ವಿತರಕರ ಬದುಕಿಗೆ ಮಾಧ್ಯಮ ಸಂಸ್ಧೆಗಳು ಊರುಗೋಲಾಗಲಿ

| Published : Sep 09 2024, 01:30 AM IST

ವಿತರಕರ ಬದುಕಿಗೆ ಮಾಧ್ಯಮ ಸಂಸ್ಧೆಗಳು ಊರುಗೋಲಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಜಾನೆ ಚಳಿ, ಗಾಳಿ ಲೆಕ್ಕಿಸದೇ ಪತ್ರಿಕೆ ವಿತರಣೆ ಮಾಡುವ ಕಾಯಕ ಜೀವಿಗಳ ಬದುಕಿಗೆ ಮಾಧ್ಯಮ ಸಂಸ್ಥೆ ಮತ್ತು ಸರ್ಕಾರ ಊರುಗೋಲಾಗಬೇಕೆಂದು ಸಾಣೆಹಳ್ಳಿ ಮಠದ ಪಂಡಿರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗಮುಂಜಾನೆ ಚಳಿ, ಗಾಳಿ ಲೆಕ್ಕಿಸದೇ ಪತ್ರಿಕೆ ವಿತರಣೆ ಮಾಡುವ ಕಾಯಕ ಜೀವಿಗಳ ಬದುಕಿಗೆ ಮಾಧ್ಯಮ ಸಂಸ್ಥೆ ಮತ್ತು ಸರ್ಕಾರ ಊರುಗೋಲಾಗಬೇಕೆಂದು ಸಾಣೆಹಳ್ಳಿ ಮಠದ ಪಂಡಿರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಿಕಾ ಹಂಚಿಕೆದಾರರ ಸಂಘದ ವತಿಯಿಂದ ನಗರದ ಮುರುಘಾಮಠದ ಅನುಭವ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾ ವಿತರಕರ 4ನೇ ರಾಜ್ಯಮಟ್ಟದ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮಾತನಾಡಿದರು.

ಜ್ಞಾನವನ್ನು ಕೊಡುವ ಕೆಲಸವನ್ನು ಮೀಡಿಯಾಗಳು ಮಾಡುತ್ತಿವೆ. ಜ್ಞಾನ ಮನೆ ಮನೆಗೂ ತಲುಪಿಸುವ ಕಾರ್ಯವನ್ನು ವಿತರಕರು ಮಾಡುತ್ತಾರೆ. ಸಮಾಜದಲ್ಲಿ ದೊಡ್ಡವರು ಕಾಣಿಸಿಕೊಳ್ಳುತ್ತಾರೆ. ಆದರೆ ಅವರ ಹಿಂದೆ ಕೆಲಸ ಮಾಡುವವರು ಕಾಣಿಸಿಕೊಳ್ಳುವುದಿಲ್ಲ. ಯಾವುದೇ ಕೆಲಸ ಕನಿಷ್ಠ ಅಲ್ಲ, ಶ್ರೇಷ್ಟವೂ ಅಲ್ಲ. ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು. ಪತ್ರಿಕಾ ವಿತರಕರು ನಿಜವಾದ ಆರೋಗ್ಯವಂತರು. ನಿತ್ಯ ಸೈಕಲ್ ತುಳಿದು ಆರೋಗ್ಯ ಕಾಪಾಡಿಕೊಳ್ಳುತ್ತಾರೆ ಎಂದರು.ಸಂಸದ ಗೋವಿಂದ ಕಾರಜೋಳ ಮಾತನಾಡಿ, ಜನತಂತ್ರ ವ್ಯವಸ್ಥೆಯಲ್ಲಿ ಮುದ್ರಣ ಮಾಧ್ಯಮದವರು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಹಾಲು ಹಾಕುವವರು, ಪೋಸ್ಟ್ ಮ್ಯಾನ್ ಸೇವೆಗಿಂತ ತ್ವರಿತವಾಗಿ ಪತ್ರಿಕಾ ವಿತರಕರು ಕೆಲಸ ಮಾಡುತ್ತಿದ್ದಾರೆ. ಪೋಸ್ಟ್ ಮ್ಯಾನ್‌ಗಳಿಗೆ ಹಲವು ಸವಲತ್ತುಗಳಿರುತ್ತವೆ. ಯಾವುದೇ ಸವಲತ್ತುಗಳಿಲ್ಲದೆ ತ್ವರಿತವಾಗಿ ಸೇವೆಯನ್ನು ವಿತರಕರು ಮಾಡುತ್ತಾರೆ ಎಂದರು.

