ಸಾರಾಂಶ
ಕಾರವಾರ: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಕಣ್ಮರೆಯಾಗಿರುವ ಸ್ಥಳೀಯರಾದ ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಅವರ ದೇಹವನ್ನು ಪತ್ತೆ ಹಚ್ಚುವ ತನಕ ಕಾರ್ಯಾಚರಣೆಯನ್ನು ಮುಂದುವರಿಸಬೇಕು ಎಂದು ಜಿಲ್ಲಾ ಆಡಳಿತ ಹಾಗೂ ಶಾಸಕರನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ವಿನಂತಿಸಿದ್ದಾರೆ.
ದುರಂತದಲ್ಲಿ ಕಣ್ಮರೆಯಾದ ಕೇರಳದ ಲಾರಿ ಚಾಲಕ ಅರ್ಜುನ ಮೃತದೇಹವನ್ನು ಪತ್ತೆ ಹಚ್ಚಿರುವುದು ಪ್ರಶಂಸಾರ್ಹ ಕಾರ್ಯವಾಗಿದೆ. ಆದರೆ ಅದೇ ಇಚ್ಛಾಶಕ್ತಿಯನ್ನು ಸ್ಥಳೀಯರಾದ ಜಗನ್ನಾಥ ನಾಯ್ಕ ಅವರ ದೇಹವನ್ನು ಪತ್ತೆ ಹಚ್ಚುವಲ್ಲಿ ಪ್ರದರ್ಶಿಸಬೇಕಾಗಿದೆ.ಕೇರಳದ ಲಾರಿ ಚಾಲಕ ಅರ್ಜುನ ಮೃತದೇಹ ಪತ್ತೆಯಾದ ತರುವಾಯ ಕಾರ್ಯಾಚರಣೆ ಸ್ಥಗಿತಗೊಂಡಿರುವುದು ಕಣ್ಮರೆಯಾದ ಕುಟುಂಬದವರು ಹಾಗೂ ಸ್ಥಳೀಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಪ್ರತಿಯೊಬ್ಬರ ಜೀವವೂ ಅಮೂಲ್ಯವಾದುದು. ಅದರಲ್ಲೂ ನಾಪತ್ತೆಯಾದ ಇಬ್ಬರ ಕುಟುಂಬದವರು ಕಣ್ಣೀರು ಸುರಿಸುತ್ತಿದ್ದಾರೆ. ಅವರ ನೋವನ್ನು ಅರ್ಥಮಾಡಿಕೊಂಡು ಕಾರ್ಯಾಚರಣೆ ಮುಂದುವರಿಸಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ.
ಇಷ್ಟು ದಿನಗಳ ಕಾಲ ಪತ್ತೆಕಾರ್ಯವನ್ನು ಕೈಗೊಂಡಿರುವುದಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿರುವಾಗಲೆ ಈಗ ಏಕಾಏಕಿ ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ನದಿಯಲ್ಲಿ ನೀರಿನ ಮಟ್ಟ ಕಡಿಮೆ ಇದ್ದರೆ ಪರ್ಯಾಯ ಕ್ರಮವನ್ನು ಕೈಗೊಳ್ಳಬೇಕೆ ಹೊರತೂ ಕಾರ್ಯಾಚರಣೆಯಿಂದ ವಿಮುಖವಾಗಬಾರದು ಎಂದು ರೂಪಾಲಿ ಎಸ್. ನಾಯ್ಕ ವಿನಂತಿಸಿದ್ದಾರೆ.ಶಿರೂರು ದುರಂತದಲ್ಲಿ ಕಣ್ಮರೆಯಾದ ಎಲ್ಲರ ಪತ್ತೆ ಆಗುವ ತನಕ ಶೋಧ ಕಾರ್ಯಾಚರಣೆ ಮುಂದುವರಿಸಬೇಕು. ಆ ಮೂಲಕ ನಾಪತ್ತೆಯಾದ ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಹಾಗೂ ಗಂಗಾವಳಿ ನದಿಯಲ್ಲಿ ಅಪಾರ ಪ್ರಮಾಣದ ಮಣ್ಣು ರಾಶಿ ಬಿದ್ದಿದೆ. ಅದನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಮುಂದೆ ಮತ್ತೆ ಪ್ರವಾಹಕ್ಕೆ ಕಾರಣವಾಗಬಹುದು. ಹೀಗಾಗಿ ಕಣ್ಮರೆಯಾದವರ ಪತ್ತೆ ಕಾರ್ಯ ಹಾಗೂ ಮಣ್ಣು ತೆರವು ಎರಡೂ ತುರ್ತಾಗಿ ಆಗಬೇಕು ಎಂದು ಮನವಿ ಮಾಡುವುದಾಗಿ ರೂಪಾಲಿ ಎಸ್. ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.