ಸಂಘ ಸಂಸ್ಥೆಗಳು ಸಮಾಜಮುಖಿ ಕೆಲಸ ಮಾಡಲಿ: ಚೆನ್ನಬಸ್ಸು

| Published : Jun 25 2024, 12:39 AM IST

ಸಾರಾಂಶ

ಶಹಾಪುರ ನಗರದ ಜ್ಞಾನಗಂಗೋತ್ರಿ ಶಾಲೆಯಲ್ಲಿ ಡಾ.ಗಂಗಾಧರ ಮಹಾಸ್ವಾಮಿಗಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಳಿಸಗರ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಶಹಾಪುರ

ಸಂಘ ಸಂಸ್ಥೆಗಳು ದೈನಂದಿನ ಚಟುವಟಿಕೆಗಳೊಂದಿಗೆ ಸಮಾಜ ಮುಖಿಯಾಗಿ ಕೆಲಸ ಮಾಡಿದರೆ ಸಮಾಜದಲ್ಲಿ ಉತ್ತಮ ಏಳಿಗೆ ಕಾಣುತ್ತದೆ. ಸರ್ವ ರೀತಿಯ ಅವಕಾಶಗಳನ್ನು ಪಡೆದುಕೊಂಡು, ಉತ್ತಮ ಕಾರ್ಯದ ಮೂಲಕ ಶ್ರೇಯಸ್ಸು ಗಳಿಸಲಿ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಆರ್. ಚೆನ್ನಬಸ್ಸು ವಕೀಲರು ತಿಳಿಸಿದರು.

ನಗರದ ಹಳೆಪೇಟೆಯ ಜ್ಞಾನಗಂಗೋತ್ರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಡಾ.ಗಂಗಾಧರ ಮಹಾಸ್ವಾಮಿಗಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯ ಚಟುವಟಿಕೆ ಮತ್ತು ಯೋಗ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘ-ಸಂಸ್ಥೆಗಳು ಹುಟ್ಟಿಕೊಳ್ಳದೆ, ಸಮಾಜಮುಖಿ ಕಾರ್ಯಗಳನ್ನು ಮಾಡಲು ಹುಟ್ಟಿಕೊಳ್ಳಬೇಕು. ಚಂದ್ರಶೇಖರ ಕಟ್ಟಿಮನಿಯವರ ನೇತೃತ್ವದಲ್ಲಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಸಮಾಜದ ಸಹಕಾರ ಪಡೆದು ಉತ್ತಮ ಕಾರ್ಯ ಮಾಡುತ್ತಿದ್ದು, ಒಳ್ಳೆಯ ಕಾರ್ಯ ಹೀಗೆ ಮುಂದುವರಿಯಲಿ ಎಂದರು.

ಹಿರಿಯ ಮುಖಂಡ ಸಣ್ಣ ನಿಂಗಣ್ಣ ನಾಯ್ಕೋಡಿ ಮಾತನಾಡಿ, ಜ್ಞಾನ ಗಂಗೋತ್ರಿ ಶಾಲೆಯು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದು, ಇಲ್ಲಿನ ಮಕ್ಕಳ ಶ್ರೇಯೋಭಿವೃದ್ಧಿಗೆ ಸರ್ವರು ಶ್ರಮಿಸೋಣ ಎಂದರು.

ಹಿರಿಯರಾದ ವಾಸುದೇವಾಚಾರ್ಯ ಸಗರ, ಅಧ್ಯಕ್ಷ ಶರಣು ಬಿರಾದಾರ, ಮುರಳೀಧರ ಕುಲಕರ್ಣಿ, ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಕಟ್ಟಿಮನಿ, ಕಾರ್ಯದರ್ಶಿ ಜಿ. ಹಣುಮಂತಿ, ರೊಟ್ನಡಗಿ, ಪತ್ರಕರ್ತರಾದ ಈರಣ್ಣ ಹಾದಿಮನಿ, ರಾಜಶೇಖರ, ಭೀಮರಾಯ ದೊಡ್ಮನಿ, ಹಳಿಸಗರ, ಮಲ್ಲಿಕಾರ್ಜುನ ಹಳಿಸಗರ, ಪರಶುರಾಮ ಹಳಿಸಗರ, ನಾಗರಾಜ ಪತ್ತಾರ, ನಾರಾಯಣಾಚಾರ್ಯ ಸಗರ ಸೇರಿದಂತೆ ಇತರರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.