ಸಾರಾಂಶ
ಯಲ್ಲಾಪುರ:
ಕೆಲ ವರ್ಷಗಳ ಹಿಂದೆ ಶಿಕ್ಷಣ ಇಲಾಖೆ ಆರಂಭಿಸಿದ್ದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾದ ಪ್ರತಿಭಾ ಕಾರಂಜಿ ಇತ್ತೀಚಿನ ದಿನಗಳಲ್ಲಿ ಮೊದಲಿನ ಉತ್ಸಾಹ, ಆಸಕ್ತಿಯನ್ನು ಕಳೆದುಕೊಳ್ಳುತ್ತಿರುವುದು ವಿಷಾದಕರ ಎಂದು ಗ್ರಾಮ ಪಂಚಾಯಿತಿ ಸದಸ್ಯ ಗಣೇಶ ಹೆಗಡೆ ತಿಳಿಸಿದರು.ಅ. ೨೫ರಂದು ತಾಲೂಕಿನ ಮಾವಿನಕಟ್ಟಾದ ಕುಂದರಗಿ ಸ.ಹಿ.ಪ್ರಾ. ಶಾಲೆಯ ಸಭಾಭವನದಲ್ಲಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ತಾಲೂಕು ಯೋಜನಾಧಿಕಾರಿಗಳ ಕಾರ್ಯಾಲಯ ಯಲ್ಲಾಪುರ, ಸಮೂಹ ಸಂಪನ್ಮೂಲ ಕೇಂದ್ರ ಮತ್ತು ಗ್ರಾಮ ಪಂಚಾಯಿತಿ ಕುಂದರಗಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕುಂದರಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಖುಷಿಯಿಂದ ಪಾಲ್ಗೊಳ್ಳುತ್ತಿರುವರಾದರೂ ಮೊದಲಿನಂತೆ ಪಾಲಕರ ಆಗಮನ ಕ್ಷೀಣಿಸುತ್ತಿದೆ. ಶಿಕ್ಷಣ ಇಲಾಖೆ ಆಯೋಜಿಸುತ್ತಿದ್ದ ಮೆಟ್ರಿಕ್ ಮೇಳವನ್ನು ಇಲಾಖೆ ಸ್ಥಗಿತಗೊಳಿಸಿದೆ. ಇದನ್ನು ಪುನರಾರಂಭಿಸಬೇಕು ಎಂದು ಆಗ್ರಹಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಮ್ಮ ಗ್ರಾಪಂ ವ್ಯಾಪ್ತಿಯ ೩ ಶಿಕ್ಷಕರನ್ನು ನಿಯೋಜಿಸಿರುವುದು ಶ್ಲಾಘನೀಯ ಎಂದರು.ಧ.ಗ್ರಾ.ಯೋ. ಮೇಲ್ವಿಚಾರಕ ಯಲ್ಲಪ್ಪ ಹೊಸಮನಿ ಮಾತನಾಡಿ, ಮಕ್ಕಳಿಗೆ ಸೂಕ್ತ ಅವಕಾಶ ಕಲ್ಪಿಸಿ ವಿದ್ಯಾವಂತರನ್ನಾಗಿ ರೂಪಿಸುವುದು ಪಾಲಕರ ಜವಾಬ್ದಾರಿ. ಶೈಕ್ಷಣಿಕ ಅಭಿವೃದ್ಧಿಗಾಗಿ ಯೋಜನೆಯಿಂದ ಸಾಧ್ಯವಿರುವ ನೆರವು ನೀಡುವುದಾಗಿ ಹೇಳಿದರು.ಗ್ರಾಪಂ ಸದಸ್ಯರಾದ ರಾಮಕೃಷ್ಣ ಹೆಗಡೆ, ಪ್ರಕಾಶ ನಾಯ್ಕ, ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಮುಕ್ತಾರ ಪಠಾಣ ಮಾತನಾಡಿದರು. ಅದಿತಿ ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಿಆರ್‌ಪಿ ವಿಷ್ಣು ಭಟ್ಟ ಸ್ವಾಗತಿಸಿದರು. ಸಹ ಶಿಕ್ಷಕರಾದ ಮುರಳೀಧರ ಶಿರಸಾಟ್ ನಿರ್ವಹಿಸಿದರು. ಉಚಗೇರಿ ಶಿಕ್ಷಕ ಶ್ರೀಧರ ಹೆಗಡೆ ವಂದಿಸಿದರು.
ಮುಖ್ಯಾಧ್ಯಾಪಕ ನಾಗಪ್ಪ ಜಿ.ಎಚ್., ಮಳಲಗಾಂವ ಸಿಆರ್‌ಪಿ ಕೆ.ಆರ್. ನಾಯ್ಕ, ಬಿಆರ್‌ಪಿ ಸುಲೋಚನಾ ಹೆಗಡೆ ಉಪಸ್ಥಿತರಿದ್ದರು. ಕ್ಲಸ್ಟರ್ ವ್ಯಾಪ್ತಿಯ ೧೦ ಶಾಲೆಗಳ ೨೦೦ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.