ಸಾರಾಂಶ
ಮರಿಯಮ್ಮನಹಳ್ಳಿ: ಇವತ್ತಿನ ದಿನಮಾನಗಳಲ್ಲಿ ಸಾಮೂಹಿಕ ವಿವಾಹಗಳಲ್ಲಿ ವಿವಾಹವಾಗುವ ಮೂಲಕ ದುಂದುವೆಚ್ಚದ ಮದುವೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಲಿದೆ. ಮದುವೆಗಾಗಿ ಲಕ್ಷಾಂತರ ರು. ಸಾಲ ಮಾಡಿ ಸಾಲಗಾರರಾಗುವುದನ್ನು ತಪ್ಪಿಸಿದಂದಾಗುತ್ತದೆ. ಸಾಮೂಹಿಕ ವಿವಾಹಗಳು ಮಾದರಿಯಾಗಬೇಕು ಎಂದು ಗದಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಸ್ವಾಮಿಗಳು ಹೇಳಿದರು.
ಸಮೀಪದ ಡಣಾಪುರದಲ್ಲಿ ಶ್ರೀಶರಣಬಸವೇಶ್ವರ ಪುರಾಣಸಮಿತಿಯವರು ಸೋಮವಾರ ಹಮ್ಮಿಕೊಂಡಿದ್ದ ಕಲ್ಬುರ್ಗಿ ಶ್ರೀಶರಣಬಸವೇಶ್ವರ 24ನೇ ವರ್ಷದ ಪುರಾಣ ಮಹಾಮಂಗಲಾ ಹಾಗೂ ಸಾಮೂಹಿಕ ವಿವಾಹ ಮತ್ತು ತುಲಾಭಾರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿಕೊಂಡು ಆಶೀರ್ವಚನ ನೀಡಿದರು.ಸಾಮೂಹಿಕ ವಿವಾಹದಲ್ಲಿ ವಿವಾಹವಾದ ನೂತನ ವಧುವರರು ಪರಸ್ಪರ ಒಬ್ಬರಿಗೊಬ್ಬರು ಅರಿತುಕೊಂಡು ಸಂತೋಷದ ಜೀವನ ನಡೆಸಬೇಕು. ಮನೆಯಲ್ಲಿ ಗುರು-ಹಿರಿಯರನ್ನು ಮತ್ತು ತಂದೆ-ತಾಯಿಗಳನ್ನು ಗೌರವದಿಂದ ಕಾಣಬೇಕು. ಮಿತ ಸಂತಾನವನ್ನು ಪಾಲಿಸಬೇಕು. ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಉತ್ತಮ ವ್ಯಕ್ತಿಗಳಾಗಿ ಬೆಳೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆಮುಂದಾಗಬೇಕು ಎಂದು ಅವರು ಹೇಳಿದರು.
ಮರಿಯಮ್ಮನಹಳ್ಳಿ ಗುರುಪಾದ ದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನದಲ್ಲಿ ಮಾತನಾಡಿ, ಸಾಮೂಹಿಕ ವಿವಾಹಗಳು ಬಡವರಿಗೆ ವರದಾನವಾಗಿವೆ. ಮಹಾಶಿವಯೋಗಿ ಹಾನಗಲ್ ಕುಮಾರೇಶ್ವರರು ಸಮಾಜಮುಖಿಯಾಗಿ ಆರಂಭಿಸಿದ ಇಂತಹ ಕಾರ್ಯಕ್ರಮಗಳು ಇಂದಿಗೂ ಶಾಶ್ವತವಾಗಿವೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳು ನಡೆದು ಗ್ರಾಮಗಳಲ್ಲಿ ಶಾಂತಿ, ಸೌಹಾರ್ದ ನೆಲೆಸಲಿ ಎಂದರು.ಡಣಾಪುರ ಗ್ರಾಪಂ ಅಧ್ಯಕ್ಷ ಎಚ್.ಮಲ್ಲೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಸಮಾಜ ಸೇವಕ ಕುರಿ ಶಿವಮೂರ್ತಿ, ತಾಪಂ ಮಾಜಿ ಉಪಾಧ್ಯಕ್ಷ ವ್ಯಾಸನಕೆರೆ ಶ್ರೀನಿವಾಸ, ಸ್ಥಳೀಯ ಮುಖಂಡರಾದ ಹೊಸಪೇಟೆ ಹನುಮಂತಪ್ಪ, ಪಾರ್ವತಮ್ಮ, ನಾಗರಾಜ, ಗುಂಡಾಸ್ವಾಮಿ, ಈ.ಮಂಜುನಾಥ, ಮಂಜಯ್ಯಸ್ವಾಮಿ, ಗುಂಡಾಕೃಷ್ಣ, ಸಿದ್ದಪ್ಪ, ಹನುಮಂತಪ್ಪ, ಬಸವರಾಜ, ಯಮುನೂರಪ್ಪ, ಪಕ್ಕೀರಪ್ಪ, ಬಿ. ಷಣ್ಣುಖಪ್ಪ, ನಿಂಗಪ್ಪ, ಕೊಟ್ರಪ್ಪ, ಜಂಬಣ್ಣ, ಗಾಳೆಪ್ಪ, ಭರಮಪ್ಪ ಸೇರಿದಂತೆ ಪುರಾಣ ಸಮಿತಿಯ ಸದಸ್ಯರು ಮತ್ತು ಗ್ರಾಮದ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಆರು ಜೋಡಿಗಳು ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿದ್ದರು.ಇದೇ ಸಂಧರ್ಭದಲ್ಲಿ ಗದಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಸ್ವಾಮಿಗಳನ್ನು ಗ್ರಾಮದ ಸದ್ಭಕ್ತರಿಂದ ತುಲಾಭಾರ ನಡೆಸಿದರು.