಾಗಲೇ ೨ ವರ್ಷ ಕಳೆದರೂ ಸಹ ಇದುವರೆಗೂ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನು ನೇಮಕ ಮಾಡಲು ವಿಫಲರಾಗಿರುತ್ತದೆ. ಈ ಕಾರಣದಿಂದ ಸರ್ಕಾರದ ಮೇಲೆ ನಿಷ್ಠಾವಂತ ಕಾರ್ಯಕರ್ತರಾದ ನಮ್ಮ ಒತ್ತಾಯವೇನೆಂದರೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ತನು, ಮನ, ಧನ ಖರ್ಚು ಮಾಡಿ ಪಕ್ಷ ಸಂಘಟನೆ ಮಾಡಿದ ಹಲವಾರು ವಿಧಾನಸಭಾ ಕ್ಷೇತ್ರದಲ್ಲಿ ಬಹು ಸಂಖ್ಯಾತರಾಗಿರುವುದರಿಂದ ಒಕ್ಕಲಿಗರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕಾಗಿ ಒತ್ತಾಯಿಸುತ್ತೇವೆ. ಒಂದು ವೇಳೆ ಸಾಧ್ಯವಾಗದಿದ್ದರೆ, ಹಾಸನ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿದ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಅಥವಾ ದಲಿತ ವರ್ಗದವರನ್ನು ಪರಿಗಣಿಸುವ ಮೂಲಕ ಪಕ್ಷ ಸಂಘಟನೆಗೆ ಅನುಕೂಲ ಮಾಡಿಕೊಡಬೇಕಾಗಿ ಆಗ್ರಹಿಸಿದರು.
ಒಂದು ವೇಳೆ ನಮ್ಮ ಒತ್ತಾಸೆ ಮೀರಿ ಬೇರೆ ಕ್ಷೇತ್ರದವರನ್ನು ಈ ಹುದ್ದೆಗೆ ಪರಿಗಣಿಸಿದ್ದೇ ಆದಲ್ಲಿ ಪಕ್ಷದ ಕಾರ್ಯಕರ್ತರು ವಿಮುಖರಾಗುತ್ತಾರೆ. ಇದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ. ಅಲ್ಲದೆ ಕಾರ್ಯಕರ್ತರಿಗೂ ಕೂಡ ಅನ್ಯಾಯವಾಗುತ್ತದೆ ಹಾಗೂ ಪಕ್ಷ ಸಂಘಟನೆಗೂ ಕೂಡ ಕಷ್ಟವಾಗುತ್ತದೆ ಎಂಬ ವಿಚಾರವನ್ನು ಸರ್ಕಾರದ ಗಮನಕ್ಕೆ ತರ ಬಯಸುತ್ತೇವೆ, ಇದಕ್ಕೂ ಮೀರಿ ಅನ್ಯ ಕ್ಷೇತ್ರದ ಯಾವುದೇ ವ್ಯಕ್ತಿಗಳನ್ನು ಈ ಹುದ್ದೆಗೆ ಪರಿಗಣಿಸಿದ್ದೆ ಆದಲ್ಲಿ ಸರ್ಕಾರದ ತೀರ್ಮಾನವನ್ನು ವಿರೋಧಿಸುವ ಮೂಲಕ ಪ್ರತಿಭಟನೆಗೂ ಸಿದ್ಧರಿರುತ್ತೇವೆ ಎಂದು ಎಚ್ಚರಿಕೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ನೇತ್ರಾವತಿ, ರಾಮಚಂದ್ರ, ಜಿಲ್ಲಾ ನೇಕರರ ಒಕ್ಕೂಟದ ಅಧ್ಯಕ್ಷ ಶಂಕರಶೆಟ್ಟಿ, ಪಕ್ಷದ ಕಾರ್ಯಕರ್ತ ಕೆ.ಟಿ. ರಾಜು ಇತರರು ಉಪಸ್ಥಿತರಿದ್ದರು.