ಸಾರಾಂಶ
-ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಜನಾಂಗ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ
-ಯಾದಗಿರಿಯಲ್ಲಿ ಪ್ರಗತಿ ಪರಿಶೀಲನಾ ಸಭೆಕನ್ನಡಪ್ರಭ ವಾರ್ತೆ ಯಾದಗಿರಿ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ ಜನಾಂಗದ ಮಕ್ಕಳು ಮುಖ್ಯವಾಹಿನಿಗೆ ಬರಬೇಕು, ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಜನಾಂಗ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಹೇಳಿದರು.ಪ.ಪ ಜಾತಿ ಮತ್ತು ಪ.ಪಂ ಅಲೆಮಾರಿ ಸಮುದಾಯದ ಸಂಘ ಸಂಸ್ಥೆಗಳ ಮತ್ತು ಸಾರ್ವಜನಿಕರಿಂದ ಕುಂದುಕೊರತೆ ಅಹವಾಲು ಸ್ವೀಕಾರ ಹಾಗೂ ಸಭೆ ಮತ್ತು ಅಧಿಕಾರಿಗಳೊಂದಿಗೆ ನಿಗಮದ ವಿವಿಧ ಯೋಜನೆಗಳಡಿ ಕಲ್ಪಿಸಿದ ಸೌಲಭ್ಯಗಳ ಕುರಿತು ಸೋಮವಾರ ಜಿ.ಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯ ವಿವಿಧ 20 ವಸತಿ ಶಾಲೆಗಳು ಹಾಗೂ ಒಂದು ಕಾಲೇಜಿನಲ್ಲಿ ಈ ಜನಾಂಗಕ್ಕಾಗಿ ಶೇ.10ರಷ್ಟು ಮೀಸಲಿರುವ ಸ್ಥಾನಗಳ ಪೈಕಿ, ಕೇವಲ ಶೇ.48 ರಷ್ಟು ಮಾತ್ರ ಪ್ರವೇಶಾತಿ ಪಡೆದಿರುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ, ಗುರಿಗೆ ತಕ್ಕಂತೆ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುವಲ್ಲಿ ಸಜ್ಜುಗೊಳಿಸುವಂತೆ ಸಮುದಾಯಕ್ಕೆ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು.ನೈಜ ಜಾತಿ ಪ್ರಮಾಣ ಪತ್ರ: ಮೂಲಜನಾಂಗದವರಿಗೆ ನೈಜ ಜಾತಿ ಪ್ರಮಾಣ ಪತ್ರ, ವಸತಿ ರಹಿತರಿಗೆ ವಸತಿ ಸೌಲಭ್ಯ, ನಿವೇಶನ ರಹಿತರಿಗೆ ನಿವೇಶನ ಸೌಲಭ್ಯ, ಸಮುದಾಯ ಭವನ ಶೌಚಾಲಯ ನಿರ್ಮಾಣ, ಸುಸಜ್ಜಿತ ಶಾಲಾ ಕಟ್ಟಡಗಳ ವ್ಯವಸ್ಥೆ, ಆಟದ ಮೈದಾನ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿ. ಪಲ್ಲವಿ ಸೂಚಿಸಿದರು.
ಇನ್ನು, ಸ್ವಯಂ ಉದ್ಯೋಗ, ನೇರಸಾಲ ಯೋಜನೆ ಹಾಗೂ ಸ್ವಾವಲಂಬಿ ಸಾರಥಿ ಯೋಜನೆಗಳಡಿ ಹೆಚ್ಚಿನ ಗುರಿ ನೀಡಲಾಗಿದ್ದು, ಅರ್ಹ ಫಲಾನುಭವಿಗಳಿಗೆ ಈ ಸೌಲಭ್ಯಗಳ ಲಾಭ ದೊರೆಯುವಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಜನಾಂಗಕ್ಕೆ ಸರ್ಕಾರದ ಸೌಲಭ್ಯಗಳ ಲಾಭವನ್ನು ದೊರಕಿಸಿ ಕೊಡಬೇಕು. ತಾಲೂಕುವಾರು ನಿವೇಶನ ರಹಿತರಿಗೆ ಹಾಗೂ ಮನೆ ರಹಿತರಿಗೆ ವಸತಿ ಮತ್ತು ನಿವೇಶನದ ಸೌಲಭ್ಯ ಕಲ್ಪಿಸುವಂತೆ ಸೂಚಿಸಿದರು.ಅರ್ಹ ಫಲಾನುಭವಿಗಳ ಆಯ್ಕೆ: ಅಧಿಕಾರಿಗಳು ಮತ್ತು ನಾಮ ನಿರ್ದೇಶಿತ ಸದಸ್ಯರ ಮಧ್ಯ ಸಮನ್ವಯತೆ ಇರಬೇಕು. ಈ ಸಮುದಾಯಕ್ಕೆ ಸರ್ಕಾರದ ಯೋಜನೆಗಳಡಿ ಸೌಲಭ್ಯ ದೊರಕಿಸಬೇಕೆಂಬ ಉದ್ದೇಶದೊಂದಿಗೆ ಜಿಲ್ಲಾ ಮಟ್ಟದಲ್ಲಿ ಜಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅನುಷ್ಠಾನ ಸಮಿತಿ ಇದ್ದು, ಪ್ರತಿ ತ್ರೈಮಾಸಿಕ ಅವಧಿಯಲ್ಲಿ ಸಭೆ ನಡೆಸಿ ಯೋಜನೆಗಳ ಲಾಭ ದೊರಕಿಸಲು ಮತ್ತು ಅರ್ಹ ಫಲಾನುಭವಿಗಳ ಆಯ್ಕೆಗೆ ನೆರವಾಗುವಂತೆ ಅವರು ಸಲಹೆ ನೀಡಿದರು.
