ಸಾರಾಂಶ
ಶಿವಮೊಗ್ಗ: ಇಂದಿನ ಆಧುನಿಕ ಯುಗದಲ್ಲಿ ಸೇವೆಯ ಸ್ವರೂಪ ಬದಲಾಗುತ್ತಿದ್ದು, ಸೇವೆ ಕೂಡ ಕಾರ್ಪೋರೇಟ್ ನತ್ತ ವಾಲುತ್ತಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹೇಳಿದರು.
ಇಲ್ಲಿನ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಕುವೆಂಪು ವಿವಿ ಮಟ್ಟದ ಅಂತರ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸೇವೆ ಎಂಬ ನಿಸ್ವಾರ್ಥದ ಪದ ಇಂದು ಸ್ವಾರ್ಥದತ್ತ ಸಾಗುತ್ತಿರುವುದು ವಿಷಾದನೀಯ. ಈ ಬಿಕ್ಕಟ್ಟುಗಳಿಂದ ಸೇವೆ ಬಿಡಿಸಿಕೊಳ್ಳಬೇಕಾಗಿದೆ ಎಂದರು.ಖಾಸಗೀಕರಣದ ಬಿರುಗಾಳಿಗೆ ಸಾರ್ವಜನಿಕ ವಿದ್ಯಾಸಂಸ್ಥೆಗಳು ಕುಬ್ಜಗೊಳ್ಳತೊಡಗಿವೆ. ಇಂತಹ ತಲ್ಲಣಗಳ ನಡುವೆ ಎನ್ಎಸ್ಎಸ್ ಶಿಬಿರಗಳು ಚಿಲುಮೆಯಂತೆ ಕೆಲಸ ಮಾಡಬೇಕು. ಜನರಲ್ಲಿ ಜಾಗೃತಗೊಳಿಸಬೇಕು. ಮುಖ್ಯವಾಗಿ ಪರಿಸರ ಕಾಳಜಿ ವಹಿಸಬೇಕು ಎಂದು ಹೇಳಿದರು.
ವಿಕಸಿತ ಭಾರತ ಕಸದ ತೊಟ್ಟಿಲುಗಳನ್ನು ಸೃಷ್ಟಿಸುವಂತಾಗಬಾರದು. ಇಂದು ಅಭಿವೃದ್ಧಿಯ ಹೆಸರಿನಲ್ಲಿ ಎಲ್ಲಾ ಹಳ್ಳಿ ಮತ್ತು ಪಟ್ಟಣಗಳು ಕಸಗಳಿಂದ ತುಂಬಿ ಹೋಗಿವೆ. ಪ್ಲಾಸ್ಟಿಕ್ ಹಾವಳಿ ಮಿತಿ ಮೀರಿದೆ. ಕಸ ತೆಗೆದರೆ ಮಾತ್ರ ಸಾಲದು, ಕಸ ಹಾಕದೇ ಇರುವಂತಹ ವಾತಾವರಣವನ್ನು ನಾವು ಸೃಷ್ಟಿಸಬೇಕಾಗಿದೆ. ಎನ್.ಎಸ್.ಎಸ್. ವಿದ್ಯಾರ್ಥಿಗಳು ಶಿಬಿರದ ಮೂಲಕ ಈ ಜವಾಬ್ದಾರಿ ನಿರ್ವಹಿಸಲಿ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಅವಿನಾಶ್.ಟಿ ಮಾತನಾಡಿ, ಮನುಷ್ಯ ಸ್ವಾರ್ಥನಾಗುತ್ತಿರುವ ವರ್ತಮಾನದ ಈ ಹೊತ್ತಿನಲ್ಲಿ ಎನ್ಎಸ್ಎಸ್ ನಂತಹ ಶಿಬಿರಗಳು ಸಮುದಾಯದಲ್ಲಿ ಪ್ರೀತಿ, ವಿಶ್ವಾಸ ಮತ್ತು ಮನುಷ್ಯ ಸಂಬಂಧಗಳನ್ನು ಬೆಸೆಯುವ ಕೆಲಸ ಮಾಡಬೇಕಾಗಿದೆ. ಎನ್ಎಸ್ಎಸ್ ಗಾಂಧೀಜಿ ತತ್ವಗಳ ಆದರ್ಶದಲ್ಲಿ ಬೆಳೆಯುತ್ತಿದೆ. ಚಿಕ್ಕದೂ ಸಹ ಶ್ರೇಷ್ಠತೆಯನ್ನು ಇಲ್ಲಿ ಕಂಡುಕೊಳ್ಳುತ್ತದೆ ಎಂದು ಹೇಳಿದರು.
ಸಹ್ಯಾದ್ರಿ ಕಾಲೇಜಿಗೆ ತನ್ನದೇ ಆದ ಇತಿಹಾಸವಿದೆ. ಇದು ಎಲ್ಲಾ ಕ್ಷೇತ್ರಗಳನ್ನು ಬೆಳೆಸಿದ ತವರುಮನೆಯಾಗಿದೆ. ಇಂತಹ ಸಾಂಸ್ಕೃತಿಕ, ಐತಿಹಾಸಿಕ ಕಾಲೇಜಿನಲ್ಲಿ ಈ ಶಿಬಿರ ನಡೆಯುತ್ತಿದ್ದು, ಸುಮಾರು 50 ಕಾಲೇಜುಗಳಿಂದ 150 ವಿದ್ಯಾರ್ಥಿಗಳು ಇಲ್ಲಿಗೆ ಬಂದಿದ್ದಾರೆ. ಈ ವಾತಾವರಣದಲ್ಲಿ ಅವರೆಲ್ಲರೂ ಮಲೆನಾಡಿನ ಪ್ರೀತಿಯನ್ನು, ಸಹ್ಯಾದ್ರಿ ಕಾಲೇಜಿನ ಮಮತೆಯನ್ನು ಮತ್ತು ಎನ್ಎಸ್ಎಸ್ ಶಿಬಿರದ ಆದರ್ಶಗಳನ್ನು ಮೆರೆಯಲಿ ಎಂದರು.ಕುವೆಂಪು ವಿವಿ ಸಂಯೋಜನಾಧಿಕಾರಿ ಡಾ.ಶುಭಾ ಮರವಂತೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುವೆಂಪು ವಿವಿ ಕುಲಸಚಿವ (ಪರೀಕ್ಷಾಂಗ) ಪ್ರೊ.ಎಸ್.ಎಂ.ಗೋಪಿನಾಥ್ ಶಿಬಿರಕ್ಕೆ ಶುಭಾಶಯ ಹೇಳಿದರು.
ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ.ಪ್ರಕಾಶ್ ಮರ್ಗನಳ್ಳಿ, ಎಂ. ಪರಶುರಾಮ್, ಪ್ರಾಧ್ಯಾಪಕರಾದ ಡಾ.ಕುಂದನ್ ಬಸವರಾಜ್, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಎ.ಶಿವಮೂರ್ತಿ ಮತ್ತಿತರರು ಇದ್ದರು.