ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಸ್ವಾತಂತ್ರ‍್ಯ ದಿನಾಚರಣೆಯ ಸಂದರ್ಭ ದೇಶದ ಪ್ರತಿ ಮನೆಯಲ್ಲಿಯೂ ನಮ್ಮ ದೇಶದ ಪವಿತ್ರ ರಾಷ್ಟ್ರಧ್ವಜ ಹಾರಾಡಬೇಕು ಎಂಬ ಉದ್ದೇಶದಿಂದ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಸ್ವಾತಂತ್ರ‍್ಯ ದಿನಾಚರಣೆಯ ಸಂದರ್ಭ ದೇಶದ ಪ್ರತಿ ಮನೆಯಲ್ಲಿಯೂ ನಮ್ಮ ದೇಶದ ಪವಿತ್ರ ರಾಷ್ಟ್ರಧ್ವಜ ಹಾರಾಡಬೇಕು ಎಂಬ ಉದ್ದೇಶದಿಂದ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಮಂಡಲಾಧ್ಯಕ್ಷ ತಿಮ್ಮಪ್ಪ ಎಂ.ಕೆ. ಹೇಳಿದರು.ಪಟ್ಟಣದಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಅಡಿಯಲ್ಲಿ ತಾಲ್ಲೂಕು ಯುವಮೋರ್ಚಾದ ವತಿಯಿಂದ ಹಮ್ಮಿಕೊಂಡ ಬೈಕ್ ರ್‍ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶಪ್ರೇಮವನ್ನು ಜಾಗೃತಗೊಳಿಸಲು ಮತ್ತು ಇಂದಿನ ಯುವಜನತೆಗೆ ದೇಶಾಭಿಮಾನವನ್ನು ಹೆಚ್ಚಿಸಲು ಹರ್ ಘರ್ ತಿರಂಗಾ ಅಭಿಯಾನ ಬಹಳ ಸಹಕಾರಿಯಾಗಿದೆ. ತಾಲ್ಲೂಕಿನಲ್ಲಿಯೂ ಈ ಅಭಿಯಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬೈಕ್‌ರ್‍ಯಾಲಿಯನ್ನು ಹಮ್ಮಿಕೊಂಡಿದ್ದೇವೆ. ಸ್ವಾತಂತ್ರ‍್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರತಿ ಮನೆಯಲ್ಲಿಯೂ ಪವಿತ್ರ ರಾಷ್ಟ್ರ ಧ್ವಜ ಹಾರಾಡವಂತಾಗಲು ಎಲ್ಲರೂ ಸಹಕರಿಸಬೇಕು ಎಂದರು.ತಾಲ್ಲೂಕು ಯುವಮೋರ್ಚಾ ಅಧ್ಯಕ್ಷ ಎ.ಜಿ. ನಾಯ್ಕ ಕಡಕೇರಿ ಪ್ರಾಸ್ತಾವಿಕ ಮಾತನಾಡಿದರು.
ಇದಕ್ಕೂ ಮೊದಲು ಪಟ್ಟಣದ ಗಂಗಾಂಬಿಕಾ ದೇವಾಲಯದಿಂದ ಆರಂಭಗೊಂಡ ಬೈಕ್‌ರ್‍ಯಾಲಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಮುಕ್ತಾಯಗೊಂಡಿತು.ಈ ಸಂದರ್ಭ ಪ್ರಮುಖರಾದ ಮಾರುತಿ ನಾಯ್ಕ ಹೊಸೂರು, ತೋಟಪ್ಪ ನಾಯ್ಕ, ನಂದನ ಬೋರ್ಕರ್, ಮಂಜುನಾಥ ಭಟ್ಟ, ವಿಜಯ ಹೆಗಡೆ, ಕೃಷ್ಣಮೂರ್ತಿ ಮಡಿವಾಳ, ವಿನಯ ಹೊನ್ನೆಗುಂಡಿ ಮುಂತಾದವರು ಇದ್ದರು.
ಮನವಿ:ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ತಾಲ್ಲೂಕಿನ ಮಹಿಳೆಯರು ಸತ್ಯಾಗ್ರಹ ನಡೆಸಿದ ತಾಲ್ಲೂಕಿನ ಮಾವಿನಗುಂಡಿಯಲ್ಲಿ ೧೫ ವರ್ಷಗಳ ಹಿಂದೆ ಸ್ವಾತಂತ್ರ್ಯವನವನ್ನು ನಿರ್ಮಿಸಿದ್ದರು. ಆದರೆ ಈಗ ಅದು ಸಂಪೂರ್ಣ ಹಾಳಾಗಿದ್ದು, ಕಲಾಕೃತಿಗಳೆಲ್ಲ ಬಣ್ಣ ಕಳೆದುಕೊಂಡು ವಿರೂಪವಾಗಿವೆ. ಕೆಲಭಾಗ ಭಗ್ನಗೊಂಡಿವೆ. ಈ ಅಪರೂಪದ ಸ್ಮಾರಕವನ್ನು ರಕ್ಷಿಸುವತ್ತ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ವಹಿಸಬೇಕೆಂದು ಆಗ್ರಹಿಸಿ ತಾಲ್ಲೂಕು ಯುವ ಮೋರ್ಚಾ ವತಿಯಿಂದ ತಹಶೀಲ್ದಾರಗೆ ಮತ್ತು ತಹಶೀಲ್ದಾರ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.