ಸಾರಾಂಶ
ಶೋಷಿತ ಸಮುದಾಯಗಳು ಮುಖ್ಯವಾಹಿನಿಗೆ ಬರಲು ಶಿಕ್ಷಣ ಪ್ರಮುಖ ಅಸ್ತ್ರವಾಗಿದೆ ಎಂದು ರಾಜ್ಯ ಬಿಜೆಪಿ ಎಸ್‌ಟಿ ಮೋರ್ಚಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.
- ಯುವಜನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಶ್ರೀನಿವಾಸ ದಾಸಕರಿಯಪ್ಪ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಶೋಷಿತ ಸಮುದಾಯಗಳು ಮುಖ್ಯವಾಹಿನಿಗೆ ಬರಲು ಶಿಕ್ಷಣ ಪ್ರಮುಖ ಅಸ್ತ್ರವಾಗಿದೆ ಎಂದು ರಾಜ್ಯ ಬಿಜೆಪಿ ಎಸ್‌ಟಿ ಮೋರ್ಚಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಹೇಳಿದರು.ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದಲ್ಲಿ ನಡೆಯುತ್ತಿರುವ 3ನೇ ವರ್ಷದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ಎರಡನೇ ದಿನವಾದ ಶನಿವಾರ ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವ ಸಮಿತಿ ಹಾಗೂ ಶ್ರೀ ವಾಲ್ಮೀಕಿ ಪ್ರತಿಷ್ಠಾನದಿಂದ ಯುವಜನೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಾಲ್ಮೀಕಿ ಸಮುದಾಯದಲ್ಲಿ ಸಾಕಷ್ಟು ಪ್ರತಿಭಾವಂತ ಯುವಕ-ಯುವತಿಯರಿದ್ದಾರೆ. ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ ದೊರೆತಾಗ ಮಾತ್ರ ಅವರು ಮುನ್ನೆಲೆಗೆ ಬರಲು ಸಾಧ್ಯ. 3 ವರ್ಷಗಳಿಂದ ವಾಲ್ಮೀಕಿ ಪ್ರತಿಷ್ಠಾನ ಮತ್ತು ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವ ಸಮಿತಿ ಉತ್ತಮ ಕಾರ್ಯ ಕೈಗೊಂಡಿವೆ. ಮುಂಬರುವ ದಿನಗಳಲ್ಲಿ ಈ ಕಾರ್ಯಕ್ರಮವನ್ನು ಮತ್ತಷ್ಟು ವಿಜೃಂಭಣೆಯಿಂದ ಮಾಡಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.ಉಪವಿಭಾಗಾಧಿಕಾರಿ ಸಂತೋಷ್ ಕುಮಾರ ಮಾತನಾಡಿ, ಯಾವುದೇ ಸಮಾಜ ಅಭಿವೃದ್ಧಿ ಕಾಣಬೇಕಾದರೆ ಶಿಕ್ಷಣ ಅತಿ ಮುಖ್ಯ. ನಮ್ಮ ಸುತ್ತ ಈಗಲೂ ಸಮಾನತೆಗಾಗಿ ಹೋರಾಟ ನಡೆಸುತ್ತಿರುವ ಅನೇಕ ಸಮಾಜಗಳಿವೆ. ಅವುಗಳನ್ನು ಗುರುತಿಸಿ ಜೊತೆ ಜೊತೆಗೆ ಕೊಂಡೊಯ್ಯಬೇಕಿದೆ. ಮಕ್ಕಳ ಮನಸ್ಸು ಸಾಂಸ್ಕೃತಿಕ ಕಾರ್ಯಕ್ರಮಗಳತ್ತ ಆಕಷಣೆಗೊಳಿಸುವುದು ಪೋಷಕರು ಜವಾಬ್ದಾರಿ ಎಂದು ತಿಳಿಸಿದರು.
ಯುವ ಮುಖಂಡ ಜಿ.ಎಸ್.ಶ್ಯಾಮ್ ಮಾತನಾಡಿದರು. ಸಮಿತಿ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜು, ಎಪಿಎಂಸಿ ಅಧ್ಯಕ್ಷ ಅಣಜಿ ಎಸ್.ಕೆ. ಚಂದ್ರಶೇಖರ, ಪಾಲಿಕೆ ಸದಸ್ಯ ಶಿವಾನಂದ, ನಮನ ಅಕಾಡೆಮಿಯ ವಿದುಷಿ ಡಿ.ಕೆ. ಮಾಧವಿ, ವಾಣಿ ಕೇಶವನ್, ಜ್ಞಾನೇಶ್ ತ್ಯಾವಣಿಗೆ, ಕಾಂಗ್ರೆಸ್ ಮುಖಂಡ ಶಂಭಣ್ಣ, ಮೆದಿಕೆರೆ ತಿಪ್ಪೇಶಪ್ಪ, ಹರೀಶ್ ಜಗಳೂರು, ಆನಗೋಡು ಕರಿಬಸಪ್ಪ, ಗ್ರಾಪಂ ಸದಸ್ಯ ಗುಡಾಳು ಲೋಕೇಶ್, ಸರಿಗಮಪ ಕಾರ್ಯಕ್ರಮದ ಗಾಯಕಿ ಮಂಡ್ಯದ ಶ್ರೇಯಾ ಶ್ರೀನಿವಾಸ್, ರೈತ ಸಂಘದ ಮುಖಂಡರಾದ ಯರವನಾಗತಿಹಳ್ಳಿ ಪರಮೇಶ್ವರಪ್ಪ, ಪಾಮೇನಹಳ್ಳಿ ಗೌಡರ ಶೇಖರಪ್ಪ ಇತರರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. - - - -19ಕೆಡಿವಿಜಿ38ಃ:ದಾವಣಗೆರೆಯಲ್ಲಿ ಯುವಜನೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ರೀನಿವಾಸ ದಾಸಕರಿಯಪ್ಪ ಉದ್ಘಾಟಿಸಿದರು.