ಹಿಂದೂ ಧರ್ಮದ ಮೇಲಿನ ದಬ್ಬಾಳಿಕೆ ನಿಲ್ಲಲಿ

| Published : Apr 28 2025, 11:46 PM IST

ಸಾರಾಂಶ

ಜನಿವಾರ ವಿವಾದದ ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ, ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ನರಮೇಧ ಖಂಡಿಸಿ, ಕಂಪ್ಲಿ ತಾಲೂಕು ಜನಿವಾರ ಸಮುದಾಯಗಳ ಸಮಿತಿ, ಹಿಂದೂ ಸಂಘಟನೆಗಳಿಂದ ಕಂಪ್ಲಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಕಂಪ್ಲಿ: ಹಿಂದೂ ಧರ್ಮದ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ತಡೆದು ಶಾಂತಿ ಕಾಪಾಡುವಂತಹ ಕಾರ್ಯ ಸರ್ಕಾರ ಮಾಡಬೇಕು, ಇಲ್ಲದಿದ್ದಲ್ಲಿ ರಾಜ್ಯ ಸರ್ಕಾರ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿ ಅವನತಿ ಕಾಣುವುದು ನೂರಕ್ಕೆ ನೂರು ಖಚಿತ ಎಂದು ಆರ್ಯವೈಶ್ಯ ಸಮಾಜದ ಮುಖಂಡರಾದ ಡಿ. ಶ್ರೀಧರ ಶ್ರೇಷ್ಠಿ ಆಕ್ರೋಶ ಹೊರಹಾಕಿದರು. ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜನಿವಾರ ವಿವಾದದ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ, ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ನರಮೇಧ ಖಂಡಿಸಿ, ಕಂಪ್ಲಿ ತಾಲೂಕು ಜನಿವಾರ ಸಮುದಾಯಗಳ ಸಮಿತಿ, ಹಿಂದೂ ಸಂಘಟನೆಗಳಿಂದ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು. ಪರೀಕ್ಷೆಗಳಲ್ಲಿ ಜನಿವಾರ, ತಾಳಿ ಮೊದಲಾದ ಹಿಂದೂ ಧರ್ಮದ ಸಂಕೇತಗಳನ್ನು ತೆಗೆಸುವುದು ಖಂಡನೀಯ. ಹಿಂದೂಗಳ ಮೇಲಿನ ದೌರ್ಜನ್ಯವನ್ನು ನಾವು ಸಹಿಸುವುದಿಲ್ಲ. ಜನಿವಾರ ತೆಗೆಸಿದವರ ವಿರುದ್ಧ ಕಾನೂನು ಕ್ರಮ ಆಗಲೇಬೇಕು ಎಂದು ಆಗ್ರಹಿಸಿದರು.

ಚಿತ್ರಗಾರ ಸಮಾಜದ ಮುಖಂಡರಾದ ಷಣ್ಮುಖಪ್ಪ ಚಿತ್ರಗಾರ ಮಾತನಾಡಿ, ಪಹಲ್ಗಾಮ್‌ನಲ್ಲಿ ಹಿಂದೂ ಪ್ರವಾಸಿಗರ ಮೇಲಿನ ಉಗ್ರರ ದಾಳಿ ತೀವ್ರ ಖಂಡನೀಯ. ಪದೇ ಪದೇ ಭಾರತೀಯರ ತಾಳ್ಮೆ ಪರೀಕ್ಷಿಸುತ್ತಿರುವ ಪಾಪಿ ಪಾಕಿಸ್ತಾನಕ್ಕೆ ಪ್ರಧಾನಿಗಳು ತಕ್ಕ ಪಾಠ ಕಲಿಸಬೇಕು. ಉಗ್ರರ ಸಂಘಟನೆಗಳನ್ನು ಬೇರುಸಮೇತ ಕಿತ್ತೆಸೆದು ಜಗತ್ತಿನಲ್ಲಿ ಶಾಂತಿ ನೆಲೆಸುವ ಕಾರ್ಯ ಮಾಡಬೇಕು ಎಂದು ಆಗ್ರಹಿಸಿದರು.

