ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿ ಎರಡು ತಿಂಗಳಾದರೂ ಜನರ ಕೆಲಸ ಮಾಡದೆ ಅತಂತ್ರ ಸ್ಥಿತಿಯಲ್ಲಿ ಸಿಲುಕಿದೆ ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.ಸರ್ಕಾರ ಎಂಡಿಎ ರಚಿಸಿ, ಪ್ರಭಾರ ಆಯುಕ್ತರನ್ನು ಮಾತ್ರ ನೇಮಕ ಮಾಡಿದೆ. ಅವರಿಗೆ ಭೂಸ್ವಾಧೀನ ಅಧಿಕಾರಿಯಾಗಿಯೂ ಹೆಚ್ಚಿನ ಅಧಿಕಾರ ನೀಡಿದೆ. ಆದರೆ, ಅವರು ಪ್ರಭಾರ ಆಯುಕ್ತರಾಗಿರುವ ಕಾರಣ ಯಾವುದೇ ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ. ಎಂಡಿಎಗೆ ಈವರೆಗೆ ಅಧ್ಯಕ್ಷರನ್ನಾಗಲಿ, ಸದಸ್ಯರನ್ನಾಗಲಿ, ತಜ್ಞರನ್ನಾಗಲಿ ನೇಮಕ ಮಾಡುವಲ್ಲಿ ಸರ್ಕಾರ ಆಸಕ್ತಿ ವಹಿಸಿಲ್ಲ. ಸದ್ಯಕ್ಕೆ ಜಿಲ್ಲಾಧಿಕಾರಿಗಳೇ ಎಂಡಿಎ ಅಧ್ಯಕ್ಷರಾಗಿದ್ದರೂ ಕಾರ್ಯಭಾರ ಒತ್ತಡದಿಂದ ವಾರಕ್ಕೊಮ್ಮೆಯಾದರೂ ಕಚೇರಿಗೆ ಬಂದು ಜನರ ಅಹವಾಲು ಕೇಳುತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ.
ಎಂಡಿಎ ಕಾಯ್ದೆ ಬಗ್ಗೆ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಹಾಗೂ ಮಾರ್ಗದರ್ಶನ ಸಿಕಿಲ್ಲ ಎನಿಸುತ್ತಿದೆ. ಇದೀಗ ನಕ್ಷೆ ಮಂಜೂರು ಮಾಡುವ ಕೆಲಸ ಬಿಟ್ಟರೆ ಇನ್ಯಾವುದೇ ಸಾರ್ವಜನಿಕರ ಕೆಲಸ ಕಾರ್ಯಗಳು ಕೈಗೊಳ್ಳುತ್ತಿಲ್ಲ. ಜನರು ಕಚೇರಿಗೆ ಬಂದು ನಿರಾಶರಾಗಿ ಹಿಂತಿರುಗುವಂತಾಗಿದೆ ಎಂದಿದ್ದಾರೆ.ಸರ್ಕಾರ ಎಂಡಿಎ ಹಗರಣದ ತನಿಖೆಗಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚಿಸಿದೆ. ಅದರೆ ಆಯೋಗ ವರದಿ ನೀಡುವ ಮುನ್ನವೇ ಎಂಡಿಎ ಹೆಸರು ಬದಲಿಸಲಾಯಿತು. ಹಗರಣ ಮುಚ್ಚಲಿಕ್ಕಾಗಿಯೇ ಮುಡಾ ಕಾಣೆಯಾಯಿತು ಎಂದು ಪ್ರಜ್ಞಾವಂತರು ಚರ್ಚಿಸುತ್ತಿದ್ದಾರೆ. ಇನ್ನೂ ಹಗರಣದ ವಾಸನೆ ಆರಿಲ್ಲ. ಇಲ್ಲಿನ ಅಧಿಕಾರಿಗಳ ನಡವಳಿಕೆ ಬದಲಾಗಿಲ್ಲ. ಈ ಹಿಂದೆ ಹಲವು ಬಡಾವಣೆಗಳಿಗೆ ಬೇರೆಯವರ ನಿವೇಶನದಲ್ಲಿ ರಸ್ತೆ ನಿರ್ಮಿಸಿಕೊಟ್ಟು ಅಧಿಕಾರಿಗಳು ಅನ್ಯಾಯ ಎಸಗಿದ್ದರು. ಅಂತಹ ಅನ್ಯಾಯ ಇಂದಿಗೂ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಪ್ರಾಧಿಕಾರದ ನಿವೇಶನದಾರರು, ಖಾಸಗಿ ಬಡಾವಣೆ ನಿವೇಶನದಾರರು ಸ್ವಾಧೀನ ಪತ್ರ, ಖಾತೆ ಮುಂತಾದ ಕೆಲಸಕ್ಕಾಗಿ ನಿತ್ಯ ಕಚೇರಿಗೆ ಅಲೆಯುತ್ತಿದ್ದಾರೆ. ಇಂತಹ ಯಾವುದೇ ಕೆಲಸಗಳು ಆಗುತ್ತಿಲ್ಲ. ಹಾಗಾದರೆ ಎಂಡಿಎ ರೂಪಿಸಿದ ಪ್ರಯೋಜನವಾದರು ಏನು? ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜನರ ತೆರಿಗೆ ಹಣ ವ್ಯಯ ಮಾಡುತ್ತಿರುವುದು ಸರಿಯೇ? ಈ ದಿಸೆಯಲ್ಲಿ ಮುಖ್ಯಮಂತ್ರಿಗಳು ಎಂಡಿಎಯನ್ನು ತ್ವರಿತಗತಿಯಲ್ಲಿ ಪರಿಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಸನ್ನದ್ಧಗೊಳಿಸಬೇಕೆ ಅಥವಾ ಸಂಪೂರ್ಣವಾಗಿ ಪ್ರಾಧಿಕಾರ ಮುಚ್ಚಬೇಕೆ ಎಂಬುದರ ಬಗ್ಗೆ ತೀಮಾರ್ನಿಸಲಿ ಎಂದು ಸಂದೇಶ್ ಸ್ವಾಮಿ ಮನವಿ ಮಾಡಿದ್ದಾರೆ.