ಗಣಪತಿಗಳ ಸಾಮೂಹಿಕ ವಿಸರ್ಜನೆ ಶಾಂತಿಯಿಂದ ನಡೆಯಲಿ

| Published : Aug 30 2025, 01:00 AM IST

ಗಣಪತಿಗಳ ಸಾಮೂಹಿಕ ವಿಸರ್ಜನೆ ಶಾಂತಿಯಿಂದ ನಡೆಯಲಿ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದಲ್ಲಿ ಪ್ರತಿಷ್ಠಾಪಿಸಿರುವ ಗಣಪತಿಗಳ ಮೆರವಣಿಗೆ ಹಾಗೂ ವಿಸರ್ಜನಾ ಕಾರ್ಯಕ್ರಮ 31ರಂದು ನಡೆಯಲಿದ್ದು ಯಾವುದೇ ತೊಂದರೆ ಇಲ್ಲದೆ ಶಾಂತಿಯುತವಾಗಿ ನಡೆಸಲು ಎಲ್ಲರ ಸಹಕಾರ ಅಗತ್ಯ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಪಟ್ಟಣದಲ್ಲಿ ಪ್ರತಿಷ್ಠಾಪಿಸಿರುವ ಗಣಪತಿಗಳ ಮೆರವಣಿಗೆ ಹಾಗೂ ವಿಸರ್ಜನಾ ಕಾರ್ಯಕ್ರಮ 31ರಂದು ನಡೆಯಲಿದ್ದು ಯಾವುದೇ ತೊಂದರೆ ಇಲ್ಲದೆ ಶಾಂತಿಯುತವಾಗಿ ನಡೆಸಲು ಎಲ್ಲರ ಸಹಕಾರ ಅಗತ್ಯ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕ ಗಣಪತಿಗಳ ಸಾಮೂಹಿಕ ಮೆರವಣಿಗೆ ಮತ್ತು ವಿಸರ್ಜನೆ ಹಾಗೂ ಈದ್ ಮಿಲಾದ್ ಆಚರಣೆ ನಿಮಿತ್ತ ನಡೆದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗಾಂಧಿನಗರದಲ್ಲಿ ಆ.೩೧ರ ಭಾನುವಾರ ಗಣಪತಿಗಳ ಸಾಮೂಹಿಕ ವಿಸರ್ಜನ ಕಾರ್ಯಕ್ರಮ ನಡೆಯಲಿದ್ದು ನಿಗದಿತ ಮಾರ್ಗದಂತೆ ನಿಗದಿತ ಸಮಯಕ್ಕೆ ಸರಿಯಾಗಿ ಆಯೋಜಕರು ಪೂಜೆ ಮುಗಿಸಿ ಮೆರವಣಿಗೆ ಪ್ರಾರಂಭಿಸಬೇಕು. ಮೆರವಣಿಗೆಯಲ್ಲಿ ಯಾವುದೇ ಬೇರೆ ಬೇರೆ ಬಾವುಟಗಳನ್ನು ಹಾರಿಸದೇ ಸಹಕರಿಸುವುದರಿಂದ ಯಾವುದೇ ಸಮಸ್ಯೆಗಳು ಉದ್ಬವಿಸುವುದಿಲ್ಲ ಎಂದರು. ಅಡಿಷನಲ್ ಎಸ್‌ಪಿ ಪುರುಷೋತ್ತಮ್ ಮಾತನಾಡಿ, ನಾನು ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡರೂ ಜಿಲ್ಲೆಯ ಎಲ್ಲ ಠಾಣೆಗಳಿಗೂ ಭೇಟಿ ನೀಡಿ ಪರಿಸ್ಥಿತಿ ತಿಳಿದುಕೊಂಡಿದ್ದೇನೆ. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಿದರೆ ಮಾತ್ರ ಯಾವುದೇ ಕಾರ್ಯಕ್ರಮಗಳು ತೊಂದರೆಯಿಲ್ಲದೇ ನಡೆಯುತ್ತಾವದ್ದರೊಂದ ಗಣೇಶೋತ್ಸವ ಮತ್ತು ಈದ್‌ಮಿಲಾದ್ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸಿ ಎಂದರು. ಸತ್ಯಗಣಪತಿ ಸೇವಾಸಂಘದ ಅಧ್ಯಕ್ಷ ಶ್ರೀಕಂಠ ಮಾತನಾಡಿ ಹಿಂದೂ-ಮುಸ್ಲಿಮರ ಮಧ್ಯೆ ಸಹಕಾರ ಚೆನ್ನಾಗಿರುವುದರಿಂದ ಪೂಜೆ ಹಾಗೂ ಮೆರವಣಿಗೆ ನೇತೃತ್ವ ವಹಿಸಿಕೊಂಡಿರುವ ಎರಡೂ ಕಡೆಯ ಮುಖಂಡರು ತಮ್ಮ ಸಂಘಟನೆಗಳ ಕಾರ್ಯಕರ್ತರಿಗೆ ತಿಳುವಳಿಕೆ ನೀಡಬೇಕು. ಪೊಲೀಸರಿಗೆ ಇರುವಷ್ಟೇ ಜವಾಬ್ದಾರಿ ನಮಗೂ ಇರುತ್ತದೆ. ವರ್ಷವೆಲ್ಲಾ ಹಣ ಸಂಗ್ರಹಿಸಿ ಗಣಪತಿ ಪ್ರತಿಷ್ಠಾಪಿಸುವ ನಾವು ಅದರ ಉತ್ಸವವನ್ನೂ ಯಾವುದೇ ತೊಂದರೆ ಇಲ್ಲದಂತೆ ನಡೆಸಿಕೊಡಬೇಕಾಗಿದೆ ಎಂದು ತಿಳಿಸಿದರು. ಮಾಜಿ ನಗರಸಭೆ ಸದಸ್ಯ ಪ್ರಸನ್ನಕುಮಾರ್ ಮಾತನಾಡಿ ನಗರದೆಲ್ಲಡೆ ಪಾರ್ಕಿಂಗ್ ಸಮಸ್ಯೆಯಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಕೆಲವು ಕಡೆ ಗಣಪತಿ ಪ್ರತಿಷ್ಠಾಪಿಸಲು ರಸ್ತೆಗೇ ಶಾಮಿಯಾನ ಹಾಕಿದ್ದು ಜನರಿಗೆ ತೊಂದರೆಯಾಗಿದೆ. ಅದರಲ್ಲೂ ರೈಲು ನಿಲ್ದಾಣ ರಸ್ತೆಯಲ್ಲಿ ಶಾಲೆಗಳು, ಮಾಲ್, ಕಚೇರಿಗಳು ಹೆಚ್ಚಿದ್ದು ರೈಲು ನಿಲ್ದಾಣಕ್ಕೆ ಹೋಗುವವರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ದೂರಿದರು. ಇದರ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಶಾಸಕರು ಪೊಲೀಸರಿಗೆ ಸೂಚಿಸಿದರು. ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್, ಉಪಾಧ್ಯಕ್ಷೆ ಮೇಘಶ್ರೀ, ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ, ತಹಸೀಲ್ದಾರ್ ಮೋಹನ್‌ಕುಮಾರ್, ಎಎಸ್‌ಪಿ ಪುರುಶೋತ್ತಮ್, ಆಯುಕ್ತ ವಿಶ್ವೇಶ್ವರ ಬದರಗಡೆ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಂಗರಾಜು ಹಾಲಿ ಹಾಗೂ ಮಾಜಿ ನಗರಸಭಾ ಸದಸ್ಯರು, ಅಧಿಕಾರಿಗಳು, ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.

-