ಇದಕ್ಕೂ ಮುನ್ನಾ ಶ್ರೀ ಉದ್ಭವ ಮಹಾಗಣಪತಿ ದೇವಸ್ಥಾನ ಬಳಿ ವೀರಶೈವ ಸಮುದಾಯದ ಮುಖಂಡ ಅರವಿ ಬಸವನಗೌಡ ಮಾತನಾಡಿ, ಸಮಸ್ತ ಹಿಂದೂಗಳು ಭೇದ ಮರೆತು ಸರ್ವ ಸಂಘಟಿತರಾಗಬೇಕು. ಹಿಂದೂಗಳೆಲ್ಲ ಸಂಘಟಿತರಾದಲ್ಲಿ ಮಾತ್ರ ದುಷ್ಟಶಕ್ತಿಗಳನ್ನು ಮೆಟ್ಟಿನಿಲ್ಲಲು ಸಾಧ್ಯ ಎಂದು ಹೇಳಿದರು.

ಇಲ್ಲಿನ ಶ್ರೀ ಉದ್ಭವ ಮಹಾ ಗಣಪತಿ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ರ‍್ಯಾಲಿ ಡಾ. ರಾಜಕುಮಾರ್ ರಸ್ತೆ ಮಾರ್ಗವಾಗಿ ಸಂಚರಿಸಿ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಿತು. ಬಳಿಕ ಗ್ರೇಡ್-2 ತಹಸೀಲ್ದಾರ್ ಎಂ.ಆರ್. ಷಣ್ಮುಖ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಿ. ಗೋಪಾಲಕೃಷ್ಣ, ಆರ್ಯವೈಶ್ಯ ಸಮಾಜದ ಅಧ್ಯಕ್ಷ ಡಿ.ವಿ. ಸುಬ್ಬಾರಾವ್, ಸೋಮವಂಶ ಆರ್ಯಕ್ಷತ್ರಿಯ ಸಮಾಜದ ಅಧ್ಯಕ್ಷ ಮಾರುತಿ ಚಿತ್ರಗಾರ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಡಿ.ಎ. ರುದ್ರಪ್ಪಾಚಾರ್, ಮುಖಂಡರಾದ ಮೌನೇಶ್, ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಜಗದೀಶ ರಾಯ್ಕರ್, ರಜಪೂತ ಸಮಾಜದ ಅಧ್ಯಕ್ಷ ಕೆ. ಇಂದ್ರಜಿತ್‌ಸಿಂಗ್, ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಪಿ. ವಿಶ್ವನಾಥ, ದೇವಾಂಗ ಸಮಾಜದ ಉಪಾಧ್ಯಕ್ಷ ಎಸ್. ತುಳಸಿರಾಮಚಂದ್ರ, ಪದ್ಮಶಾಲಿ ಸಮಾಜದ ಅಧ್ಯಕ್ಷ ಪಿ. ಬ್ರಹ್ಮಯ್ಯ, ಗೊಂದಳಿ ಸಮಾಜದ ಅಧ್ಯಕ್ಷ ಎಂ. ನಾಗರಾಜ, ಮರಾಠ ಸಮಾಜದ ಅಧ್ಯಕ್ಷ ಗಣೇಶ, ಸ್ವಕುಳಸಾಳಿ ಸಮಾಜದ ಅಧ್ಯಕ್ಷ ಅಂಜಿನಪ್ಪ, ಕ್ಷತ್ರಿಯ ಸಮಾಜದ ಅಧ್ಯಕ್ಷ ಡಾ. ರಾಮರಾಜು, ಬಲಿಜ ಸಮಾಜದ ಕಾರ್ಯದರ್ಶಿ ನಾರಾಯಣಪ್ಪ ಇಂಗಳಗಿ ಹಾಗೂ ನಾನಾ ಸಮುದಾಯಗಳ ಪ್ರಮುಖರಿದ್ದರು.