ಸಾರಾಂಶ
ಅನುದಾನ ಬಿಡುಗಡೆ ಮಾಡಲು ಸಚಿವ ತಂಗಡಗಿ ಶೇ. 25ರಷ್ಟು ಕಮಿಷನ್ ಕೇಳಿದ್ದಾರೆ ಎಂದು ಆರೋಪಿಸಿರುವ ಸ್ವಾಮೀಜಿ ಈ ಹಿಂದೆ ಯಾವ ಪಕ್ಷದಲ್ಲಿದ್ದರು ಎಂಬುವುದನ್ನು ಮನಗಾಣಬೇಕು. ರಾಜಕೀಯ ಪ್ರೇರಿತರಾಗಿ ಭ್ರಷ್ಟಾಚಾರದ ಆರೋಪಿಸುವುದನ್ನು ಬಿಡಬೇಕು.
ಧಾರವಾಡ: ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಪೂರ್ಣಾನಂದಪುರಿ ಸ್ವಾಮೀಜಿ ರಾಜಕೀಯ ಪ್ರೇರಿತರಾಗಿ ಸಚಿವ ಶಿವಾರಾಜ ತಂಗಡಗಿ ವಿರುದ್ಧ ಆರೋಪ ಮಾಡಿರುವುದು ಸರಿಯಲ್ಲ ಎಂದು ಭೋವಿ ಸಮಾಜದ ರಾಜ್ಯ ಮುಖಂಡ ರವಿ ಪೂಜಾರಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುದಾನ ಬಿಡುಗಡೆ ಮಾಡಲು ಸಚಿವ ತಂಗಡಗಿ ಶೇ. 25ರಷ್ಟು ಕಮಿಷನ್ ಕೇಳಿದ್ದಾರೆ ಎಂದು ಆರೋಪಿಸಿರುವ ಸ್ವಾಮೀಜಿ ಈ ಹಿಂದೆ ಯಾವ ಪಕ್ಷದಲ್ಲಿದ್ದರು ಎಂಬುವುದನ್ನು ಮನಗಾಣಬೇಕು. ರಾಜಕೀಯ ಪ್ರೇರಿತರಾಗಿ ಭ್ರಷ್ಟಾಚಾರದ ಆರೋಪಿಸುವುದನ್ನು ಬಿಡಬೇಕು. ಇಲ್ಲವೇ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಆರೋಪ ಸಾಬೀತು ಮಾಡಿದರೆ ರಾಜೀನಾಮೆ ನೀಡುವುದಾಗಿ ಸಚಿವ ತಂಗಡಗಿ ಹೇಳಿದ್ದಾರೆ. ಸ್ವಾಮೀಜಿ ಸುಳ್ಳು ಹೇಳುವುದನ್ನು ಬಿಟ್ಟು ನ್ಯಾಯಾಲಯದಲ್ಲಿ ಆರೋಪ ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜವಾಬ್ದಾರಿ ಹೊತ್ತಿರುವ ಶಿವಾರಾಜ ತಂಗಡಗಿ ರಾಜ್ಯ ಸರ್ಕಾರದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಸಾಹಿತಿಗಳು, ಚಿಂತಕರು ತಂಗಡಗಿಯವರ ಕಾರ್ಯವೈಖರಿ ಶ್ಲಾಘಿಸಿದ್ದಾರೆ. ಆದರೆ, ರಾಜಕೀಯ ಪ್ರೇರಿತರಾಗಿ ಆರೋಪಿಸುತ್ತಿರುವುದು ಸರಿಯಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ತುಳಸಪ್ಪ ಪೂಜಾರ, ಹುಡಾ ಸದಸ್ಯ ಮಂಜುನಾಥ ಭೋವಿ, ಶ್ರೀನಾಥ ಉಣಕಲ್, ಮಾರುತಿ ವಡ್ಡರ, ಚಂದ್ರು ಹಿರೇಮನಿ, ಮಹಾಂತೇಶ ಹಳಿಯಾಳ, ನಾಗರಾಜ ಹಿರೇಮನಿ ಇದ್ದರು.