ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಒಳಮೀಸಲಾತಿ ಸಮೀಕ್ಷೆಗಾಗಿ ರಾಜ್ಯ ಸರಕಾರ ನೇಮಿಸಿದ್ದ ನಾಗಮೋಹನ್ ದಾಸ್ ವರದಿಯನ್ನು ಯಾರೂ ಕೂಡ ವಿರೋಧಿಸದೆ ಯಥಾವತ್ತು ಜಾರಿ ಮಾಡಬೇಕು. ಆ ಮೂಲಕ ಮಾದಿಗ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ತೊಡೆದು ಹಾಕಬೇಕು ಎಂದು ರಾಜ್ಯ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಹೇಳಿದರು. ಅವರು ನಗರದಲ್ಲಿ ಮಾದಿಗ ಸಮುದಾಯದ ಮುಖಂಡರು ಒಳಮೀಸಲಾತಿ ಪರವಾಗಿ ಸಚಿವ ಸಂಪುಟಲ್ಲಿ ಧ್ವನಿ ಎತ್ತುವಂತೆ ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ ನಂತರ ಮಾತನಾಡಿದರು. ಒಳಮೀಸಲಾತಿ ಹೋರಾಟ ಕಳೆದ ೨೫ ವರ್ಷಗಳಿಂದ ಅವಿರತವಾಗಿ ರಾಜ್ಯದಲ್ಲಿ ನಡೆಯುತ್ತಿದೆ. ಈ ಹಿಂದಿನ ಒಳಮೀಸಲಾತಿಗಾಗಿ ನೇಮಿಸಿದ್ದ ಸದಾಶಿವ ಆಯೋಗದ ವರದಿಯನ್ನು ನಾನು ಅರ್ಥ ಮಾಡಿಕೊಂಡಿದ್ದೆ. ಈಗಿನ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಸಹ ನಾನು ಸ್ವಲ್ಪ ಮಟ್ಟಿಗೆ ಓದಿದ್ದೇನೆ. ಸರ್ವೋಚ್ಛ ನ್ಯಾಯಾಲಯ ಕೊಟ್ಟ ತೀರ್ಪಿನ ಅನ್ವಯ ನಾಗಮೋಹನ್ ದಾಸ್ ಅವರು ಹೊಸದಾಗಿ ಸಮೀಕ್ಷೆಯನ್ನು ಮಾಡಿ ಮಾಹಿತಿ ಪಡೆದು ವರದಿ ತಯಾರು ಮಾಡಿ ಸರಕಾರಕ್ಕೆ ಸಲ್ಲಿಸಿದ್ದಾರೆ. ಈ ವರದಿಯ ಬಗ್ಗೆ ಅಪಸ್ವರ ತರವಲ್ಲ. ನಾನು ಯಾವತ್ತು ಕೂಡ ಮಾದಿಗ ಸಮುದಾಯದ ಪರವಾಗಿದ್ದೇನೆ. ಒಳಮೀಸಲಾತಿ ಪರವಾಗಿ ಸಚಿವ ಸಂಪುಟದಲ್ಲಿ ಮಾತನಾಡುತ್ತೇನೆ. ಮುಂದಿನ ಸಚಿವ ಸಂಪುಟದಲ್ಲಿ ಇದು ಇತ್ಯರ್ಥವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಜೀಷಾನ್ ಮೊಹಮದ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಕೆಪಿಸಿಸಿ ಸದಸ್ಯ ಟಿ.ಲೋಕೇಶ್, ಮಾಜಿ ನಗರಸಭಾ ಸದಸ್ಯ ಬಸವರಾಜು, ಮಾಜಿ ತಾ.ಪಂ. ಸದಸ್ಯ ಪಿ.ಬಿ.ನರಸಿಂಹಯ್ಯ, ಮುಖಂಡರಾದ ದ್ವಾರನಕುಂಟೆ ಲಕ್ಷ್ಮಣ್, ಶಾಸಮರು ಮೂರ್ತಿ, ಕಲ್ಲುಕೋಟೆ ಲಿಂಗರಾಜು, ದೊಡ್ಡಬಾಣಗೆರೆ ಶಿವಾನಂದ್ ಸೇರಿದಂತೆ ಹಲವರು ಹಾಜರಿದ್ದರು.