ಮಾಧ್ಯಮಗಳು ಸುದ್ದಿಯ ಸತ್ಯಾಸತ್ಯತೆ ಅರಿಯಿರಿ : ಸಚಿವ ದರ್ಶನಾಪುರ

| Published : Jul 31 2024, 01:02 AM IST

ಮಾಧ್ಯಮಗಳು ಸುದ್ದಿಯ ಸತ್ಯಾಸತ್ಯತೆ ಅರಿಯಿರಿ : ಸಚಿವ ದರ್ಶನಾಪುರ
Share this Article
  • FB
  • TW
  • Linkdin
  • Email

ಸಾರಾಂಶ

ಮಾಧ್ಯಮಗಳು ಯಾವುದೇ ವಿಷಯವನ್ನು ಜನರಿಗೆ ತಿಳಿಸುವ ಮುನ್ನ ಅದರ ಸತ್ಯಾಸತ್ಯತೆ ಅರಿತು, ನಿಖರವಾದ ಮಾಹಿತಿ ತಿಳಿಸಬೇಕು. ತಪ್ಪಾಗಿ ನೀಡಿದರೆ ಸಮಾಜದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ ಎಂದು ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಮಾಧ್ಯಮಗಳು ಯಾವುದೇ ವಿಷಯವನ್ನು ಜನರಿಗೆ ತಿಳಿಸುವ ಮುನ್ನ ಅದರ ಸತ್ಯಾಸತ್ಯತೆ ಅರಿತು, ನಿಖರವಾದ ಮಾಹಿತಿ ತಿಳಿಸಬೇಕು. ತಪ್ಪಾಗಿ ನೀಡಿದರೆ ಸಮಾಜದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ ಎಂದು ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅಭಿಪ್ರಾಯಪಟ್ಟರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ, ಮಂಗಳವಾರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುದ್ರಣ ಮಾಧ್ಯಮದ ಮೇಲೆ ಜನರ ಮೇಲೆ ಅಪಾರವಾದ ವಿಶ್ವಾಸವಿದೆ. ಹೀಗಾಗಿಯೇ ಸಾಮಾಜಿಕ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದರು.ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಮಾತನಾಡಿ, ಎಲ್ಲಿಯೂ ನ್ಯಾಯ ಸಿಗದಿದ್ದಾಗ ಮಾಧ್ಯಮಗಳ ಮುಂದೆ ಹೋದರೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಪತ್ರಕರ್ತರು ಸತ್ಯವನ್ನು ಜನತೆಗೆ ತಿಳಿಸುವಂತಹ ಕೆಲಸ ಮಾಡಲು ಮುಂದಾಗುವುದು ತುಂಬ ಅಗತ್ಯವಿದೆ ಎಂದು ಹೇಳಿದರು.ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕೆ. ನಿಂಗಜ್ಜ ಮಾತನಾಡಿ, ರಾಜ್ಯ ಸರಕಾರ ಆಂಧ್ರ ಮಾದರಿಯಲ್ಲಿ ಪತ್ರಕರ್ತರಿಗೆ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಬೇಕಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಪತ್ರಕರ್ತರಿಗೆ ನಿವೇಶನಗಳನ್ನು ನೀಡಲು ರಾಜ್ಯ ಸರಕಾರ ಮುಂದಾಗಬೇಕು ಎಂದು ತಿಳಿಸಿದರು.ಖ್ಯಾತ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಮಾತನಾಡಿ, ಪತ್ರಿಕೋದ್ಯಮದಲ್ಲಿ ನೈಜ ಪತ್ರಕರ್ತರ ಸಂಖ್ಯೆ ಕಡಿಮೆ ಆಗುತ್ತಿರುವುದು ನಿಜಕ್ಕೂ ಕಳವಳಕಾರಿ ಎಂದರು.ಡಿಡಿಯು ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ. ಭೀಮಣ್ಣ ಮೇಟಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಕಷ್ಟು ಮಾಧ್ಯಮಗಳು ಹೊಸದಾಗಿ ಬರುತ್ತಿವೆ. ಅದರಲ್ಲಿಯೂ ದೃಶ್ಯ ಮಾಧ್ಯಮಗಳಿಗಿಂತಲೂ ಮುದ್ರಣ ಮಾಧ್ಯಮ ಮೇಲೆ ಸಾಕಷ್ಟು ವಿಶ್ವಾಸವಿದೆ. ಇದನ್ನು ಉಳಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಮಾತನಾಡಿ, ಕಳೆದ ಮೂರು ವರ್ಷಗಳಿಂದಲೂ ಪತ್ರಕರ್ತರ ಏಳ್ಗೆಗೆ ಸಂಘ ಶ್ರಮಿಸುವ ಮೂಲಕ ಇಡೀ ರಾಜ್ಯದಲ್ಲಿಯೇ ಉತ್ತಮ ಸಂಘ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ ಎಂದರು.