ನಿರ್ಮಾಣ ಹಂತದಲ್ಲಿರುವ ಸಂತೆ ಮಾರುಕಟ್ಟೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿರುವುದರಿಂದ ಸಂತೆ ವ್ಯಾಪಾರಸ್ಥರು ರಸ್ತೆ ಮೇಲೆ ವ್ಯಾಪಾರ ಮಾಡುವಂತಾಗಿದೆ.

ಮುಂಡಗೋಡ: ಪ್ರತಿ ಸಭೆಯಲ್ಲಿ ಚರ್ಚೆಯಾಗುವ ಯಾವ ವಿಷಯ ಕೂಡ ಕಾರ್ಯಗತವಾಗುವುದಿಲ್ಲ. ಸದಸ್ಯರು ಹೇಳಿದ ಯಾವ ಕೆಲಸ ಕೂಡ ನಡೆಯುತ್ತಿಲ್ಲ. ನಿಮ್ಮ ಮನಬಂದಂತೆ ಕೆಲಸ ಮಾಡುವುದಾದರೆ ಸಭೆ ನಡೆಸುವ ಅವಶ್ಯಕತೆ ಏನಿದೆ ಎಂದು ಪಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಬುಧವಾರ ನಡೆಯಿತು.

ಇಲ್ಲಿಯ ಪಪಂ ಸಭಾಂಗಣದಲ್ಲಿ ಪಪಂ ಅಧ್ಯಕ್ಷೆ ಜಯಸುಧಾ ಬೋವಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಧ್ವನಿ ಎತ್ತಿದ ಸದಸ್ಯರು, ನಮ್ಮ ವಾರ್ಡ್‌ಗಳಲ್ಲಿ ಯಾವುದೇ ಕೆಲಸ ನಡೆಯುತ್ತಿಲ್ಲ. ನಮಗೆ ಮತ ಹಾಕಿ ಗೆಲ್ಲಿಸಿದ ಜನರಿಗೆ ನಾವು ಏನು ಉತ್ತರ ಕೊಡಬೇಕು ಎಂದು ಪ್ರಶ್ನಿಸಿದರು.

ನಿರ್ಮಾಣ ಹಂತದಲ್ಲಿರುವ ಸಂತೆ ಮಾರುಕಟ್ಟೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿರುವುದರಿಂದ ಸಂತೆ ವ್ಯಾಪಾರಸ್ಥರು ರಸ್ತೆ ಮೇಲೆ ವ್ಯಾಪಾರ ಮಾಡುವಂತಾಗಿದೆ. ತಕ್ಷಣ ಸಾಲ ಮಾಡಿಯಾದರೂ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಪಪಂ ಸದಸ್ಯ ಫಣಿರಾಜ ಹದಳಗಿ ಆಗ್ರಹಿಸಿದರು.

ಸರ್ಕಾರದಿಂದ ಮಂಜೂರಾದ ಮನೆಗಳನ್ನು ಕಟ್ಟಿಕೊಂಡು ವರ್ಷಗಳೇ ಕಳೆದರೂ ಫಲಾನುಭವಿಗಳಿಗೆ ಹಣ ಜಮಾ ಆಗದೇ ಇರುವುದರಿಂದ ಸಾಲ ಮಾಡಿಕೊಂಡು ಮನೆ ಕಟ್ಟಿದವರ ಸ್ಥಿತಿ ಗಂಭೀರವಾಗಿದೆ. ಈ ಬಗ್ಗೆ ಪಪಂ ಸಿಬ್ಬಂದಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ತಕ್ಷಣ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಸದಸ್ಯರು ಸಾಮೂಹಿಕವಾಗಿ ಒತ್ತಾಯಿಸಿದರು.

ಈ ಬಗ್ಗೆ ಮನೆ ಕಟ್ಟಿಕೊಂಡವರ ಯಾದಿ ತಯಾರಿಸಿ ಸರ್ಕಾರದ ಗಮನಕ್ಕೆ ತಂದು ಹಣ ಬಿಡುಗಡೆ ಮಾಡಿಸುವ ಪ್ರಯತ್ನ ಮಾಡುವುದಾಗಿ ಮುಖ್ಯಾಧಿಕಾರಿ ಕುಮಾರ ನಾಯ್ಕ ಭರವಸೆ ನೀಡಿದರು.

ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಸನವಳ್ಳಿ ಜಲಾಶಯದ ಕುಡಿಯುವ ನೀರಿನ ಘಟಕಕ್ಕೆ ಪ್ರತ್ಯೇಕ ವಿದ್ಯುತ್ ಸಂಪರ್ಕ ನೀಡಬೇಕು. ಇಲ್ಲಿಂದ ಸುತ್ತಮುತ್ತ ಸಾಕಷ್ಟು ಜನರಿಗೆ ವಿದ್ಯುತ್ ಸಂಪರ್ಕ ನೀಡಿರುವುದರಿಂದ ಒತ್ತಡ ಹೆಚ್ಚಿದೆ. ಅದು ಹಾಳಾದರೆ ತೀವ್ರ ಸಮಸ್ಯೆಯಾಗಲಿದೆ. ಹೆಸ್ಕಾಂ ನವರು ಆ ಕೆಲಸ ಮಾಡದಿದ್ದರೆ ನೀವೇ ಮಾಡಿ ಎಂದು ಪಪಂ ಸಿಬ್ಬಂದಿಗೆ ತಿಳಿಸಲಾಯಿತು.

ಪಟ್ಟಣದ ನಂದೀಶ್ವರ ನಗರ ಬಡಾವಣೆಯ ಕೆರೆಯ ಹೆಚ್ಚುವರಿ ನೀರು ಹರಿದು ಹೋಗಲು ಸಮರ್ಪಕ ಕಾಲುವೆ ವ್ಯವಸ್ಥೆ ಇಲ್ಲದ ಕಾರಣ ಹೆಚ್ಚು ಮಳೆಯಾದರೆ ಕೆರೆ ತುಂಬಿ ಸುತ್ತಮುತ್ತ ಮನೆಗಳು ಜಲಾವೃತವಾಗುವ ಹಾಗೂ ಸುತ್ತಮುತ್ತಲಿನ ಕೃಷಿ ಭೂಮಿಗೆ ನೀರು ನುಗ್ಗಿ ಬೆಳೆ ಹಾನಿಯಾಗುತ್ತಿರುವ ಸಮಸ್ಯೆಯ ದೂರಿನ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸುವುದು, ಮುಂದಿನ ದಿನಗಳಲ್ಲಿ ಸಮರ್ಪಕ ನೀರು ಹರಿದು ಹೋಗಲು ಕಾಲುವೆ ವ್ಯವಸ್ಥೆ ಮಾಡಲಾಗುವುದೆಂದು ಮುಖ್ಯಾಧಿಕಾರಿ ಕುಮಾರ ನಾಯ್ಕ ಸಭೆಯಲ್ಲಿ ತಿಳಿಸಿದರು.ಪಪಂ ಉಪಾಧ್ಯಕ್ಷೆ ರಹೀಮಾಬಾನು ಕುಂಕೂರ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಸುಬ್ಬಾಯವರ, ಶ್ರೀಕಾಂತ ಸಾನು ಫಣಿರಾಜ ಹದಳಗಿ, ಅಶೋಕ ಚಲವಾದಿ, ಮಹ್ಮದಗೌಸ ಮಖಾಂದಾರ, ರಜಾ ಪಠಾಣ, ಶೇಖರ ಲಮಾಣಿ, ನಿರ್ಮಲಾ ಬೆಂಡ್ಡಗಟ್ಟಿ, ಬೀಬಿಜಾನ್ ಮುಲ್ಲಾನವರ, ಮಹ್ಮದಜಾಫರ್ ಹಂಡಿ, ಸುವರ್ಣ ಕೊಟಗುಣಸಿ, ಕುಸುಮಾ ಹಾವಣಗಿ, ಜೈನು ಬೆಂಡಿಗೇರಿ, ನಾಗರಾಜ ಹಂಚಿನಮನಿ ಹಾಗೂ ಎಂಜಿನಿಯರ್ ಗಣೇಶ ಭಟ್, ವ್ಯವಸ್ಥಾಪಕ ಪ್ರದೀಪ ಹೆಗಡೆ, ಮಂಚಲಾ ಶೇಟ್ ಉಪಸ್ಥಿತರಿದ್ದರು.