ಕನ್ನಡಪ್ರಭ ವಾರ್ತೆ ಮಂಡ್ಯ
ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯದ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದರೂ ಸಮರ್ಥವಾಗಿ ಧ್ವನಿ ಎತ್ತುವಲ್ಲಿ ವಿಫಲರಾಗಿರುವ ರಾಜ್ಯದ ಸಂಸದರು ಹಾಗೂ ಕೇಂದ್ರದಲ್ಲಿ ಮಂತ್ರಿಯಾಗಿರುವವರು ರಾಜೀನಾಮೆ ಕೊಟ್ಟು ಬರಲಿ ಎಂದು ಚಿತ್ರ ನಿರ್ಮಾಪಕ ಸಾ.ರಾ.ಗೋವಿಂದು ಗುಡುಗಿದರು.ಕಾವೇರಿ ನೀರು ಹರಿಸದೆ ಸುಗ್ರೀವಾಜ್ಞೆ ಜಾರಿಗೊಳಿಸಿದ ಅಂದಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪ ನಿಜವಾದ ರೈತ- ಜನಪರ ನಾಯಕ. ಕಾವೇರಿ ನೀರು ಹರಿಸುವ ನಿರ್ಧಾರವನ್ನು ವಿರೋಧಿಸಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಂಬರೀಶ್ ರೈತಪರ ಬದ್ಧತೆಯಿದ್ದ ನಾಯಕ. ಅಂತಹದೊಂದು ಶಕ್ತಿಯನ್ನು ಸಂಸದರು ಪ್ರದರ್ಶಿಸುತ್ತಿಲ್ಲ. ಈಗಿರುವ ಸಂಸದರು ಸೋಗಲಾಡಿಗಳು, ನರಸತ್ತವರು. ಅವರಿಗೆ ಶಕ್ತಿ ಇಲ್ಲ. ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬನ್ನಿ. ಕಾವೇರಿಗೆ ಅನ್ಯಾಯವಾಗಿದ್ದರೂ ಬಾಯಿ ಮುಚ್ಚಿಕೊಂಡಿರುವ ಮಂತ್ರಿಗಳಿಗೆ, ಸಂಸದರಿಗೆ ತಾಕತ್ತು, ಧಮ್ಮು ಇಲ್ಲ ಎಂದು ಖಾರವಾಗಿ ಹೇಳಿದರು.
ಮೇಕೆದಾಟು ಅಣೆಕಟ್ಟು, ಮಹದಾಯಿ ನೀರು ಹಂಚಿಕೆ, ಕಳಸಾ-ಬಂಡೂರಿ, ಕಾವೇರಿ ವಿಷಯವಾಗಿ ಕಳೆದ ೩೦-೪೦ ವರ್ಷಗಳಿಂದ ಕೇಂದ್ರ ಸರ್ಕಾರ ನಿರಂತರವಾಗಿ ಕರ್ನಾಟಕವನ್ನು ಕಡೆಗಣಿಸಿಕೊಂಡೇ ಬಂದಿದೆ. ಭಾರತದ ಭೂಪಟದಲ್ಲಿ ಕರ್ನಾಟಕ ಇಲ್ಲವೇ. ರಾಜ್ಯಕ್ಕೆ ಯಾಕೆ ಈ ಅನ್ಯಾಯ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.ಕಾವೇರಿ ನೀರು ನಿರ್ವಹಣಾ ಸಮಿತಿ, ನೀರು ನಿರ್ವಹಣಾ ಪ್ರಾಧಿಕಾರಗಳು ತಮಿಳುನಾಡಿನ ಪರವಾಗಿಯೇ ವಕಾಲತ್ತು ವಹಿಸುತ್ತಿವೆ. ಕರ್ನಾಟಕದ ನೀರಿನ ಪರಿಸ್ಥಿತಿ ಗೊತ್ತಿಲ್ಲದಿದ್ದರೆ ತಜ್ಞರ ತಂಡವನ್ನು ಕಳುಹಿಸಿ ಜಲಾಶಯಗಳಲ್ಲಿನ ನೀರಿನ ಸಂಗ್ರಹದ ಬಗ್ಗೆ ಪರಾಮರ್ಶೆ ನಡೆಸಲಿ. ಅದನ್ನು ಬಿಟ್ಟು ಏಕಾಏಕಿ ೧೦ ಟಿಎಂಸಿ, ೧೬ ಟಿಎಂಸಿ ನೀರು ಹರಿಸುವಂತೆ ಆದೇಶಿಸುವುದಕ್ಕೆ ಕರ್ನಾಟಕದ ರೈತರನ್ನು ಗುಲಾಮರೆಂದುಕೊಂಡಿದ್ದೀರಾ. ಇಲ್ಲಿನ ರೈತರಿಗೂ ಬದುಕಿದೆ ಎನ್ನುವುದನ್ನು ಮರೆತು ಆದೇಶ ಮಾಡುವುದು ಅಮಾನವೀಯ ಎಂದು ಕಿಡಿಕಾರಿದರು.
ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ರಾಜ್ಯಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕು. ಅಲ್ಲಿ ನೈಜ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ತಮಿಳುನಾಡಿಗೆ ನೀರು ಬಿಡುಗಡೆ ಮಾಡದಿರುವ ನಿರ್ಧಾರಕ್ಕೆ ಕಟಿಬದ್ಧರಾಗಬೇಕು ಎಂದು ಹೇಳಿದ ಸಾ.ರಾ.ಗೋವಿಂದು, ಕರ್ನಾಟಕ ಬಂದ್ ಆಚರಣೆಗೆ ನಮ್ಮ ವಿರೋಧವಿಲ್ಲ. ನಾಳಿನ ಬಂದ್‌ಗೆ ನಮ್ಮ ಬೆಂಬಲವಿರುವುದಿಲ್ಲ. ಬಂದ್ ಮಾಡುವವರಿಗೆ ಬೇಡ ಎನ್ನುವುದಿಲ್ಲ. ಮಳೆ ಬಂದು ನಾಲೆಗಳಿಗೆ ನೀರು ಬಿಟ್ಟಿದ್ದರಿಂದ ಪ್ರತಿಭಟನೆ ಕೈಬಿಟ್ಟಿದ್ದೇವೆ. ಈಗ ಮತ್ತೆ ಅದೇ ಆದೇಶ ಬಂದಿದೆ. ಕರ್ನಾಟಕ ಬಂದ್‌ಗೆ ಸಮಯ- ಕಾಲಾವಕಾಶದ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಮೇಕೆದಾಟು, ಕಾವೇರಿ ವಿಷಯ ಇಟ್ಟುಕೊಂಡು ದೊಡ್ಡ ಮಟ್ಟದ ಹೋರಾಟ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಎಚ್.ಶಿವರಾಮೇಗೌಡ ಮಾತನಾಡಿ, ನಾವು ಒಕ್ಕೂಟದ ವ್ಯವಸ್ಥೆಯಲ್ಲಿ ಇದ್ದೇವೋ, ಇಲ್ಲವೋ ಎಂಬ ಬಗ್ಗೆ ಅನುಮಾನ ಮೂಡುತ್ತಿದೆ. ನಮ್ಮ ಹೊಟ್ಟೆಗೆ ಹಿಟ್ಟಿಲ್ಲ, ಬೇರೆಯವರ ಜುಟ್ಟಿಗೆ ಮಲ್ಲಿಗೆ ಹೂ ಮುಡಿಸುವಂತಾಗಿದೆ. ರಾಜ್ಯಸರ್ಕಾರ ಕೆರೆ- ಕಟ್ಟೆಗಳನ್ನು ತುಂಬಿಸುವ ಕೆಲಸ ಮಾಡಲಿ. ಸಂಸದರು ಲೋಕಸಭೆಯಲ್ಲಿ ದನಿ ಎತ್ತಬೇಕು. ಜನರ ಪರವಾಗಿ ನಿಲ್ಲಬೇಕು. ನಮಗಾಗಿರುವ ಅನ್ಯಾಯದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಂಡಿಸುವಂತೆ ಆಗ್ರಹಿಸಿದರು.
ರೀಲ್ ಹೀರೋಗಳನ್ನು ನಂಬಬೇಡಿ. ಅವರಿಂದ ನೆಲ- ಜಲ, ಭಾಷೆಗೆ ಏನೂ ಪ್ರಯೋಜನವಾಗುವುದಿಲ್ಲ. ರೈತರು, ಹೋರಾಟಗಾರರೇ ನಿಜವಾದ ಹೀರೋಗಳು. ಇವರನ್ನು ನಂಬಿ ಹೋರಾಟ ಮಾಡಿದರೆ ಹೊಟ್ಟೆಗೆ ಅನ್ನವಾದರೂ ಸಿಗುತ್ತೆ. ರೀಲ್ ಹೀರೋಗಳನ್ನು ನಂಬಿದರೆ ಏನೂ ಸಿಗುವುದಿಲ್ಲ ಎಂದು ಛೇಡಿಸಿದರು.