ರಾಷ್ಟ್ರಪತಿಗಳಾಗಿದ್ದ ಕಲಾಂ ಅವರು ವಿತರಕರಾಗಿ ಕೆಲಸ ಮಾಡಿದ್ದಾರೆ. ಎಷ್ಟೋ ವಿದ್ಯಾರ್ಥಿಗಳು ಪತ್ರಿಕಾ ವಿತರಣೆ ಮಾಡಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ ಈಗ ಎರಡು ರೀತಿಯ ಮಾಧ್ಯಮಗಳಿವೆ ಒಂದು ಅಸಲಿ ಇನ್ನೊಂದು ನಕಲಿ. ಯಾವುದು ಅಸಲಿ ಯಾವುದು ನಕಲಿ ಎಂಬುದನ್ನು ಅರಿಯಬೇಕಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಹುಟ್ಟು ಹಾಕಿದ ಶ್ರಮ ಸಂಸ್ಕೃತಿ ಭಾಗವಾಗಿ ನಾವೆಲ್ಲ ಇಲ್ಲಿ ಸೇರಿದ್ದೇವೆ. ಅಂದಿನ ಅನುಭವ ಮಂಟಪದಲ್ಲಿ ಎಲ್ಲ ಕಾಯಕವೂ ಶ್ರೇಷ್ಟ. ಯಾವ ಕೆಲಸವೂ ಕೀಳಲ್ಲವೆಂಬ ಸಂದೇಶವನ್ನು ವಚನಕಾರರು ಸಾರಿದ್ದರು ಎಂದರು.

ಪತ್ರಿಕಾ ವಿತರಕರದ್ದು ಅತ್ಯಂತ ಶ್ರೇಷ್ಟವಾದ ಕೆಲಸ. ರಾಜ್ಯ, ದೇಶ, ವಿಶ್ವದ ಮೂಲೆಯಲ್ಲಿ ಆಗಿರುವ ಪ್ರಮಖ ಘಟನಾವಳಿಗಳನ್ನು ಸೂರ್ಯ ಹುಟ್ಟುವುದಕ್ಕೂ ಮೊದಲು ಓದುಗನ ಮನೆಯಂಗಳಕ್ಕೆ ತಲುಪಿಸುವ ಕೆಲಸವನ್ನು ವಿತರಕರು ಮಾಡುತ್ತಿದ್ದಾರೆ. ಮಳೆ, ಚಳಿ, ಗಾಳಿ ಲೆಕ್ಕಿಸದೆ ತಮ್ಮ ವೃತ್ತಿಯಲ್ಲಿ ನಿರತರಾಗಿದ್ದಾರೆ ಎಂದು ಶ್ಲಾಘಿಸಿದರು.ರಾಜ್ಯದಲ್ಲಿ ಸುಮಾರು 40 ಸಾವಿರ ಪತ್ರಿಕಾ ವಿತರಕರು ಇದ್ದಾರೆ. ಇದರಲ್ಲಿ ಬೆಂಗಳೂರಿನಲ್ಲಿಯೇ 120 ಸ್ಥಳಗಳಲ್ಲಿ ಸುಮಾರು 6500 ಜನ ಪತ್ರಿಕೆಯನ್ನು ವಿತರಣೆ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕಾ ವಿತರಕರ ನೆರವಿಗೆ ಧಾವಿಸಿದ್ದಾರೆ. ಕಾರ್ಮಿಕ ಇಲಾಖೆಯಲ್ಲಿ ಇ-ಶ್ರಮ್ ಅಡಿ ನೋಂದಣಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಕರ್ತವ್ಯ ನಿರ್ವಹಿಸುವ ವೇಳೆ ಏನಾದರೂ ಅವಘಡಗಳು ಸಂಭವಿಸಿದಲ್ಲಿ ಪರಿಹಾರ ಲಭ್ಯವಾಗಲಿದೆ ಎಂದು ತಿಳಿಸಿದರು.ಸಿಎಂ ಮಾಧ್ಯಮ ವಕ್ತಾರ, ಕೆ.ವಿ. ಪ್ರಭಾಕರ್, ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್ ನವೀನ್, ಶಾಸಕ ಕೆ.ಸಿ ವೀರೇಂದ್ರ ಪಪ್ಪಿ, ವಿಆರ್ ಎಲ್ ಸಮೂಹ ಸಂಸ್ಥೆ ಮುಖ್ಯಸ್ಥ ವಿಜಯ ಸಂಕೇಶ್ವರ್, ಪತ್ರರ್ತರ ರಾಷ್ಟೀಯ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರಜಾಪ್ರಗತಿ ಪತ್ರಿಕೆ ಸಂಪಾದಕರಾದ ನಾಗಣ್ಣ, ಹಿರಿಯ ಪತ್ರಿಕಾ ವಿತರಕರಾದ ಜನರಪ್ಪ, ರಾಜ್ಯಾಧ್ಯಕ್ಷ ಶಂಭುಲಿಂಗಪ್ಪ, ಚಿತ್ರದುರ್ಗ ಜಿಲ್ಲಾ ಕಾರ್ಯನಿತರ ಪತ್ರಿಕಾ ಹಂಚಿಕೆದಾರರ ವಿತರಕ ಸಂಘದ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಜಿಲ್ಲಾ ಕಾರ್ಯನಿರತ ಪತ್ರಕರರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್ ಪೀರ್, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಜಗದೀಶ್, ಪ್ರಕಾಶ್ ನಾಯ್ಕ್, ತಹಸೀಲ್ದಾರ್ ನಾಗವೇಣಿ ಇದ್ದರು. ರಾಜ್ಯದ ವಿವಿಧ ಜಿಲ್ಲೆಗಳ ಒಂದು ಸಾವಿರಕ್ಕೂ ಹೆಚ್ಚು ಪತ್ರಿಕಾ ವಿತರಕರು ಪಾಲ್ಗೊಂಡಿದ್ದರು.