ಈ ಸಮುದಾಯದ ಹಿತೈಷಿಯಾಗಿ ಅವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಅಹವಾಲು ಸ್ವೀಕರಿಸಲಾಗುತ್ತಿದೆ.ಈಗಾಗಲೇ 20 ಜಿಲ್ಲೆಗಳಲ್ಲಿ ಈ ರೀತಿಯ ಕುಂದುಕೊರತೆ ಅಹವಾಲು ಸ್ವೀಕರಿಸಿ, ಯಾದಗಿರಿಯಲ್ಲೂ ಸ್ವೀಕರಿಸಿದ್ದು, ಸರ್ಕಾರದ ಗಮನಕ್ಕೆ ತರುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಆನಂದಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸಪ್ಪ ಸೇರಿದಂತೆ ಸಮುದಾಯದವರು ಅಧಿಕಾರಿಗಳು ಉಪಸ್ಥಿತರಿದ್ದರು.===ಬಾಕ್ಸ್:1===
- ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಲೆಮಾರಿ ಜನಾಂಗದ ವಿವಿಧ ಸಂಘ ಸಂಸ್ಥೆಗಳಿಂದ ಹಾಗೂ ಸಾರ್ವಜನಿಕರಿಂದ ಅಹವಾಲು ಗಳನ್ನು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿ. ಪಲ್ಲವಿ ಸೂಚಿಸಿದರು.===ಬಾಕ್ಸ್:2===
ಯಲಸತ್ತಿ ಗ್ರಾಮದಲ್ಲಿ ಮೇಲ್ವರ್ಗದ ಜನಾಂಗದಿಂದ ಈ ಬಡ ಸಮುದಾಯದ ಮೇಲೆ ನಡೆದ ದೌರ್ಜನ್ಯದ ತಪ್ಪಿತಸ್ಥರನ್ನು ವಿಶೇಷ ತನಿಖಾ ತಂಡ ರಚಿಸಿ ಶಿಕ್ಷೆಗೆ ಒಳಪಡಿಸಬೇಕು. ಗುರುಮಠಕಲ್ ತಾಲೂಕಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಇಬ್ಬರು ಚಿಂದಿ ಆಯುವ ಬಾಲಕಿ ಹಾಗೂ ಯುವತಿಯ ಸಾವಿನ ಕುರಿತು ಎಫ್.ಎಸ್.ಎಲ್ ವರದಿ ಆಧಾರದ ಮೇಲೆ ನ್ಯಾಯಯುತ ಕ್ರಮ ಕೈಗೊಳ್ಳಲು ಪೋಲಿಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.---
10ವೈಡಿಆರ್7: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಸಮುದಾಯದ ಸಂಘ ಸಂಸ್ಥೆಗಳ ಮತ್ತು ಸಾರ್ವಜನಿಕರಿಂದ ಕುಂದುಕೊರತೆ ಅಹವಾಲು ಸ್ವೀಕಾರ ಹಾಗೂ ಸಭೆ ಮತ್ತು ಅಧಿಕಾರಿಗಳೊಂದಿಗೆ ನಿಗಮದ ವಿವಿಧ ಯೋಜನೆಗಳಡಿ ಕಲ್ಪಿಸಿದ ಸೌಲಭ್ಯಗಳ ಕುರಿತು ಯಾದಗಿರಿ ಜಿ.ಪಂ ಸಭಾಂಗಣದಲ್ಲಿ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಜನಾಂಗ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.